ಕೊಡಗು: ಅಧಿಕಾರ ದುರುಪಯೋಗ ಪಡಿಸಿಕೊಂಡ ಬಿಜೆಪಿ ನಗರಸಭಾ ಸದಸ್ಯನ ಸದಸ್ಯತ್ವ ರದ್ದುಗೊಳಿಸುವಂತೆ ಜಿಲ್ಲಾಧಿಕಾರಿಗೆ ಎಸ್.ಡಿ.ಪಿ. ಐ ಮನವಿ

Prasthutha|

ಮಡಿಕೇರಿ: ನಿಯಮ ಬಾಹಿರವಾಗಿ ಮಡಿಕೇರಿ ನಗರಸಭೆಯ ಬಿಜೆಪಿಯ ಚುನಾಯಿತ ಸದಸ್ಯ ಕೆ.ಎಂ ಅಪ್ಪಣ್ಣ ನಗರಸಭೆಯ ಕೆಲಸಗಳನ್ನು ಅಧಿಕಾರ ದುರುಪಯೋಗ ಪಡಿಸಿಕೊಂಡು ಲಾಭದಾಯಕ ವ್ಯವಹಾರ ಮಾಡಿರುವ ಬಗ್ಗೆ ಪರಿಶೀಲಿಸಿ, ಅವರ ಸದಸ್ಯತ್ವವನ್ನು ರದ್ದುಗೊಳಿಸುವಂತೆ ಎಸ್.ಡಿ.ಪಿ.ಐ ಪಕ್ಷದ ನಗರಸಭಾ ಸದಸ್ಯರು ಜಿಲ್ಲಾಧಿಕಾರಿ ಡಾ. ಬಿ.ಸಿ ಸತೀಶ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

- Advertisement -

ಮಡಿಕೇರಿ ನಗರಸಭೆಯ ವಾರ್ಡ್ 19 ರ ಚುನಾಯಿತ ಸದಸ್ಯ ಕೆ.ಎಂ ಅಪ್ಪಣ್ಣ ತಮ್ಮ ಮಾಲಿಕತ್ವದಲ್ಲಿರುವ ಪ್ಲಾಂಟರ್ಸ್ ವಲ್ಡ್ ಎಂಬ ವಾಣಿಜ್ಯ ವ್ಯವಹಾರದ ಸಂಸ್ಥೆಯ ಮುಖಾಂತರ, ಮಡಿಕೇರಿ ನಗರಸಭೆಯ ನೈರ್ಮಲ್ಯ ವಿಭಾಗದ ಕಾಡು ಕಡಿಯುವ ಯಂತ್ರದ ದುರಸ್ತಿ ಕೆಲಸ ಕಾರ್ಯಗಳನ್ನು ತನ್ನ ಅಧಿಕಾರವನ್ನು ದುರುಪಯೋಗಪಡಿಸಿ ಮಡಿಕೇರಿ ನಗರಸಭೆಯಲ್ಲಿ ಲಾಭದಾಯಕ ಕೆಲಸವನ್ನು ಮಾಡಿರುವುದಾಗಿ ಎಸ್.ಡಿ.ಪಿ.ಐ ಸದಸ್ಯರು ದಾಖಲೆ ಮೂಲಕ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.

ಮಡಿಕೇರಿ ನಗರಸಭೆಯಿಂದ ದಿನಾಂಕ 29.10.2021 ರಿಂದ ಇಂದಿನ ವರೆಗೆ ಕಾಡುಕಡಿಯುವ ಯಂತ್ರಗಳನ್ನು ದುರಸ್ತಿ ಮಾಡುವ ಕೆಲಸವನ್ನು ಮಾಡಿ ಹಣವನ್ನು ಪಡೆದು ಕೊಂಡಿರುವುದು ದೃಢವಾಗಿದೆ. ಇವರು ನಗರಸಭೆಗೆ ಸಲ್ಲಿಸಿದ ಜಿ.ಎಸ್.ಟಿ ಟ್ಯಾಕ್ಸ್ ಬಿಲ್ ನಲ್ಲಿ ನಮೂದಿಸಿರುವ ಜಿ.ಎಸ್.ಟಿ ಸಂಖ್ಯೆ ಹಾಗೂ ಪಾನ್ ಸಂಖ್ಯೆ ಇವರ ಹೆಸರಿನಲ್ಲಿ ಸಂಬಂಧಪಟ್ಟ ಇಲಾಖೆಗಳಲ್ಲಿ ನೊಂದಾವಣೆಗೊಂಡಿದೆ. ಇವರದ್ದೇ ಪಾನ್ ಸಂಖ್ಯೆಯಲ್ಲಿ ಟಿ.ಡಿ.ಎಸ್ ಕೂಡ ಬಿಲ್ಲಿನಿಂದ ವಸೂಲಿಮಾಡಿ ಆದಾಯ ತೆರಿಗೆ ಇಲಾಖೆಗೆ ಪಾವತಿಸಲಾಗಿದೆ ಎಂದು ಅಮೀನ್ ಮೊಹಿಸಿನ್ ಆರೋಪಿಸಿದರು.

- Advertisement -

ಈ ವಿಚಾರವನ್ನು ದಿನಾಂಕ 8.8.2022 ರಂದು ನಡೆದ ನಗರಸಭೆಯ ಮಾಸಿಕ ಸಭೆಯಲ್ಲಿ ಪ್ರಸ್ತಾಪಿಸಿದಾಗ ಆಡಳಿತಪಕ್ಷದ ಸದಸ್ಯರು ವಿನಾಕಾರಣ ಗೊಂದಲವನ್ನು ಉಂಟುಮಾಡಿ ವಿಷಯವನ್ನು ಮರೆಮಾಡುವ ಉದ್ದೇಶದಿಂದ ತನಗೆ ಮಾತಾಡಲು ಅವಕಾಶ ನೀಡದೆ ಗದ್ದಲ ಮಾಡಿರುತ್ತಾರೆ ಎಂದು ಎಸ್.ಡಿ.ಪಿ.ಐ ಸದಸ್ಯ ಅಮೀನ್ ಮೊಹಿಸಿನ್ ಆರೋಪಿಸಿದರು.

ಕರ್ನಾಟಕ ಪೌರಸಭೆಗಳ ಅಧಿನಿಯಮ 1964 ರ ಪ್ರಕರಣ 16(1)(k) ಯಲ್ಲಿ ನಗರಸಭೆಯ ಯಾವುದೇ ಚುನಾಯಿತ ಸದಸ್ಯ ನಗರಸಭೆಯಲ್ಲಿ ಲಾಭದಾಯಕ ಕೆಲಸಕಾರ್ಯಗಳನ್ನು ಮಾಡಿದರೆ ಅಂತಹ ಸದಸ್ಯರು ತನ್ನ ಸದಸ್ಯತ್ವ ಸ್ಥಾನಕ್ಕೆ ಅನರ್ಹರಾಗಿರುತ್ತಾರೆ. ಆದ್ದರಿಂದ ಈ ವಿಚಾರವಾಗಿ ಮಡಿಕೇರಿ ನಗರಸಭೆಯ ದಾಖಲೆಗಳನ್ನು ಪರಿಶೀಲಿಸಿ ನಿಯಮ ಬಾಹಿರವಾಗಿ ಮಡಿಕೇರಿ ನಗರಸಭೆಯ ಲಾಭದಾಯಕ ಕೆಲಸಕಾರ್ಯಗಳನ್ನು ಮಾಡಿರುವ ಕಾರಣದಿಂದ ಕೆ.ಎಂ ಅಪ್ಪಣ್ಣ ಅವರ ಸದಸ್ಯತ್ವವನ್ನು ಕಾನೂನು ಪ್ರಕಾರ ರದ್ದುಗೊಳಿಸುವಂತೆ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.

ಈ ಸಂದರ್ಭ ಎಸ್.ಡಿ.ಪಿ.ಐ ನಗರಸಭಾ ಸದಸ್ಯರಾದ ಮನ್ಸೂರ್, ಮೇರಿ ವೇಗಸ್, ನೀಮಾ ಅರ್ಷಾದ್ ಮತ್ತು ಬಶೀರ್ ಅಹಮದ್ ಇದ್ದರು.

Join Whatsapp