ನಿಮ್ಮ ‘ಕಾನೂನು ವಾಪ್ಸಿ’ಯಾಗದೆ ನಾವು ‘ಘರ್ ವಾಪ್ಸಿ’ ಆಗಲಾರೆವು: 8ನೆ ಸುತ್ತಿನ ಮಾತುಕತೆಯಲ್ಲಿ ರೈತರು

Prasthutha|

ಹೊಸದಿಲ್ಲಿ: ಸರಕಾರ ಮತ್ತು ಪ್ರತಿಭಟನಾ ನಿರತ ರೈತರ ಮಧ್ಯೆ ಕಗ್ಗಂಟು ನಿವಾರಣೆಗೆ ಸಂಬಂಧಿಸಿದಂತೆ ಎಂಟನೆ ಸುತ್ತಿನ ಮಾತುಕತೆ ಹೆಚ್ಚೇನೂ ಪ್ರಗತಿ ಕಂಡಿಲ್ಲ. ಮೂಲಗಳ ಪ್ರಕಾರ ಕಾನೂನು ಕೇವಲ ಪಂಜಾಬ್ ಮತ್ತು ಹರಿಯಾಣಕ್ಕೆ ಮಾತ್ರವಲ್ಲ ಇಡೀ ರಾಷ್ಟ್ರವನ್ನು ಗುರಿಯಾಗಿಸಿ ಸಿದ್ಧಪಡಿಸಲಾಗಿದೆಯೆಂದು ಕೇಂದ್ರ ಸಚಿವರು ಹೇಳಿದ್ದಾರೆ. ರಾಜ್ಯಗಳು ತಮ್ಮದೇ ಕಾನೂನುಗಳನ್ನು ಅಸ್ತಿತ್ವಕ್ಕೆ ತರಲಿ ಎಂಬ ತಮ್ಮ ಬೇಡಿಕೆಯಲ್ಲಿ ವಿರೋಧಿ ಪಕ್ಷವು ಗಟ್ಟಿಯಾಗಿ ನಿಂತುಕೊಂಡಿದೆ. ಮುಂದಿನ ಸುತ್ತಿನ ಮಾತುಕತೆ ಜನವರಿ 15ರಂದು ನಡೆಯಲಿದೆ.

- Advertisement -

“ಕಾನೂನುಗಳ ಕುರಿತು ಚರ್ಚೆ ನಡೆದಿದೆ. ಆದರೆ ನಿರ್ಣಯ ತೆಗೆದುಕೊಳ್ಳಲಾಗಿಲ್ಲ. ಕಾನೂನು ಹಿಂಪಡೆಯುವುದನ್ನು ಬಿಟ್ಟು ಇತರ ಆಯ್ಕೆಯನ್ನು ರೈತ ಒಕ್ಕೂಟಗಳು ನೀಡಿದರೆ ತಾನು ಪರಿಗಣಿಸುವುದಾಗಿ ಸರಕಾರ ಹೇಳಿದೆ. ಹಾಗಾಗಿ ಸಭೆಯು ಕೊನೆಗೊಂಡಿದೆ ಮತ್ತು ಜನವರಿ 15ರಂದು ಮುಂದಿನ ಸಭೆ ನಡೆಸಲು ತೀರ್ಮಾನಿಸಲಾಗಿದೆ” ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ಥೋಮರ್ ಹೇಳಿರುವುದಾಗಿ ಎ.ಎನ್.ಐ ಸುದ್ದಿ ಸಂಸ್ಥೆ ಉಲ್ಲೇಖಿಸಿದೆ.

ತನ್ಮಧ್ಯೆ ಪ್ರತಿಭಟನಾ ನಿರತ ರೈತರು ಕಾನೂನುಗಳ ಕುರಿತ ತಮ್ಮ ನಿಲುವನ್ನು ಕಠಿಣಗೊಳಿಸಿದ್ದಾರೆ.

- Advertisement -

“ನೀವು ‘ಕಾನೂನು ವಾಪ್ಸಿ’ ಮಾಡಿದರಷ್ಟೇ ನಮ್ಮ ‘ಘರ್ ವಾಪ್ಸಿ’ ಆಗಲಿದೆ” ಎಂದು ಓರ್ವ ಪ್ರತಿಭಟನಾ ನಿರತ ರೈತ ನಾಯಕ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

ಹಲವು ಸುಪ್ರೀಂ ಕೋರ್ಟ್ ಆದೇಶಗಳು ಕೃಷಿಯನ್ನು ರಾಜ್ಯ ಪಟ್ಟಿಯ ವಿಷಯವೆಂದು ನಿರ್ಣಯಿಸಿರುವುದರಿಂದ  ಕೃಷಿ ವಿಷಯಗಳಲ್ಲಿ ಕೇಂದ್ರ ಹಸ್ತಕ್ಷೇಪ ಮಾಡಬಾರದು ಎಂದು ಇನ್ನೋರ್ವ ರೈತ ನಾಯಕ ಆಗ್ರಹಿಸಿದ್ದಾರೆ.

“ಮಾತುಕತೆಗಳು ಹಲವು ದಿನಗಳಿಂದ ನಡೆಯುತ್ತಿದೆ. ನೀವು (ಸರಕಾರ) ಸಮಸ್ಯೆಯನ್ನು ಬಗೆರಿಹರಿಸಲು ಬಯಸುವುದಿಲ್ಲವೆಂದು ತೋರುತ್ತದೆ. ಹಾಗಾಗಿದ್ದರೆ ನಮಗೆ ಸ್ಪಷ್ಟ ಉತ್ತರವನ್ನು ನೀಡಿರಿ ಮತ್ತು ನಾವು ಹೋಗುತ್ತೇವೆ. ಪ್ರತಿಯೊಬ್ಬರ ಸಮಯವನ್ನು ಯಾಕಾಗಿ ವ್ಯರ್ಥ ಮಾಡಾಬೇಕು” ಎಂದು ಅವರು ಹೇಳಿರುವುದಾಗಿ ಎಂದು ಪಿಟಿಐ ವರದಿ ಮಾಡಿದೆ.

‘ನಾವು ಸಾಧಿಸುತ್ತೇವೆ ಅಥವಾ ಸಾಯುತ್ತೇವೆ’ ಎಂಬ ಸಂದೇಶ ಹೊತ್ತ ಪ್ಲೇಕಾರ್ಡ್ ಗಳನ್ನು ಕೆಲವು ರೈತರು ಸಭೆಯಲ್ಲಿ ಪ್ರದರ್ಶಿಸಿದ್ದಾರೆ.

ತನಗೆ ಕಾನೂನನ್ನು ಹಿಂಪಡೆಯುವುದು ಸಾಧ್ಯವಿಲ್ಲ ಮತ್ತು ಹಿಂಪಡೆಯುವುದಿಲ್ಲ ಎಂದು ಸರಕಾರ ಹೇಳಿದೆ ಎಂದು ಸಭೆಯಲ್ಲಿ ಭಾಗವಹಿಸಿದ್ದ ಆಲ್ ಇಂಡಿಯಾ ಕಿಸಾನ್ ಸಂಘರ್ಷ ಸಂಯೋಜನಾ ಸಮಿತಿ ಸದಸ್ಯೆ ಕವಿತಾ ಕುರುಗಂಟಿ ಹೇಳಿದ್ದಾರೆ.



Join Whatsapp