ಬೆಂಗಳೂರು: ಇತ್ತೀಚೆಗೆ ದೇಶದೆಲ್ಲೆಡೆ PFI ಮತ್ತು SDPI ಅನ್ನು ಗುರಿಯಾಗಿಸಿ NIA ನಡೆಸಿದ ದಾಳಿ ಖಂಡನೀಯ ಎಂದು ನಿವೃತ್ತ ಪ್ರಾಧ್ಯಾಪಕಿ ಡಾ. ಪ್ರಮೀಳಾ ದೇವಿ ಬಿ.ಕೆ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸಿರುವ ಅವರು, ಸಾರ್ವಜನಿಕ ಸೇವೆಯಲ್ಲಿ ತೊಡಗಿರುವ ಜನ ಬೆಂಬಲಿತ ಸಂಸ್ಥೆಯೊಂದು ಫ್ಯಾಸಿಸಮ್ ಅನ್ನು ವಿರೋಧಿಸುತ್ತದೆ ಮತ್ತು ಮುಸ್ಲಿಮರನ್ನು ಪ್ರತಿನಿಧಿಸುತ್ತಿದೆ ಎಂಬ ಕಾರಣಕ್ಕಾಗಿ ಪಕ್ಷಪಾತದ ಆಪಾದನೆ ಹೊರಿಸಿ, ಕ್ರೂರ ಶಾಸನದ ಅಡಿ ಕ್ರಮ ಕೈಗೊಂಡು ಬಿಜೆಪಿ ಸರ್ಕಾರವು ನಡೆಸಿರುವ ದಾಳಿಗಳು ತನ್ನ ಫ್ಯಾಸಿಸ್ಟ್ ಮುಖವನ್ನು ಬಯಲು ಮಾಡಿದೆ ಎಂದು ಅವರು ಕಿಡಿಕಾರಿದ್ದಾರೆ.
ಮತೀಯ ದ್ವೇಷದ ವಿಷ ಗಾಳಿಯನ್ನು ದೇಶಾದ್ಯಂತ ಹರಡಿ, ಭಾರತೀಯರು ಭಯ, ಆತಂಕದಲ್ಲಿ ದಿನ ದೂಡುವಂತೆ ಮಾಡಿರುವುದು ಬಿಜೆಪಿ ಮತ್ತು ಆರೆಸ್ಸೆಸ್’ನ ಸಾಧನೆಯಾಗಿದೆ. ಅಲ್ಪಸಂಖ್ಯಾತರ ಜನಾಭಿಪ್ರಾಯಗಳನ್ನು ಆಲಿಸುವುದು ಪ್ರಜಾಪ್ರಭುತ್ವ ಸರ್ಕಾರದ ಜವಾಬ್ದಾರಿಯಾಗಿದೆ. ಅದು ದಾರಿ ತಪ್ಪಿದಾಗ ಎಚ್ಚರಿಸಬೇಕಾದದ್ದು ದೇಶದ ಪ್ರಜ್ಞಾವಂತ ನಾಗರಿಕರ ಕರ್ತವ್ಯವಾಗಿದೆ ಎಂದು ಹೇಳಿದ್ದಾರೆ