ಅಬುಧಾಬಿ: 2019ರ ಏಕದಿನ ವಿಶ್ವಕಪ್ ಫೈನಲ್’ನಲ್ಲಿ ಮುಖಾಮುಖಿಯಾಗಿದ್ದ ನ್ಯೂಜಿಲೆಂಡ್ –ಇಂಗ್ಲೆಂಡ್ ತಂಡಗಳು ಬುಧವಾರ ನಡೆಯಲಿರುವ ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಮತ್ತೊಮ್ಮೆ ಮುಖಾಮುಖಿಯಾಗುತ್ತಿವೆ. ಏಕದಿನ ವಿಶ್ವಕಪ್’ನ ರೋಚಕ ಫೈನಲ್ ಹಣಾಹಣಿಯಲ್ಲಿ ಕೈಯಂಚಿನಲ್ಲಿ ಕಳೆದುಕೊಂಡಿದ್ದ ವಿಶ್ವಕಪ್ ಕಿರೀಟಕ್ಕೆ ಮುಯ್ಯಿ ತೀರಿಸಿಕೊಳ್ಳಲು ವಿಲಿಯಮ್ಸನ್ ಬಳಗ ಕಠಿಣ ಅಭ್ಯಾಸ ನಡೆಸಿದೆ.
ಅಬುಧಾಬಿಯಲ್ಲಿ ಸಂಜೆ ನಡೆಯಲಿರುವ ಅಂತಿಮ ನಾಲ್ಕರ ಘಟ್ಟದ ಹಣಾಹಣಿಯಲ್ಲಿ ಜಿದ್ದಾಜಿದ್ದಿನ ಪಂದ್ಯ ನಿರೀಕ್ಷಿಸಲಾಗಿದೆ. ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡವಾಗಿರುವ ಇಂಗ್ಲೆಂಡ್’ಗೆ ಪ್ರಧಾನ ಸುತ್ತಿನಲ್ಲಿ ಗಾಯದ ಸಮಸ್ಯೆ ತಿರುಗುಬಾಣವಾಗುವ ಸಾಧ್ಯತೆಯಿದೆ. ತಂಡದ ಸ್ಟಾರ್ ಬ್ಯಾಟರ್ ಜೇಸನ್ ರಾಯ್ ಹಾಗೂ ಪ್ರಮುಖ ಬೌಲರ್ ಟೈಮಲ್ ಮಿಲ್ಸ್ ಗಾಯದ ಕಾರಣದಿಂದಾಗಿ ಸೆಮಿ ಹೋರಾಟದಿಂದ ಹಿಂದೆ ಸರಿದಿದ್ದಾರೆ. ಇದು ಮಾರ್ಗನ್ ಪಡೆಯನ್ನು ಚಿಂತೆಗೀಡುಮಾಡಿದೆ. ಅಬುಧಾಬಿಯ ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿದ್ದು, ರಾಯ್ ಅನುಪಸ್ಥಿತಿ ಕಾಡುವುದು ನಿಶ್ಚಿತ.
ಸೂಪರ್-12 ಹಂತದ ಮೊದಲ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಶರಣಾಗಿದ್ದ ನ್ಯೂಜಿಲೆಂಡ್ ನಂತರದ 4 ಪಂದ್ಯಗಳಲ್ಲೂ ಗೆದ್ದು ಸೆಮಿಫೈನಲ್’ಗೆ ಅರ್ಹತೆ ಪಡೆದಿತ್ತು. ಮತ್ತೊಂದೆಡೆ ಮೊದಲ ನಾಲ್ಕೂ ಪಂದ್ಯಗಳನ್ನು ಗೆದ್ದು ಬೀಗಿದ್ದ ಇಂಗ್ಲೆಂಡ್ ಕೊನೇಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ 10 ರನ್’ಗಳಿಂದ ಶರಣಾಗಿತ್ತು.
ಟಿ-20 ಪಂದ್ಯಾಟದಲ್ಲಿ ಉಭಯ ತಂಡಗಳು ಇದುವರೆಗೂ 20 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, 13 ಪಂದ್ಯಗಳಲ್ಲಿ ಇಂಗ್ಲೆಂಡ್ ಹಾಗೂ 7 ಪಂದ್ಯಗಳಲ್ಲಿ ನ್ಯೂಜಿಲೆಂಡ್ ಗೆಲುವು ಸಾಧಿಸಿದೆ.