ನೈಜೇರಿಯಾದ ಡ್ರಗ್ ಪೆಡ್ಲರ್ ಬಂಧನ: 25 ಲಕ್ಷ ಮೌಲ್ಯದ ಎಂಡಿಎಂಎ ಜಪ್ತಿ

Prasthutha|

ಬೆಂಗಳೂರು: ಎಲೆಕ್ಟ್ರಾನಿಕ್’ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡ್ರಗ್ ಪೆಡ್ಲಿಂಗ್’ನಲ್ಲಿ ತೊಡಗಿದ್ದ ನೈಜೇರಿಯಾದ ಡ್ರಗ್ ಪೆಡ್ಲರ್ ನನ್ನು ಬಂಧಿಸಿರುವ ಸಿಸಿಬಿ ಪೊಲೀಸರು 25 ಲಕ್ಷ ರೂ. ಮೌಲ್ಯದ ಮಾದಕವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

- Advertisement -

ನೈಜೇರಿಯಾದ ಅಗ್ಬು ಚಿಕ್ಕೆ ಅಂಟೋನಿ ಬಂಧಿತ ಆರೋಪಿಯಾಗಿದ್ದು ಆತನಿಂದ 25 ಲಕ್ಷ ರೂ.ಮೌಲ್ಯದ ನಿಷೇಧಿತ ಮಾದಕ ಮತ್ತು ಮನೋಪರಿಣಾಮಕ ವಸ್ತುವಾದ 250 ಗ್ರಾಂ ತೂಕದ ಎಂಡಿಎಂಎ ಕ್ರಿಸ್ಟಲ್, ಮೊಬೈಲ್, ಪ್ಯಾಕೇಟ್ ಎಲೆಕ್ಟ್ರಾನಿಕ್ ತೂಕದ ಯಂತ್ರ, 700 ರೂಗಳನ್ನು ಜಪ್ತಿ ಮಾಡಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ ತಿಳಿಸಿದ್ದಾರೆ.

ಆರೋಪಿಯು 4 ವರ್ಷಗಳ ಹಿಂದೆ ಬ್ಯುಸಿನೆಸ್  ವೀಸಾ ಪಡೆದು ಭಾರತಕ್ಕೆ ಬಂದಿದ್ದು ಕಡಿಮೆ ಸಮಯದಲ್ಲಿ ಹೆಚ್ಚಿನ ಹಣ ಗಳಿಸುವ ದುರುದ್ದೇಶದಿಂದ ಗೋವಾದಲ್ಲಿ ನೆಲೆಸಿರುವ ಆಫ್ರಿಕಾ ಮೂಲದ ಪರಿಚಯಸ್ಥ ವ್ಯಕ್ತಿಗಳಿಂದ ಕಡಿಮೆ ಬೆಲೆಗೆ ಮಾದಕ ವಸ್ತು ಎಂಡಿಎಂಎ ಕ್ರಿಸ್ಟಲ್ ಅನ್ನು ಖರೀದಿಸಿ ಒಂದು ಗ್ರಾಂ ಗೆ 10ರಿಂದ 12 ಸಾವಿರ ರೂಗಳಂತೆ ಎಲೆಕ್ಟ್ರಾನಿಕ್ ಸಿಟಿ ಸುತ್ತಮುತ್ತಲ ಕಾಲೇಜು ವಿದ್ಯಾರ್ಥಿಗಳಿಗೆ, ಐಟಿ/ಬಿಟಿ ಉದ್ಯೋಗಿಗಳಿಗೆ ಮಾರಾಟ ಮಾಡಿ ಹೆಚ್ಚಿನ ಹಣ ಸಂಪಾದನೆಯಲ್ಲಿ ತೊಡಗಿರುವುದು ಪ್ರಾಥಮಿಕ ವಿಚಾರಣೆಯಿಂದ ತಿಳಿದು ಬಂದಿದೆ.

- Advertisement -

ಬಂಧಿತ ಆರೋಪಿಯ ವಿರುದ್ಧ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಎನ್’ಡಿಪಿಎಸ್ ಹಾಗೂ ವಿದೇಶಿಯರ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ ಎಂದು ತಿಳಿಸಿದರು.

Join Whatsapp