►‘ನಮ್ಮ ಸರ್ಕಾರಕ್ಕೆ ಯಾವ ಚಟುವಟಿಕೆಗಳನ್ನು ನಿಷೇಧಿಸುವ ಉದ್ದೇಶವಿಲ್ಲ’
ಬೆಂಗಳೂರು: ಕೋವಿಡ್-19 ನ ಸಂಬಂಧ ಸರ್ಕಾರ ಎಪ್ರಿಲ್ 3 ರಂದು ನೂತನವಾಗಿ ಹೊರಡಿಸಿರುವ ಮಾರ್ಗಸೂಚಿಯಲ್ಲಿ ಯಾವುದೇ ಬದಲಾವಣೆಯ ಪ್ರಶ್ನೆಯೇ ಇಲ್ಲವೆಂದು ಸಚಿವ ಡಾ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ. ಈ ಸಂಬಂಧ ನಗರದ ಸದಾಶಿವನಗರದಲ್ಲಿ ಮಾತನಾಡಿದ ಅವರು, ಕೆಲವರು ಮಾರ್ಗಸೂಚಿ ಬದಲಾಯಿಸುವಂತೆ ಮನವಿ ಮಾಡುತ್ತಿದ್ದಾರೆ ಆದರೆ ಕೋವಿಡ್ ಸೋಂಕು ನಿಯಂತ್ರಣವಾಗದೆ ಮಾರ್ಗಸೂಚಿ ಬದಲಾವಣೆ ಇಲ್ಲವೆಂದು ಅವರು ಹೇಳಿದ್ದಾರೆ.
ಡಾ. ಸುಧಾಕರ್ ಮಾತನಾಡುತ್ತಾ, ನಾವು ಏಕಾಏಕಿ ಮಾರ್ಗಸೂಚಿ ತಂದಿಲ್ಲ. ತಾಂತ್ರಿಕ ಸಲಹಾ ಸಮಿತಿ ವರದಿ ಹಿನ್ನೆಲೆಯಲ್ಲಿ ಕ್ರಮಕೈಗೊಳ್ಳಲಾಗಿದೆ. ಉದ್ದೇಶಪೂರ್ವಕವಾಗಿ ಯಾವುದೇ ನಿಯಮಗಳನ್ನು ತಂದಿಲ್ಲ. ನಮ್ಮ ಸರ್ಕಾರಕ್ಕೆ ಯಾವ ಚಟುವಟಿಕೆಗಳನ್ನು ನಿಷೇಧಿಸುವ ಉದ್ದೇಶವಿಲ್ಲ. ಏ.20ರವರೆಗೂ ಈಗಿನ ಮಾರ್ಗಸೂಚಿ ಅನ್ವಯವಾಗಲಿದೆ ಎಂದರು. ಕೊರೊನಾ ಎರಡನೇ ಅಲೆ ಹೊಸ್ತಿಲಲ್ಲಿದ್ದೇವೆ. ಕೋವಿಡ್ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕಾದುದು ಅನಿವಾರ್ಯ. ನಮಗೆ ಬೇರೆ ದಾರಿಯೇ ಇಲ್ಲ. 45 ವರ್ಷ ಮೇಲ್ಪಟ್ಟವರು ದಯವಿಟ್ಟು ಲಸಿಕೆ ಪಡೆಯಬೇಕು. ಗುಂಪು ಸೇರುವುದನ್ನು ಕಡಿಮೆ ಮಾಡಿ ಮಾಸ್ಕ್ ಬಳಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.