ಬೆಂಗಳೂರು : ‘ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ನೂತನ ಅಧ್ಯಕ್ಷರಾಗಿ ಅಬ್ದುಲ್ ಜಬ್ಬಾರ್ ಅವರನ್ನು ನೇಮಕ ಮಾಡಲಾಗಿದೆ. ಜಬ್ಬಾರ್ ಅವರು 10 ವರ್ಷಗಳ ಕಾಲ ದಾವಣಗೆರೆ ಜಿಲ್ಲಾ ಅಧ್ಯಕ್ಷರಾಗಿ, ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದು, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ರಾಷ್ಟ್ರೀಯ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಇಮ್ರನ್ ಪ್ರತಾಪ್ ಗರ್ಹಿ ಅವರು ಜಬ್ಬಾರ್ ಅವರನ್ನು ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ನೇಮಿಸಿದ್ದಾರೆ. ಜಬ್ಬಾರ್ ಅವರು ಇದೇ 16ರಂದು ಅರಮನೆ ಮೈದಾನದ ನಲಪಾಡ್ ಪೆವಿಲಿಯನ್ ನಲ್ಲಿ ಅಧಿಕಾರ ಸ್ವೀಕಾರ ಮಾಡಲಿದ್ದು, ಈ ಕಾರ್ಯಕ್ರಮಕ್ಕೆ ರಾಜ್ಯದ ಎಲ್ಲ ಜಿಲ್ಲೆಗಳಿಂದ ಪಕ್ಷದ ನಾಯಕರು, ಕಾರ್ಯಕರ್ತರು ಆಗಮಿಸಲಿದ್ದಾರೆ ಎಂದು ಶಾಸಕ ಎನ್.ಎ ಹ್ಯಾರಿಸ್ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದ್ಯ ಜಾತಿ ಹಾಗೂ ಧರ್ಮದ ಮೇಲೆ ಯಾವ ರೀತಿಯ ರಾಜಕಾರಣ ನಡೆಯುತ್ತಿದೆ ಎಂದು ನಾವು ನೋಡುತ್ತಿದ್ದೇವೆ. ಜಾತ್ಯತೀತ ರಾಜಕಾರಣಕ್ಕಾಗಿ ಎಲ್ಲ ಸಮಾಜಕ್ಕೆ ಆದ್ಯತೆ ನೀಡಲು ಕಾಂಗ್ರೆಸ್ ಪಕ್ಷ ಈ ಘಟಕವನ್ನು ಸ್ಥಾಪಿಸಿದೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಅಲ್ಪಸಂಖ್ಯಾತ ಘಟಕವನ್ನು ಮತ್ತಷ್ಟು ಬಲಪಡಿಸಲು ಕಾರ್ಯಕ್ರಮ ರೂಪಿಸುತ್ತೇವೆ ಎಂದರು.
ಕಾಂಗ್ರೆಸ್ ಅಲ್ಪಸಂಖ್ಯಾತರು, ದಲಿತರು, ಕೆಳ ಹಂತದಲ್ಲಿರುವ ಸಮಾಜದವರನ್ನು ಕೈ ಹಿಡಿದು ಮೇಲೆತ್ತಲು ಶ್ರಮಿಸುತ್ತಲೇ ಬಂದಿದೆ. ಕಾಂಗ್ರೆಸ್ ಪಕ್ಷ ಈ ಸಮುದಾಯದ ಪರವಾಗಿ ಹೋರಾಡುತ್ತಿದೆ. ಈ ಸಮುದಾಯವನ್ನು ನಿರ್ಲಕ್ಷಿಸುತ್ತಿರುವ ಸರ್ಕಾರದ ವಿರುದ್ಧ ದೊಡ್ಡ ಹೋರಾಟದ ಮೂಲಕ ಜಾತ್ಯತೀತವಾಗಿ ಎಲ್ಲರನ್ನು ಒಟ್ಟಾಗಿ ಸೇರಿಸಿ ಪಕ್ಷ ಬಲಪಡಿಸಲು ಶ್ರಮಿಸುತ್ತೇವೆ ಎಂದರು.
ನೂತನ ಅಧ್ಯಕ್ಷರಾದ ಅಬ್ದುಲ್ ಜಬ್ಬಾರ್ ಮಾತನಾಡಿ, ಸೋನಿಯಾ ಗಾಂಧಿ ಹಾಗೂ ರಾಜ್ಯ ಕಾಂಗ್ರೆಸ್ ನಾಯಕರ ಆಶೀರ್ವಾದದಿಂದ ನಾನು ರಾಜ್ಯ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷನಾಗಿ ನೇಮಕಗೊಂಡಿದ್ದೇನೆ. ಇದೇ 16ರಂದು ಬೆಳಗ್ಗೆ 10.30ಕ್ಕೆ ಅರಮನೆ ಮೈದಾನದ ನಲಪಾಡ್ ಪೆವಿಲಿಯನ್ ನಲ್ಲಿ ಅಧಿಕಾರ ಸ್ವೀಕರಿಸುತ್ತಿದ್ದೇನೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಶಾಸಕಾಂಗ ಪಕ್ಷದ ನಾಯಕರಾದ ಸಿದ್ದರಾಮಯ್ಯ, ರಾಷ್ಟ್ರೀಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್ ಮುನಿಯಪ್ಪ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಎಸ್.ಆರ್ ಪಾಟೀಲ್, ಎಐಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಇಮ್ರನ್ ಪ್ರತಪ್ ಗರ್ಹಿ ಹಾಗೂ ರಾಜ್ಯದ ಮತ್ತಿತರ ಪ್ರಮುಖ ನಾಯಕರು ಉಪಸ್ಥಿತರಿರಲಿದ್ದಾರೆ ಎಂದರು.
ನಾನು ಅಧಿಕಾರ ಸ್ವೀಕರಿಸಿದ ನಂತರ ರಾಜ್ಯಾದ್ಯಂತ ಅಲ್ಪಸಂಖ್ಯಾತರು ಕೇವಲ 7 ಕಡೆಗಳಲ್ಲಿ ಮಾತ್ರ ಆಯ್ಕೆಯಾಗಿದ್ದು, ಇಬ್ಬರು ವಿಧಾನ ಪರಿಷತ್ ಸದಸ್ಯರಾಗಿದ್ದಾರೆ. ಹೀಗಾಗಿ 224 ಕ್ಷೇತ್ರಗಳ ಇತರ ಕಡೆಗಳಲ್ಲೂ ಅಲ್ಪ ಸಂಖ್ಯಾತ ಸಮುದಾಯಕ್ಕೆ ಸೇರುವ ಕ್ರೈಸ್ತರು, ಸಿಖ್ಖರು, ಬುದ್ಧರು ಹಾಗೂ ಇತರೆ ಸಮುದಾಯದವರು ಕೂಡ ಆಯ್ಕೆಯಾಗುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಎಲ್ಲೆಲ್ಲಿ ನ್ಯೂನ್ಯತೆ ಇದೆಯೋ ಅದನ್ನು ಸರಿಪಡಿಸಲು ಶ್ರಮಿಸುತ್ತೇನೆ. ಆಮೂಲಕ ಪಕ್ಷ ಸಂಘಟನೆ ಮಾಡುತ್ತೇನೆ ಎಂದರು.
ಸಿ.ಎಂ. ಇಬ್ರಾಹಿಂ ಅವರು ಕಾಂಗ್ರೆಸ್ ಪಕ್ಷದಿಂದ ಕಾಲು ಹೊರಗಿಟ್ಟಿರುವುದಾಗಿ ಹೇಳಿಕೆ ನೀಡಿದ್ದು, ಅಲ್ಪಸಂಖ್ಯಾತರಲ್ಲೇ ಹಲವು ಗುಂಪುಗಳಾಗಿವೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಹ್ಯಾರಿಸ್ ಅವರು, ‘ಸಿ.ಎಂ ಇಬ್ರಾಹಿಂ ಅವರು ಕಾಲು ಹೊರಗಿಟ್ಟಿದ್ದಾರೋ, ಇಲ್ಲವೋ ಅದು ಅವರ ವೈಯಕ್ತಿಕ ನಿರ್ಧಾರ. ನಾವು ಅದನ್ನು ಪ್ರಶ್ನಿಸುವುದಿಲ್ಲ. ನಾವು ಎಲ್ಲರನ್ನು ಜತೆಗೂಡಿಸುವ ಕೆಲಸ ಮಾಡುತ್ತೇವೆ. ಸದ್ಯ ಪಕ್ಷದಲ್ಲಿ ನಾವು ಎಲ್ಲರೂ ಜತೆಯಾಗಿದ್ದೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಬೇಕಾದರೂ ತಮ್ಮ ಅಭಿಪ್ರಾಯ, ಅಸಮಾಧಾನ ಹೊರಹಾಕಬಹುದು. ಪಕ್ಷದಲ್ಲಿ ಅಲ್ಪಸಂಖ್ಯಾತರ ವಿಚಾರವಾಗಿ ತಿರ್ಮಾನ ಕೈಗೊಳ್ಳಲು ಅದಕ್ಕೆ ಆದ ಘಟಕವಿದೆ. ನಾವು ಇಬ್ರಾಹಿಂ ಅವರ ಜತೆ ಮಾತನಾಡುತ್ತಿದ್ದೇವೆ. ಜಬ್ಬಾರ್ ಅವರು ಕೂಡ ಅವರ ಜತೆ ಮಾತನಾಡುತ್ತಿದ್ದಾರೆ. ಸಿ.ಎಂ ಇಬ್ರಾಹಿಂ ಅವರು ಕೂಡ ನಮ್ಮ ನಾಯಕರು. ಪಕ್ಷದಲ್ಲಿ ಅಲ್ಪಸಂಖ್ಯಾತರಿಗೆ ಯಾವುದೇ ಅನ್ಯಾಯವಾಗಿಲ್ಲ. ನಮಗೆ ನ್ಯಾಯಯುತವಾಗಿ ಸಿಗಬೇಕಾದ ಎಲ್ಲ ನ್ಯಾಯವೂ ಸಿಗುತ್ತಿದೆ. ಅಲ್ಪಸಂಖ್ಯಾತರಿಗೆ ಸರಿಯಾಗಿ ನ್ಯಾಯ ಸಿಗುತ್ತಿರುವುದು ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ. ನಾನು ಇಲ್ಲಿ ಶಾಸಕನಾಗಿ ಕೂತಿರುವುದಕ್ಕೆ ಕಾರಣ ಕಾಂಗ್ರೆಸ್. ಒಬ್ಬೊಬ್ಬ ನಾಯಕರು ತಮ್ಮ ಅಭಿಪ್ರಾಯವನ್ನು ಹೇಳಿರಬಹುದು. ಪಕ್ಷದ ವಿಚಾರ ಬಂದರೆ ನಾವೆಲ್ಲರೂ ಜತೆಯಾಗಿದ್ದೇವೆ’ ಎಂದರು.
ಸಿದ್ದರಾಮಯ್ಯ ಅವರು ಅಲ್ಪಸಂಖ್ಯಾತ ನಾಯಕರನ್ನು ಹಂತ ಹಂತವಾಗಿ ರಾಜಕೀಯವಾಗಿ ಮುಗಿಸುತ್ತಿದ್ದಾರೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಅಲ್ಪಸಂಖ್ಯಾತ ನಾಯಕರನ್ನು ಯಾರು ಮುಗಿಸಿದ್ದಾರೆ ಎಂದು ಜನ ನೋಡಿದ್ದಾರೆ. ತಮ್ಮ ಪಕ್ಷದಲ್ಲಿದ್ದ ಅಲ್ಪಸಂಖ್ಯಾತರಿಗೆ ಅವರು ಯಾವ ಸ್ಥಾನಮಾನ ಕೊಟ್ಟಿದ್ದರು ಎಂದು ಆ ಪಕ್ಷದಲ್ಲಿದ್ದ ನಾಯಕರೇ ಹೇಳಿದ್ದಾರೆ. ಕಳೆದ ಉಪಚುನಾವಣೆಯಲ್ಲಿ ಏನಾಯಿತು ಎಂದು ನಾವೆಲ್ಲರೂ ನೋಡಿದ್ದೇವೆ. ಕಾಂಗ್ರೆಸ್ ಪಕ್ಷದಲ್ಲಿ ಮಾತನಾಡುವ ಸ್ವಾತಂತ್ರ್ಯ ಇದೆ. ಅದಕ್ಕಾಗಿ ಮುಕ್ತವಾಗಿ ಮಾತನಾಡುತ್ತಾರೆ. ಇದೇ ರೀತಿ ಬಿಜೆಪಿಯಲ್ಲಿ ಮಾತನಾಡಲು ಸಾಧ್ಯವೇ? ಇಲ್ಲಿ ನಮಗೆ ಸಿಗುವ ಹಕ್ಕು, ಬೇರೆಲ್ಲೂ ಸಿಗುವುದಿಲ್ಲ ಎಂಬುದು ನಮ್ಮ ಅಭಿಪ್ರಾಯ. ಸ್ಥಾನಮಾನದ ವಿಚಾರವಾಗಿ ನಾವು ಪಕ್ಷದ ಒಳಗೆ ಕೂತು ಚರ್ಚೆ ಮಾಡುತ್ತೇವೆ. ಅಲ್ಪಸಂಖ್ಯಾತರ ಕಲ್ಯಾಣ ಎಂದರೆ ಕೇವಲ ಸ್ಥಾನಮಾನ ಅಷ್ಟೇ ಅಲ್ಲ ಅವರಿಗಾಗಿ ಸರ್ಕಾರ ಇದ್ದಾಗ ಎಷ್ಟು ಅನುದಾನ ನೀಡಿ ಯಾವ ರೀತಿ ಕಾರ್ಯಕ್ರಮ ನೀಡಲಾಗಿದೆ ಎಂಬುದು ಮುಖ್ಯ. ನಮ್ಮ ಸರ್ಕಾರ ಇದ್ದಾಗ ನೀಡಲಾದ ಅನುದಾನ, ಈಗ ಯಾವ ರೀತಿ ಕಡಿಮೆಯಾಗಿದೆ, ಯೋಜನೆಗಳು ಯಾವ ರೀತಿ ಹಳ್ಳ ಹಿಡಿದಿವೆ, ವಿದ್ಯಾರ್ಥಿ ವೇತನ ನಿಂತಿದೆ ಎಂಬುದನ್ನು ಗಮನಿಸಬೇಕು. ಈ ಅನ್ಯಾಯವನ್ನು ಕೇಳುವ ಕೆಲಸ ಮಾಡಬೇಕಿದೆ. ವಿರೋಧ ಪಕ್ಷವಾಗಿ ನಾವು ನಮ್ಮ ಕೆಲಸ ಮಾಡುತ್ತೇವೆ. ’ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಜಿ.ಎ ಬಾವಾ, ಕೆಪಿಸಿಸಿ ಕಾರ್ಯದರ್ಶಿ, ಮೆಹ್ರೊಜ್ ಖಾನ್, ಮತ್ತಿತರ ಮುಖಂಡರು ಉಪಸ್ಥಿತರಿದ್ದರು.