ಯಾವ ಹಿಂದೂ ದೇವರೂ ಬ್ರಾಹ್ಮಣರಲ್ಲ; ಮನು ಸ್ಮೃತಿ ಲಿಂಗ ತಾರತಮ್ಯದ್ದು: ಜೆಎನ್ ಯು ಉಪಕುಲಪತಿ

Prasthutha|

ನವದೆಹಲಿ: ಯಾವ ಹಿಂದೂ ದೇವರು ಕೂಡ ಬ್ರಾಹ್ಮಣ ಅಲ್ಲ ಮತ್ತು ಮನುಸ್ಮೃತಿ ಲಿಂಗ ಅಸಮಾನತೆಯಿಂದ ಕೂಡಿದೆ ಎಂದು ನವದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ಉಪಕುಲಪತಿ ಸಾಂತಿಶ್ರೀ ದೂಳಿಪೂಡಿ ಪಂಡಿತ್ ಹೇಳಿದ್ದಾರೆ.

- Advertisement -

 ‘ಸಮಾನ ನಾಗರಿಕ ಸಂಹಿತೆ, ಲಿಂಗ ನ್ಯಾಯದ ಬಗ್ಗೆ ಡಾ. ಬಿ. ಆರ್. ಅಂಬೇಡ್ಕರ್’ ವಿಷಯವಾಗಿ ಮಾತನಾಡಿದ ಅವರು, ದಯವಿಟ್ಟು ವೈಜ್ಞಾನಿಕವಾಗಿ ಮತ್ತು ಮಾನವ ಶಾಸ್ತ್ರದ ಅನುಸಾರ ನಮ್ಮ ದೇವರ ಮೂಲಗಳನ್ನು ನೋಡಿರಿ. ಯಾವ ದೇವರೂ ಬ್ರಾಹ್ಮಣ ಅಲ್ಲ; ಹೆಚ್ಚಿನ ಸಂಖ್ಯೆಯಲ್ಲಿರುವವರು ಕ್ಷತ್ರಿಯರು. ಶಿವನು ಪರಿಶಿಷ್ಟ ಜಾತಿ ಇಲ್ಲವೇ ಪರಿಶಿಷ್ಟ ಪಂಗಡಕ್ಕೆ ಸೇರಿದವನು. ಆತ ಹಾವುಗಳ ಜೊತೆಗೆ ಸ್ಮಶಾನವಾಸಿ. ಆತನಿಗೆ ಹೆಚ್ಚು ಬಟ್ಟೆಗಳನ್ನೂ ನೀಡಲಾಗಿಲ್ಲ. ಬ್ರಾಹ್ಮಣರು ಸ್ಮಶಾನವಾಸಿಗಳು ಎಂದರೆ ನಾನು ನಂಬುವುದಿಲ್ಲ. ಮಾವ ಶಾಸ್ತ್ರದ ಪ್ರಕಾರ ಲಕ್ಷ್ಮಿ, ಶಕ್ತಿ ಯಾವ ದೇವರು ಕೂಡ ಮೇಲ್ಜಾತಿಯಿಂದ ಬಂದಿಲ್ಲ. ಜಗನ್ನಾಥ ಟ್ರೈಬಲ್, ಇಷ್ಟಾದರೂ ನಾವು ಅಮಾನವೀಯವಾಗಿ ಏಕೆ ನಡೆದುಕೊಳ್ಳುತ್ತಿದ್ದೇವೆ ಎಂದು ಸಾಂತಿಶ್ರೀ ಪಂಡಿತ್ ಪ್ರಶ್ನಿಸಿದ್ದಾರೆ.

ಮನು ಸ್ಮೃತಿಯು ಎಲ್ಲ ಮಹಿಳೆಯರನ್ನು ಶೂದ್ರರು ಎಂದು ಹೇಳಿದೆ. ಇದು ತೀರಾ ಪ್ರತಿಗಾಮಿತನ ಎಂದೂ ಅವರು ಹೇಳಿದರು. ಮನು ಸ್ಮೃತಿಯಂತೆ ಎಲ್ಲ ಮಹಿಳೆಯರೂ ಶೂದ್ರರಾದುದರಿಂದ ಬ್ರಾಹ್ಮಣ ಮಹಿಳೆ ಎಂದು ಯಾರೂ ಹೇಳಿಕೊಳ್ಳುವುದು ಸಾಧ್ಯವಿಲ್ಲ. ಮದುವೆಯ ಮೂಲಕ ಗಂಡನ ಇಲ್ಲವೇ ಗಂಡನ ಜಾತಿಗೆ ನೀವು ಸೇರಿದವರು ಎಂದು ತಿಳಿಯಬೇಕು. ಇದು ಅತಿಯಾದ ಪ್ರತಿಗಾಮಿತನ ಎಂದೂ ಸಾಂತಿಶ್ರೀ ಹೇಳಿದರು.

- Advertisement -

ರಾಜಸ್ತಾನದ ದಲಿತ ಶಾಲಾ ಬಾಲಕನನ್ನು ನೀರು ಮುಟ್ಟಿದ್ದಕ್ಕೆ ಮೇಲ್ಜಾತಿಯ ಶಾಲಾ ಶಿಕ್ಷಕ ಹೊಡೆದು ಕೊಂದುದೇ ಇದಕ್ಕೆ ಉದಾಹರಣೆ ಸಾಲದೆ? ಎಂದು ಅವರು ಪ್ರಶ್ನಿಸಿದ್ದಾರೆ.

“ಜಾತಿ ಹುಟ್ಟಿನಿಂದ ಬಂದಿಲ್ಲ ಎಂದು ಹೇಳುವವರು ತುಂಬ ಜನ ಇದ್ದಾರೆ. ಆದರೆ ಇಲ್ಲೆಲ್ಲ ಹುಟ್ಟಿನಿಂದಲೇ ಜಾತಿಯನ್ನು ನೋಡುತ್ತಾರೆ. ಒಬ್ಬ ಬ್ರಾಹ್ಮಣ ಚಮ್ಮಾರ, ದಲಿತ ಆಗುತ್ತಾನೆಯೇ? ಈ ಕಾರಣದಿಂದಲೆ ಹುಟ್ಟಿನಿಂದ ದಲಿತ ಎಂದು ದಲಿತ ಬಾಲಕನನ್ನು ಹುಟ್ಟಿನಿಂದ ಮೇಲ್ಜಾತಿಯವನಾದ ಶಿಕ್ಷಕನು ಹೊಡೆದು ಕೊಂದಿದ್ದಾನೆ. ಇದು ಮಾನವ ಹಕ್ಕುಗಳ ಪ್ರಶ್ನೆ. ಮತ್ತೊಬ್ಬ ಮನುಷ್ಯನನ್ನು ನಾವು ಹಾಗೆ ನಡೆಸಿಕೊಳ್ಳುವುದು ಸರಿಯಲ್ಲ” ಎಂದು ಹೇಳಿದರು.

ಅಂಬೇಡ್ಕರ್ ರ ಎನ್ಹಿಲೇಶನ್ ಆಫ್ ಕ್ಯಾಸ್ಟ್ ಉದಾಹರಿಸಿ “ಭಾರತದ ಸಮಾಜ ಏನಾದರೂ ಒಳಿತು ಮಾಡಬೇಕೆಂದರೆ ಅದಕ್ಕೆ ಎನ್ಹಿಲೇಶನ್ ಆಫ್ ಕ್ಯಾಸ್ಟ್ ತುಂಬ ಮುಖ್ಯ. ಅಸಮಾನತೆಯ, ಶೋಷಣೆಯ ಕೃತಕವಾಗಿ ಕಟ್ಟಿದ ಜಾತಿ ಗುರುತಿನ ಬಗ್ಗೆ ನಾವು ಯಾಕೆ ಇಷ್ಟೊಂದು ಭಾವೋದ್ವೇಗದವರಾಗಿದ್ದೇವೆ? ಅದಕ್ಕಾಗಿ ನಾವು ಇನ್ನೊಬ್ಬರನ್ನು ಕೊಲ್ಲಲೂ ಸಿದ್ಧರಿದ್ದೇವೆ!” ಅವರು ವಿಷಾದಿಸಿದರು.

“ನೀವು ಮಹಿಳೆಯಾಗಿದ್ದು ಮೀಸಲಾತಿ ಹಾದಿಯಿಂದ ಬಂದಿದ್ದರೆ ನಿಮ್ಮನ್ನು ದುಪ್ಪಟ್ಟಾಗಿ ಕಡೆಗಣಿಸಲಾಗುತ್ತದೆ. ಮೊದಲನೆಯದಾಗಿ ಮಹಿಳೆ ಎಂದು, ಎರಡನೆಯದಾಗಿ ಕೆಳ ಜಾತಿಯಿಂದ ಬಂದಿದ್ದೀರಿ ಎಂದು ಕಡೆಗಣಿಸಲಾಗುತ್ತದೆ. ಇದೆಲ್ಲ ಒಂದೇ ಪ್ರಕಾರವಾಗಿ ನಡೆಯುತ್ತಲೇ ಇರುತ್ತದೆ” ಎಂದು ಅವರು ಹೇಳಿದರು.

ಬೌದ್ಧ ಧರ್ಮವು ಈ ವಿಷಯದಲ್ಲಿ ಭಾರತೀಯ ನಾಗರಿಕತೆಗಿಂತ ಭಿನ್ನವಾದ ಅಭಿಪ್ರಾಯವನ್ನು ಹೊಂದಿದೆ.

“ನನ್ನ ಪ್ರಕಾರ ಬೌದ್ಧ ಧರ್ಮವು ಒಂದು ಶ್ರೇಷ್ಠ ಧರ್ಮವಾಗಿದೆ. ಇದು ಭಾರತೀಯ ನಾಗರಿಕತೆಯಲ್ಲಿ ವಿಭಿನ್ನತೆ, ವೈವಿಧ್ಯತೆಯನ್ನು, ಭಿನ್ನಾಭಿಪ್ರಾಯಗಳನ್ನು ಒಪ್ಪಿ ಅಪ್ಪಿಕೊಳ್ಳುತ್ತದೆ ಆ ಧರ್ಮ. ಬ್ರಾಹ್ಮಣ ಹಿಂದುತ್ವದ ಎದುರು ಮೊದಲ ಬಂಡಾಯಗಾರ ಗೌತಮ ಬುದ್ಧ. ಚರಿತ್ರೆಯಲ್ಲಿ ಮೊದಲ ವಿಚಾರವಾದಿ ಬುದ್ಧನೇ ಆಗಿದ್ದಾನೆ. ನಮಗೆ ಬಾಬಾ ಸಾಹೇಬರು ತಿದ್ದಿ ಕೊಟ್ಟ ಪರಂಪರೆಯಿದೆ” ಎಂದು ಸಾಂತಿಶ್ರೀ ತಿಳಿಸಿದರು.

ಸಾಂತಿಶ್ರೀ ಪಂಡಿತ್ ಅವರು ತೆಲುಗು, ತಮಿಳು, ಮರಾಠಿ, ಹಿಂದಿ, ಸಂಸ್ಕೃತ, ಇಂಗ್ಲಿಷ್ ಬಹು ಭಾಷಾ ಪಂಡಿತರು. ಹಿಂದೆ ಪೂನಾದ ಸಾವಿತ್ರಿಬಾಯಿ ಫುಲೆ ವಿಶ್ವವಿದ್ಯಾನಿಲಯದಲ್ಲಿ ರಾಜಶಾಸ್ತ್ರ, ಸಾರ್ವಜನಿಕ ಆಡಳಿತದ ಪ್ರೊಫೆಸರ್ ಆಗಿದ್ದರು.  ಈ ವರುಷ ಫೆಬ್ರವರಿಯಲ್ಲಿ ಅವರು ಜೆಎನ್ ಯುನ ಮೊದಲ ಮಹಿಳಾ ಉಪಕುಲಪತಿಗಳಾಗಿ ಐದು ವರುಷದ ಕಾಲಾವಧಿಗೆ ನೇಮಕಗೊಂಡರು.

ಅಂತಾರಾಷ್ಟ್ರೀಯ ಸಂಬಂಧಗಳು, ಏಶಿಯನ್ ಸ್ಟಡೀಸ್, ಸಂಸ್ಕೃತಿ ಮತ್ತು ವಿದೇಶ ನೀತಿ, ಲಿಂಗ ಹಿಂಸೆ, ಗಲಭೆ ಮೊದಲಾದ ವಿಷಯಗಳಲ್ಲಿ ಅವರು ಸಂಶೋಧನೆ ನಡೆಸಿದ್ದಾರೆ.

Join Whatsapp