ಕೇರಳದಲ್ಲಿ ನಿಫಾ ವೈರಸ್ ಹೆಚ್ಚಳ: ದ.ಕ ಜಿಲ್ಲೆಯಲ್ಲಿ ಹೈ ಅಲರ್ಟ್

Prasthutha|

►ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ

- Advertisement -


ಬೆಂಗಳೂರು: ಕೇರಳದಲ್ಲಿ ನಿಫಾ ವೈರಸ್ ಹೆಚ್ಚಾಗಿದೆ. ತೀವ್ರ ಜ್ವರದಿಂದ ಬಳಲುತ್ತಿದ್ದ ಇಬ್ಬರು ಸಾವನ್ನಪ್ಪಿದ್ದು ಅವರಿಗೆ ನಿಫಾ ವೈರಸ್ ತಗುಲಿದ್ದು ದೃಢವಾಗಿದೆ. ನೆರೆ ರಾಜ್ಯ ಕೇರಳದಲ್ಲಿ ನಿಫಾ ವೈರಸ್ ಹೆಚ್ಚಾದ ಹಿನ್ನೆಲೆ ಕರ್ನಾಟಕ ರಾಜ್ಯದಲ್ಲಿ ಆರೋಗ್ಯ ಇಲಾಖೆ ಫುಲ್ ಅಲರ್ಟ್ ಆಗಿದೆ.


ದಕ್ಷಿಣ ಕನ್ನಡ ಜಿಲ್ಲೆಯ ಮೇಲೆ ವಿಶೇಷ ನಿಗಾ ಇಡಲು ಸೂಚಿಸಲಾಗಿದೆ.

- Advertisement -


ಇಂದು ಬೆಳಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳು ಹಾಗೂ ಪ್ರತಿ ಜಿಲ್ಲೆಯ ಡಿಹೆಚ್ ಒಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಹತ್ವದ ಸಭೆ ನಡೆದಿದ್ದು ಆರೋಗ್ಯ ಇಲಾಖೆಈಗ ಪ್ರತ್ಯೇಕ ಸುತ್ತೋಲೆ ಬಿಡುಗಡೆ ಮಾಡಿದೆ.


ದಕ್ಷಿಣ ಕನ್ನಡದ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಶಂಕಿತ ಪ್ರಕರಣಗಳನ್ನು ದಾಖಲಿಸಿಕೊಂಡು, ಚಿಕಿತ್ಸೆ ನೀಡಬೇಕು ಎಂದು ಸುತ್ತೋಲೆಯಲ್ಲಿ ದಕ್ಷಣ ಕನ್ನಡ ಜಿಲ್ಲೆಗೆ ಹೆಚ್ಚಿನ ಅಲರ್ಟ್ಗೆ ಸೂಚಿಸಿದೆ.
ಇನ್ನು ಶಂಕಿತ ಪ್ರಕರಣದ ಕುರಿತು ಜಿಲ್ಲಾ ಕಣ್ಗಾವಲು ಕಚೇರಿಗೆ ಮಾಹಿತಿ ನೀಡಬೇಕು. ನಿಫಾ ವೈರಸ್ ನಿರ್ವಹಣೆಗಾಗಿ ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಪ್ರತ್ಯೇಕ 10 ಹಾಸಿಗೆಯ ವಾರ್ಡ್ ಕಾಯ್ದಿರಿಸಲು ಸುತ್ತೋಲೆಯಲ್ಲಿ ಸೂಚಿಸಲಾಗಿದೆ. ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಮತ್ತು ಔಷಧಿಗಳನ್ನು ಒಳಗೊಂಡಂತೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲು ತಿಳಿಸಲಾಗಿದೆ. ಅಗತ್ಯವಿರುವ ಔಷಧಿಗಳನ್ನು ಶೇಖರಿಸಲು ಹಾಗೂ ನಿಫಾ ರೋಗ ಲಕ್ಷಣಗಳ ಕುರಿತು ಕ್ಷೇತ್ರ ಸಿಬ್ಬಂದಿಗೆ ತರಬೇತಿ ನೀಡುವ ವ್ಯವಸ್ಥೆ ಮಾಡಬೇಕು. ಯಾವುದೇ ಶಂಕಿತ ಪ್ರಕರಣಗಳ ಮಾದರಿಯನ್ನು ಪುಣೆಯ ಎನ್ಐವಿ ಲ್ಯಾಬ್ ಗೆ ಕಳುಹಿಸಲು ವ್ಯವಸ್ಥೆ ಮಾಡಬೇಕು. ಸಾರ್ವಜನಿಕರಿಗೆ ಈ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಮಾಡಬೇಕು ಎಂದು ಸೂಚಿಸಲಾಗಿದೆ.



Join Whatsapp