ಡಿಸೆಂಬರ್ 13ರಿಂದ ಸುವರ್ಣ ಸೌಧದಲ್ಲಿ ವಿಧಾನಮಂಡಲ ಚಳಿಗಾಲದ ಅಧಿವೇಶನ

Prasthutha|

ಬೆಂಗಳೂರು : ವಿಧಾನಮಂಡಲದ ಚಳಿಗಾಲದ ಅಧಿವೇಶನವನ್ನು ಬೆಳಗಾವಿಯ ಸುವರ್ಣ ಸೌಧದಲ್ಲಿ ಡಿಸೆಂಬರ್ 13 ರಿಂದ 24 ರ ವರೆಗೆ ನಡೆಸಲು ಸಂಪುಟ ಸಭೆ ತೀರ್ಮಾನಿಸಿದೆ. ಆದರೆ ಮುಂದಿನ ಸಚಿವ ಸಂಪುಟದಲ್ಲಿ ದಿನಾಂಕ ಪ್ರಕಟಿಸುವುದಾಗಿ ಸರ್ಕಾರ ಮಾಹಿತಿ ನೀಡಿದೆ.

- Advertisement -


ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸೋಮವಾರ ನಡೆದ ಸಚಿವ ಸಂಪುಟ ಸಭೆಯ ಬಳಿಕ ವಿವರ ನೀಡಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಡಿಸಂಬರ್ 13 ರಿಂದ ಬೆಳಗಾವಿಯಲ್ಲಿ ಅಧಿವೇಶನ ನಡೆಯಲಿದೆ. ಆದರೂ ಅಂತಿಮ ದಿನಾಂಕವನ್ನು ಪ್ರಕಟಿಸುವ ನಿರ್ಧಾರವನ್ನು ಸಿಎಂ ಅವರಿಗೆ ನೀಡಲಾಗಿದೆ. ಮುಂದಿನ ಸಂಪುಟ ಸಭೆಯಲ್ಲಿ ದಿನಾಂಕ ಅಂತಿಮಗೊಳಿಸಲಾಗುವುದು ಎಂದರು.
ಗ್ರಾ.ಪಂ ನವರಿಗೆ ಮರಳು ಮಾರಾಟಕ್ಕೆ ಅನುಮತಿ ನೀಡಲು ಅವಕಾಶ ಕಲ್ಪಿಸುವ ನೂತನ ಮರಳು ನೀತಿಗೆ ಅನುಮೋದನೆ ನೀಡಲಾಯಿತು. ಗ್ರಾಮ ಪಂಚಾಯತಿ ಕಾಮಗಾರಿಗಳಿಗೆ ರಿಯಾಯತಿ ದರದಲ್ಲಿ ಮರಳು ವಿತರಿಸಲು ಮರಳು ನೀತಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಸಣ್ಣ ಪ್ರಮಾಣದಲ್ಲಿ ನದಿಪಾತ್ರದಲ್ಲಿ ಮರಳು ತೆಗೆಯಲು ನೀತಿಯಲ್ಲಿ ಅವಕಾಶ ನೀಡಲಾಗಿದೆ ಎಂದು ಮಾಧುಸ್ವಾಮಿ ತಿಳಿಸಿದರು.


ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ಗ್ರಾಮಪಂಚಾಯತ್ ಅಧಿಕಾರಿ, ಮೆಟ್ರಿಕ್ ಟನ್ ಗೆ 300 ರೂ.ನಂತೆ ಮರಳು ಮಾರಾಟ ಮಾಡಲು ಒಪ್ಪಿಗೆ ನೀಡಲಾಗಿದೆ. ನದಿ ಮರಳಿಗೆ 700 ರೂ ನಿಗದಿಪಡಿಸಲಾಗಿದೆ. ಮಾರಾಟದ ಶೇಕಡಾ 25ರಷ್ಟು ಹಣವನ್ನು ಗ್ರಾ.ಪಂಗೆ ನೀಡಬೇಕು.ಇದರ ಉಸ್ತುವಾರಿಗೆ ಪ್ರಾಧಿಕಾರವನ್ನು ರಚನೆ ಮಾಡಲಾಗುತ್ತದೆ ಎಂದರು.ದಕ್ಷಿಣಕನ್ನಡದಲ್ಲಿ ಮರಳು ತೆಗೆಯಲು ಅವಕಾಶ ಕಲ್ಪಿಸಲಾಗಿದೆ. ಆದರೆ ಸಾಂಪ್ರದಾಯಿಕವಾಗಿ ಮರಳು ತೆಗೆಯಲು ಮಾತ್ರ ಅವಕಾಶ ಕಲ್ಪಿಸಲಾಗಿದೆ. ಗ್ರಾ.ಪಂ.ನಿಂದ ಅನುಮತಿ ಪಡೆದು ಯಂತ್ರೋಪಕರಣ ಬಳಕೆ ಮಾಡದೆ ಮರಳು ತೆಗೆಯಲು ಒಪ್ಪಿಗೆ ಸೂಚಿಸಲಾಗಿದೆ ಎಂದು ಕಾನೂನು ಸಚಿವ ಮಾಧುಸ್ವಾಮಿ ಹೇಳಿದರು.

- Advertisement -


ನೇಕಾರ ಸಮುದಾಯಕ್ಕೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಾಗಿದ್ದು, ಇದಕ್ಕಾಗಿ 376 ಕೋಟಿ ಹಣ ಮೀಸಲಿಡಲು ಸಂಪುಟ ಒಪ್ಪಿಗೆ ಸೂಚಿಸಿದೆ. ಎಸ್ಪಿ, ಟಿಎಸ್ಪಿ ಹಣವನ್ನು ಇದಕ್ಕೆ ಬಳಸಲು ನಿರ್ಧರಿಸಲಾಯಿತು.ಮುಂಬೈ ಕರ್ನಾಟಕದ ಹೆಸರು ಬದಲಾಯಿಸಿ ಕಿತ್ತೂರು ಕರ್ನಾಟಕವೆಂದು ಹೊಸ ನಾಮಕರಣ ಮಾಡಲು ಸಚಿವ ಸಂಪುಟ ಸಮ್ಮತಿ ನೀಡಿದೆ ಎಂದರು.
ಪವರ್ ಸ್ಟಾರ್ ದಿವಂಗತ ಪುನಿತ್ ರಾಜ್ ಕುಮಾರ್ ಗೆ ಮರಣೋತ್ತರ ಪದ್ಮಶ್ರೀ ಪ್ರಶಸ್ತಿ ವಿಚಾರದ ಬಗ್ಗೆ ಇಂದು ಚರ್ಚೆಯಾಗಿಲ್ಲ ಎಂದು ಪ್ರಶ್ನೆಯೊಂದಕ್ಕೆ ಮಾಧುಸ್ವಾಮಿ ಹೇಳಿದರು.
ಮೇಕೆದಾಟು ಯೋಜನೆ ಬಗ್ಗೆ ಇವತ್ತು ಸಭೆ ನಡೆಯಬೇಕಾಗಿತ್ತು, ಆಗಲಿಲ್ಲ. ಮುಂದಿನ ವಾರ ಅದರ ಬಗ್ಗೆ ಸಭೆ ನಡೆಸಲಾಗುವುದು. ನಂತರ ಒಂದು ನಿರ್ಧಾರ ತೆಗೆದುಕೊಳ್ತೇವೆ ಎಂದು ಪ್ರಶ್ನೆಯೊಂದಕ್ಕೆ ಮಾಧುಸ್ವಾಮಿ ಹೇಳಿದರು.


ಬಿಟ್ ಕಾಯಿನ್ ವಿಚಾರದ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆಯಾಗಿಲ್ಲ. ಚರ್ಚಿಸಲು ನಮ್ಮ ಮುಂದೆ ಯಾವುದೇ ವಿಷಯವಿಲ್ಲ. ಸಾರ್ವಜನಿಕರು ಮಾತಾಡುವ ವಿಚಾರವನ್ನೆಲ್ಲಾ ಕ್ಯಾಬಿನಿಟ್ ನಲ್ಲಿ ಚರ್ಚಿಸಲು ಬರುವುದಿಲ್ಲ. ಬಿಟ್ ಕಾಯಿನ್ ಕಳ್ಳತನ ಬಗ್ಗೆ ಇ.ಡಿ ತನಿಖೆಗೆ ವಹಿಸಿರುವ ಬಗ್ಗೆ ನನಗೆ ಮಾಹಿತಿಯಿಲ್ಲ. ಆಗ ನಾನು ಕಾನೂನು ಸಚಿವನಾಗಿರಲಿಲ್ಲ.. ಬೊಮ್ಮಾಯಿ ಅವರೇ ಕಾನೂನು ಸಚಿವರಾಗಿದ್ದರು. ಸಿಎಂ ಅವರೇ ನಿಮಗೆ ಉತ್ತರ ಕೊಡುತ್ತಾರೆ ಎಂದು ಕಾನೂನು ಸಚಿವ ಮಾಧುಸ್ವಾಮಿ ನುಣುಚಿಕೊಂಡರು.


ಬಿಟ್ ಕಾಯಿನ್ ದಂಧೆ ಯ ಬಗ್ಗೆ ಮಾಹಿತಿಯಿಲ್ಲ. ಇಡಿಗೆ ರೆಫರ್ ಮಾಡಿರುವ ಬಗ್ಗೆ ನನಗೆ ಗೊತ್ತಿಲ್ಲ. ಯಾವ ಡೇಟ್ ಕೊಟ್ಟಿದ್ದಾರೆ ಮುಖ್ಯಮಂತ್ರಿ ಅವರನ್ನೇ ಕೇಳಿ. ನಾನು ಅವರ ಹೇಳಿಕೆ ಮಾಧ್ಯಮಗಳಲ್ಲಿ ನೋಡಿದ್ದೇನೆ. ನಾನಾಗ ಕಾನೂನು ಸಚಿವನೂ ಆಗಿರಲಿಲ್ಲ ಎಂದು ಮಾಧುಸ್ವಾಮಿ ಸ್ಪಷ್ಟಪಡಿಸಿದರು.
ಕೋಲಾರ ಹಾಲು ಒಕ್ಕೂಟವನ್ನು ವಿಭಜಿಸಲು ಕ್ಯಾಬಿನೆಟ್ ಒಪ್ಪಿಗೆ ನೀಡಿದೆ. ಚಿಕ್ಕಬಳ್ಳಾಪುರ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆಗೆ ನಿರ್ಧರಿಸಲಾಗಿದೆ. ಅದೇ ರೀತಿ ಕೋಲಾರ ಜಿಲ್ಲಾ ಸಹಕಾರ ಬ್ಯಾಂಕ್ ವಿಭಾಗಕ್ಕೂ ಒಪ್ಪಿಗೆ ದೊರೆತಿದೆ. ಚಿಕ್ಕಬಳ್ಳಾಪುರ ಪ್ರತ್ಯೇಕ ಡಿಸಿಸಿ ಬ್ಯಾಂಕ್ ರಚನೆಗೆ ಸಚಿವ ಸಂಪುಟ ಅನುಮೋದನೆ ನೀಡಲಾಗಿದೆ ಎಂದರು.


376 ಕೋಟಿ ನೇಕಾರರಿಗೆ ವಿಶೇಷ ಪ್ಯಾಕೇಜ್ ನೀಡಲು ಕ್ಯಾಬಿನೆಟ್ ಒಪ್ಪಿಗೆ ಸೂಚಿಸಿದೆ. ಮುಂಬೈ ಕರ್ನಾಟಕ ಭಾಗಕ್ಕೆ ಕಿತ್ತೂರು ಕರ್ನಾಟಕ ನಾಮಕರಣಕ್ಕೆ ಸಮ್ಮತಿಸಲಾಗಿದೆ. ಉತ್ತರ ಕನ್ನಡ, ಬೆಳಗಾವಿ, ಧಾರವಾಡ, ಬಿಜಾಪುರ, ಬಾಗಲಕೋಟೆ, ಗದಗ ಮತ್ತು ಹಾವೇರಿ ಜಿಲ್ಲೆಗಳ ಪ್ರದೇಶಗಳನ್ನು “ಕಿತ್ತೂರು ಕರ್ನಾಟಕ” ಪ್ರದೇಶ ಎಂದು ನಾಮಕರಣ ಮಾಡಲಾಗಿದೆ.

Join Whatsapp