ಚೈತ್ರಾ ಕುಂದಾಪುರ ಜೀವನದಲ್ಲಿ ಒಮ್ಮೆಯೂ ನನ್ನ ಮನೆಗೆ ಬಂದಿಲ್ಲ : ಸುರೈಯ್ಯಾ ಅಂಜುಮ್ ಸ್ಪಷ್ಟನೆ

Prasthutha|

- Advertisement -

‘ಚೈತ್ರಾಳಿಗೆ ಆಶ್ರಯ ನೀಡಿದ್ದೇನೆ ಎಂಬ ಸುದ್ದಿ ಶುದ್ಧ ಸುಳ್ಳು’

‘ನನಗೆ ಈವರೆಗೆ ಸಿಸಿಬಿಯಿಂದ ಯಾವುದೇ ನೋಟಿಸ್ ಬಂದಿಲ್ಲ’

- Advertisement -

ಮಂಗಳೂರು : ಬಿಜೆಪಿ ಟಿಕೆಟ್ ನೀಡುವುದಾಗಿ ಬಹುಕೋಟಿ ವಂಚನೆ ಮಾಡಿರುವ ಪ್ರಕರಣದಲ್ಲಿ ಬಂಧನಕ್ಕೊಳಪಟ್ಟಿರುವ ಚೈತ್ರಾ ಕುಂದಾಪುರ ಅವರಿಗೆ ಆಶ್ರಯ ನೀಡಿರುವ ಆರೋಪದ ಬಗ್ಗೆ ಕಾಂಗ್ರೆಸ್ ವಕ್ತಾರೆ ಸುರೈಯ್ಯಾ ಅಂಜುಂ ಅವರು ಪ್ರಸ್ತುತ ನ್ಯೂಸ್‌ಗೆ ಸ್ಪಷ್ಟನೆ ನೀಡಿದ್ದಾರೆ. ‘ನನ್ನ ವಿರುದ್ಧ ಸುಳ್ಳು ಸುದ್ದಿ ಪ್ರಸಾರ ಮಾಡಲಾಗಿದೆ, ನನ್ನ ವಿರುದ್ಧ ಅಪಪ್ರಚಾರ ನಡೆಯುತ್ತಿದೆ’ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಪ್ರಸ್ತುತ ನ್ಯೂಸ್‌ಗೆ ದೂರವಾಣಿ ಮೂಲಕ ಸ್ಪಷ್ಟನೆ ನೀಡಿರುವ ಅವರು, ಚೈತ್ರಾಳ ಪ್ರಕರಣಕ್ಕೆ ಸಂಬಂಧಿಸಿ ಸಿಸಿಬಿ ಪೊಲೀಸರಿಂದ ನನಗೆ ಈವರೆಗೆ ಯಾವುದೇ ನೋಟಿಸ್ ಬಂದಿಲ್ಲ. ನೋಟಿಸ್ ಬಂದಿದೆ ಎಂಬ ಸುದ್ದಿ ಕೂಡ ಸುಳ್ಳಿನಿಂದ ಕೂಡಿದೆ ಎಂದಿದ್ದಾರೆ. ಸುಳ್ಳು ಸುದ್ದಿ ಪ್ರಸಾರ ಮಾಡುತ್ತಿರುವವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವ ಬಗ್ಗೆ ಚಿಂತನೆ ನಡೆಸುತ್ತಿರುವುದಾಗಿ ಅವರು ತಿಳಿಸಿದರು.

‘ಚೈತ್ರಾ ಕುಂದಾಪುರ ಮತ್ತು ನನಗೆ ಗೆಳೆತನ ಇರುವುದು ನಿಜ, ನಾವು ಸಹೋದ್ಯೋಗಿಯಾಗಿದ್ದೆವು, ಆದರೆ ಆಕೆ ಒಮ್ಮೆಯೂ ನನ್ನ ಮನೆಗೆ ಬಂದಿಲ್ಲ, ಕಳೆದ ಒಂದು ವಾರದಲ್ಲಿ ನಾನು ಆಕೆಗೆ ಆಶ್ರಯವೂ ನೀಡಿಲ್ಲ ಎಂದರು. ಸಿಸಿಬಿಯಲ್ಲಿ ಚೈತ್ರಾ ವಿರುದ್ಧ ಪ್ರಕರಣ ದಾಖಲಾಗಿರುವುದು ನನಗೆ ಇವತ್ತೇ ತಿಳಿಯಿತು ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ಸದ್ಯ ನಾನು ಬೆಡ್ ರೆಸ್ಟ್‌ನಲ್ಲಿದ್ದು ಹೊರಗೆ ಬಂದು ಮಾತನಾಡುವ ಪರಿಸ್ಥಿತಿಯಲ್ಲಿ ಇಲ್ಲ ಎಂದು ಅಳಲು ತೋಡಿಕೊಂಡ ಸುರೈಯ್ಯ ಅವರು ಈ ಬೆಳವಣಿಗೆಯಿಂದ ನನ್ನ‌ ಮನಸ್ಸಿಗೆ ಘಾಸಿಯಾಗಿದೆ ಎಂದು ನೋವು ತೋಡಿಕೊಂಡರು.