11 ವರ್ಷಗಳಿಂದ ವಿಚಾರಣೆಗಾಗಿ ಕಾಯುತ್ತಿರುವ ರಾಜಸ್ತಾನ ರೈಲು ಸ್ಫೋಟದ ಆರೋಪಿಗಳು !

Prasthutha: September 30, 2021

ನವದೆಹಲಿ: ರಾಜಸ್ತಾನದಲ್ಲಿ 1993ರಲ್ಲಿ ರಾಜಧಾನಿ ಎಕ್ಸ್ ಪ್ರೆಸ್ ರೈಲಿನಲ್ಲಿ ನಡೆದ ಬಾಂಬು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳು 11 ವರ್ಷಗಳಿಂದ ಯಾವುದೇ ವಿಚಾರಣೆಯಿಲ್ಲದೆ ವಿಚಾರಣಾಧೀನ ಕೈದಿಗಳಾಗಿ ಜೈಲಿನಲ್ಲಿದ್ದಾರೆ.

ರಾಜಸ್ತಾನದಲ್ಲಿ 1993ರಲ್ಲಿ ರಾಜಧಾನಿ ಎಕ್ಸ್ ಪ್ರೆಸ್ ರೈಲಿನಲ್ಲಿ ಬಾಂಬು ಸ್ಫೋಟಕ್ಕೆ ಸಂಬಂಧಿಸಿದಂತೆ 2010ರ ಫೆಬ್ರವರಿಯಲ್ಲಿ ಹಮೀರುದ್ದೀನ್ ರನ್ನು ಬಂಧಿಸಲಾಯಿತು. ಅಜ್ಮೀರ್ ನ ಸಿಬಿಐ ಕೋರ್ಟಿನಲ್ಲಿ ಕಳೆದ ಒಂದು ದಶಕದಿಂದ ಅವರ ಕೇಸು ವಿಚಾರಣೆ ನಡೆಯದೆ ಖಾಲಿ ಬಿದ್ದಿದೆ.

ಅನಗತ್ಯ ವಿಳಂಬ ಹಿನ್ನೆಲೆಯಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿದರೂ 27-3-2019ರಲ್ಲಿ ಅದನ್ನು ತಿರಸ್ಕರಿಸಲಾಯಿತು. ಹಮೀರ್ ಸುಪ್ರೀಂ ಕೋರ್ಟಿನಲ್ಲಿ ಅದನ್ನು ಪ್ರಶ್ನಿಸಿದರು. ಅವರ ಮೇಲೆ ಇನ್ನೂ ಆರೋಪ ಪಟ್ಟಿಯೇ ಸಲ್ಲಿಸಿಲ್ಲ ಎಂಬುದು ಸುಪ್ರೀಂಕೋರ್ಟ್ ಗಮನಕ್ಕೆ ಬಂತು.

ವಿಚಾರಣೆಯ ವೇಳೆ ಸುಪ್ರೀಂ ಕೋರ್ಟು ಕೇಳಿದ್ದಕ್ಕೆ, 2010ರ ಕಾಲದ ಮೂಲ ದಾಖಲೆಗಳೇ ಇಲ್ಲ ಎಂದು ಆಗಸ್ಟ್ 18ರಂದು ಅಜ್ಮೀರ್ ಕೋರ್ಟು ಹೇಳಿತು. ಆಗ ಜಸ್ಟಿಸ್ ಡಿ. ವೈ. ಚಂದ್ರಚೂಡ ಅವರಿದ್ದ ಸುಪ್ರೀಂ ಕೋರ್ಟ್ ಪೀಠವು ಆರೋಪ ಪಟ್ಟಿ ಸಲ್ಲಿಕೆ ತ್ವರಿತಗೊಳಿಸುವಂತೆ ಸೂಚಿಸಿತು.

46 ವರ್ಷ ಪ್ರಾಯದ ಹಮೀರ್ ರ ಜಾಮೀನು ಅರ್ಜಿ ವಿಚಾರಣೆಯು ಮತ್ತೆ ಡಿಸೆಂಬರ್ ನಲ್ಲಿ ಇದೆ. 1993ರ ಡಿಸೆಂಬರ್ 5- 6ರ ನಡುವೆ ರಾಜಧಾನಿ ಎಕ್ಸ್ ಪ್ರೆಸ್ ನಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಇಬ್ಬರು ಸತ್ತು 22 ಮಂದಿ ಗಾಯಗೊಂಡಿದ್ದರು. 23 ಜನರ ಮೇಲೆ 5  ಪ್ರತ್ಯೇಕ ಎಫ್ ಐ ಆರ್ ಗಳು ದಾಖಲಾಗಿದ್ದವು.

ಒಬ್ಬ ಆರೋಪಿ ನಿಧನರಾಗಿದ್ದಾನೆ. ಸಯ್ಯದ್ ಅಬ್ದುಲ್ ಕರೀಂ ಅಲಿಯಾಸ್ ತುಂಡ ಮತ್ತು ಹಮೀರ್ ಸಹಿತ ಆರು ಜನ ಆರೋಪಿಗಳು ನಾಪತ್ತೆಯಾಗಿದ್ದಾರೆ. ಹಮೀರ್ ರನ್ನು ಘಟನೆ ನಡೆದ 16 ವರುಷಗಳ ಬಳಿಕ ಉತ್ತರ ಪ್ರದೇಶದ ಲಕ್ನೋದ ಮನೆಯಿಂದಲೇ ಬಂಧಿಸಲಾಯಿತು.

ಇತರ ಬಂಧಿತ 15 ಜನರಿಗೆ 2004ರ ಫೆಬ್ರವರಿಯಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಯಿತು. 2016ರ ಮೇ 11ರಂದು ಸುಪ್ರೀಂ ಕೋರ್ಟು ಆ ಶಿಕ್ಷೆಯನ್ನು ಎತ್ತಿ ಹಿಡಿಯಿತು. ಹಮೀರ್ ಬಂಧನ ತಡವಾಗಿ ಆದುದರಿಂದ ಕೇಸು ಸಿಬಿಐಗೆ ವಹಿಸಲಾಯಿತು. ಇದರಲ್ಲಿ 160 ಜನರನ್ನು ಸಾಕ್ಷೀದಾರರು ಎಂದು ಸೂಚಿಸಲಾಗಿದೆ. ಹಮೀರ್ ಮನೆಯಲ್ಲೇ ಇದ್ದರು ಎಂಬ ಮನೆಯವರು ಹೇಳುತ್ತಾರೆ. ಆರಂಭದಲ್ಲಿ ಬಂದಿದ್ದ ಪೊಲೀಸರು, ಸಾಕ್ಷ್ಯ ಇಲ್ಲದಿರುವುದರಿಂದ ಬಂಧಿಸುವುದಿಲ್ಲ ಎಂದಿದ್ದರು. ಆರೋಪಿಯನ್ನು ವಿಚಾರಣೆಗೇ ಒಯ್ದಿಲ್ಲ ಎನ್ನುತ್ತಾರೆ ಅವರ ವಕೀಲ ಫಾರೂಕ್ ರಶೀದ್.

“ಅಣ್ಣ ಘಟನೆ ನಡೆದ ಸಂದರ್ಭದಲ್ಲಿ ಮಧ್ಯ ಪ್ರಾಚ್ಯಕ್ಕೆ ಕೆಲಸಕ್ಕೆ ಹೋಗಿದ್ದರು. ಅನಂತರ ಅಲ್ಲಿಂದ ಬಂದವರು ಮುಂಬಯಿಯಲ್ಲಿ ಕೆಲಸಕ್ಕೆ ಸೇರಿದರು. ಅನಂತರ 1999ರ ಹೊತ್ತಿನಲ್ಲಿ ಲಕ್ನೋದ ಮನೆಗೇ ಬಂದಿದ್ದರು. 11 ವರ್ಷಗಳಾದರೂ ಚಾರ್ಚ್ ಶೀಟ್ ಸಲ್ಲಿಕೆ ಆಗಿಲ್ಲ ಎಂದರೆ ಏನರ್ಥ ಎಂದು ಹಮೀರ್ ಸೋದರಿ ಆಯಿಶಾ ಪ್ರಶ್ನಿಸುತ್ತಾರೆ.

 6 ವರುಷಗಳಿಂದ ಕಡತಗಳಿಲ್ಲ, 9 ವರುಷಗಳಿಂದ ಪ್ರಾಸಿಕ್ಯೂಟರ್ ಇಲ್ಲ

ಜಡ್ಜ್ ಸಂದೀಪ್ ಶರ್ಮಾ ಸುಪ್ರೀಂ ಕೋರ್ಟಿಗೆ ವಿವರಿಸಿದಂತೆ, 15 ಜನರ ವಿಚಾರಣೆಗಾಗಿ ಮೂಲ ಕಡತಗಳನ್ನು 1-6-2004ರಲ್ಲಿ ಟ್ರಯಲ್ ಕೋರ್ಟಿಗೆ ಕಳುಹಿಸಲಾಗಿದೆ. ಅನಂತರ ಸಿಬಿಐಗೆ ಆ ಕಡತಗಳು ಮತ್ತೆ ಸಿಕ್ಕಿದ್ದು 14-7-2016ರಲ್ಲಿ.

ಇತ್ತ ಕಡತವೇ ಇಲ್ಲ. ಮಾತ್ರವಲ್ಲ ಸಿಬಿಐ ಪರ ಫಿರ್ಯಾದಿಗೆ ಪ್ರಾಸಿಕ್ಯೂಟರೇ ಒಂಬತ್ತು ವರುಷಗಳಿಂದ ಇಲ್ಲ. ಹಲವು ಪತ್ರ ವ್ಯವಹಾರಗಳ ಬಳಿಕವೂ ವಿಶೇಷ ಪ್ರಾಸಿಕ್ಯೂಟರ್ ಇಲ್ಲಿಗೆ ನೇಮಕವಾಗಿಲ್ಲ ಎಂದು ಶರ್ಮಾ ಹೇಳುತ್ತಾರೆ.

5-8-2019ರಲ್ಲಿ ಭವಾನಿ ಸಿಂಗ್ ರೋಹಿಲ್ಲಾ ಎಂಬವರು ಪ್ರಾಸಿಕ್ಯೂಟರ್ ಆಗಿ ನೇಮಕಗೊಂಡರು. ಆದರೆ ಅದು ನನೆಗುದಿಗೆ ಬಿದ್ದಿದೆ. ಕಾರಣ ಮಾತ್ರ ವಿಚಿತ್ರವಾಗಿದೆ. ಹಮೀರ್ ಜೊತೆ ಸಹ ಆರೋಪಿಯಾದ ತುಂಡ ಎಂಬಾತನನ್ನು ಗಾಜಿಯಾಬಾದ್ ಜೈಲಿನಿಂದ ಇಲ್ಲಿಗೆ ತಂದಿಲ್ಲ. ಈಗ ಕೋವಿಡ್ ಕಾರಣದಿಂದ ವಿಚಾರಣೆ ನಡೆದಿಲ್ಲ.

ತುಂಡ ವಕೀಲ ಗೈರು

2021ರಲ್ಲಿ ಸಯ್ಯದ್ ಅಬ್ದುಲ್ ಕರೀಂ ಅಲಿಯಾಸ್ ತುಂಡ ಪರ ವಕೀಲರು ಗೈರು ಹಾಜರಾದುದರಿಂದ ಏಳು ಬಾರಿ ಕೇಸು ಮುಂದೂಡಲ್ಪಟ್ಟಿತು. ಇನ್ನು ಹಮೀರ್ ಪರ ವಕೀಲರು ಕೂಡ ನಾಲ್ಕು ಬಾರಿ ಹಾಜರಾಗಿಲ್ಲ. ಇಂಥ ವಿಷಯ ನಮ್ಮ ಗಮನಕ್ಕೇ ಬಂದಿಲ್ಲ ಎಂದು ಆಯಿಶಾ ಮತ್ತು ಮನೆಯವರು ಹೇಳುತ್ತಾರೆ.

ಹಮೀರ್ ಅವರು ಜೀವಾವಧಿ ಶಿಕ್ಷೆಯ ಅರ್ಧ ಕಾಲವನ್ನು ವಿಚಾರಣಾಧೀನ ಖೈದಿಯಾಗಿಯೇ ಕಳೆದಿದ್ದಾರೆ. ಆದ್ದರಿಂದ ಅವರಿಗೆ ಬೇಗ ಜಾಮೀನು ಸಿಗಬೇಕು ಎನ್ನುತ್ತಾರೆ ವಕೀಲ ರಶೀದ್.  

(ಕೃಪೆ: ದಿ ಪ್ರಿಂಟ್)

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!