ಗಣಪತಿಯನ್ನು ವಿರೋಧಿಸುವ ತಾಕತ್ತು ಯಾರಿಗೂ ಇಲ್ಲ ಎಂದ ಪ್ರಭಾಕರ್ ಭಟ್

Prasthutha|

ವಿರೋಧಗಳ ನಡುವೆ ಮಂಗಳೂರು ವಿವಿಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ

- Advertisement -

ಮಂಗಳೂರು: ಗಣಪತಿಯನ್ನು ವಿರೋಧಿಸುವ ತಾಕತ್ತು ಯಾರಿಗೂ ಇಲ್ಲ ಎಂದು ಆರ್​ಎಸ್​ಎಸ್​ ಮುಖಂಡ, ಪ್ರಚೋದನಕಾರಿ ಭಾಷಣಗಾರ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದ್ದಾರೆ.

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಗಣೇಶೋತ್ಸವಕ್ಕೆ ವಿರೋಧ ವ್ಯಕ್ತವಾಗಿದ್ದರೂ ಇಂದು ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ.

- Advertisement -

ವಿವಿಯಲ್ಲಿ ನಡೆದ ಗಣೇಶೋತ್ಸವದಲ್ಲಿ ಪ್ರಭಾಕರ್ ಭಟ್ ಸೇರಿದಂತೆ ಸಂಘಪರಿವಾರದ ಮುಖಂಡರು ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಪ್ರಭಾಕರ್ ಭಟ್, ಯಾವುದೇ ಸರ್ಕಾರಗಳು ದೇವರ ಪೂಜೆಗೆ ಅಡ್ಡಿ ಮಾಡಬಾರದು ಎಂದರು.

ಗಣೇಶೋತ್ಸವ ಬಳಿಕ ಮಾತನಾಡಿದ ಅವರು, ನಾಲ್ಕೈದು ವರ್ಷಗಳಿಂದ ವಿಶ್ವವಿದ್ಯಾಲಯದಲ್ಲಿ ಗಣೇಶನ ಪೂಜೆ ಆಗುತ್ತಿತ್ತು. ಒಂದು ಸ್ವಲ್ಪ ವ್ಯತ್ಯಾಸ ಆದರೂ ಮತ್ತೆ ಇಲ್ಲಿ ವಿನಾಯಕನ ಪೂಜೆ ಆಗಿದೆ. ಈ ವಿಚಾರದಲ್ಲಿ ವಿಸಿ ಜಯರಾಜ್ ಅಮೀನ್ ಮತ್ತು ರಿಜಿಸ್ಟ್ರಾರ್ ರಾಜುಗೆ ನೂರು ನಮನಗಳು ಎಂದರು.

ಯಾವುದೇ ಗೊಂದಲ, ನೋವಾಗದಂತೆ ಜಯರಾಜ್ ಅಮೀನ್ ಅವರೇ ಪೂಜೆಯಲ್ಲಿ ಕುಳಿತಿದ್ದಾರೆ. ಆದರೆ ಇಲ್ಲಿ ಗಣೇಶ ಮೂರ್ತಿ ಸ್ವಲ್ಪ ಸಣ್ಣದಾಗಿದೆ. ಯಕ್ಷಗಾನದ ರೀತಿ ಕಿರೀಟ ಎದುರಿಗಿಟ್ಟು ಪೂಜೆ ಆಗಿದೆ. ಮುಂದಿನ ಬಾರಿ ಕಿರೀಟ ಗಣಪತಿ ತಲೆಯ ಮೇಲೆಯೇ ಇರಲಿ. ನಮ್ಮ ನಂಬಿಕೆ ಪ್ರಕಾರ ಗಣಪತಿ ಎತ್ತರಕ್ಕೆ ಏರಬೇಕು. ವಿಸಿಯವರ ಸಹಕಾರ ಮತ್ತು ನಂಬಿಕೆ ಭಾರೀ ದೊಡ್ಡದು. ಅವರ ನಂಬಿಕೆ ಮತ್ತು ಸಂಸ್ಕೃತಿಯ ಕಾರಣಕ್ಕೆ ಸುಸೂತ್ರವಾಗಿ ನಡೆದಿದೆ ಎಂದರು.

ಗಣಪತಿಗೆ ವಿರೋಧ ಮಾಡುವ ತಾಕತ್ತು ಯಾರಿಗೂ ಇಲ್ಲ. ಗಣಪತಿ ಮೇಲೆ ನಂಬಿಕೆ ಇಟ್ಟವರು ಯಾರೂ ವಿರೋಧ ಮಾಡಲ್ಲ. ಈ ದೃಷ್ಟಿಕೋನ ಸರ್ಕಾರದಲ್ಲಿ ನಿತ್ಯ ನಿರಂತರ ಇರಲಿ. ಯಾವುದೇ ಸರ್ಕಾರಗಳು ಬಂದರೂ ದೇವರ ಪೂಜೆಗೆ ಅಡ್ಡಿ ಮಾಡಬಾರದು ಎಂದರು.

ಸಂಘಪರಿವಾರದ ಮುಖಂಡರ ಜೊತೆಗೇ ಪೂಜೆ ನೆರವೇರಿಸಿದ ವಿಶ್ವವಿದ್ಯಾಲಯದ ಉಪಕುಲಪತಿ

ಮಂಗಳೂರು ವಿವಿ ಮಂಗಳಾ ಆಡಿಟೋರಿಯಂನಲ್ಲಿ ಪ್ರತಿಷ್ಠಾಪಿಸಿದ ಗಣಪತಿಗೆ ವಿಶ್ವವಿದ್ಯಾಲಯದ ಉಪಕುಲಪತಿ ಜಯರಾಜ್ ಅಮೀನ್ ಅವರು ಸಂಘಪರಿವಾರದ ಮುಖಂಡರ ಜೊತೆಗೇ ಪೂಜೆ ನೆರವೇರಿಸಿದರು. ಈ ವೇಳೆ ಆರ್​ಎಸ್​ಎಸ್​ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್,‌ ಶಾಸಕ ಡಾ.ಭರತ್ ಶೆಟ್ಟಿ ಜೊತೆಗೂಡಿ ಪೂಜೆ ನೆರವೇರಿಸಿದರು. ಮಂಗಳೂರು ವಿವಿ ರಿಜಿಸ್ಟ್ರಾರ್ ರಾಜು ಸಹಿತ ಸಿಬ್ಬಂದಿ ಭಾಗಿಯಾದರು.



Join Whatsapp