ಹೊಸದಿಲ್ಲಿ: ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ಮೇಲೆ ಚರ್ಚೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯೆ ನೀಡಿದ ನಂತರ ಮತದಾನ ನಡೆದಿದೆ.
ಮೋದಿ ಭಾಷಣ ನಡೆಯುತ್ತಿದ್ದಂತೆ ವಿಪಕ್ಷ ಸಂಸದರು ಸಭಾತ್ಯಾಗ ಮಾಡಿದ್ದಾರೆ. ಧ್ವನಿ ಮತದಲ್ಲಿ ವಿಪಕ್ಷದ ಅವಿಶ್ವಾಸ ಗೊತ್ತುವಳಿಗೆ ಸೋಲುಂಟಾಗಿದೆ. ಎನ್‌ಡಿಎ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಮಂಡಿಸಿದ ಅವಿಶ್ವಾಸ ನಿರ್ಣಯಕ್ಕೆ ಪ್ರತಿಯಾಗಿ ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಅವರ ಭಾಷಣ 2 ಗಂಟೆ 20 ನಿಮಿಷದ್ದಾಗಿತ್ತು.
ಪ್ರತಿಪಕ್ಷಗಳು ಜುಲೈ 26 ರಂದು ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಮಂಡಿಸಿದ್ದು ಅದನ್ನು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಅಂಗೀಕರಿಸಿದ್ದರು. ಮೋದಿಯವರು ಅವಿಶ್ವಾಸ ನಿರ್ಣಯವನ್ನು ಎದುರಿಸುತ್ತಿರುವುದು ಇದು ಎರಡನೇ ಬಾರಿ. ಮಂಗಳವಾರ ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಅವರು ಈ ಮಸೂದೆಯ ಮೇಲಿನ ಚರ್ಚೆಯನ್ನು ಪ್ರಾರಂಭಿಸಿದ್ದರು.
ಜುಲೈ 20ರಂದು ಮುಂಗಾರು ಅಧಿವೇಶನ ಆರಂಭವಾದಾಗಿನಿಂದ ಮಣಿಪುರದಲ್ಲಿ ನಡೆದ ಹಿಂಸಾಚಾರ ಸೇರಿದಂತೆ ಹಲವು ವಿಷಯಗಳ ಕುರಿತು ಸಂಸತ್ತಿನಲ್ಲಿ ಗದ್ದಲ ನಡೆಯುತ್ತಿದೆ. ಚರ್ಚೆಯ ಸಂದರ್ಭದಲ್ಲಿ, ಕಾಂಗ್ರೆಸ್ ನಾಯಕರು ಪ್ರಧಾನಿ ಮೋದಿ ಯಾಕೆ ಮಣಿಪುರಕ್ಕೆ ಭೇಟಿ ನೀಡಿಲ್ಲ ಎಂದು ಪ್ರಶ್ನಿಸಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.