ಮಾನ್ಯ ಪ್ರಧಾನಮಂತ್ರಿಗಳು ಕಪ್ಪು ಹಣವನ್ನು ಮಟ್ಟ ಹಾಕುತ್ತೇವೆ ಎಂದು ಘೋಷಣೆ ಮಾಡಿ ನೋಟು ಅಮಾನ್ಯೀಕರಣ ಮಾಡಿದರು. ಅದರಿಂದ ಮಹಾ ಬದಲಾವಣೆಯಾಗಲಿದೆ ಎಂಬ ಭ್ರಮೆ ಸಷ್ಟಿಸಲಾಯಿತು. ಬದಲಾವಣೆ ಆಗಿದ್ದೇನೋ ನಿಜ, ಬಡವರ ಬದುಕು ಬೀದಿಗೆ ಬಿತ್ತು. ಧನಿಕರ ಕಪ್ಪುಹಣ ತನ್ನ ಕೊಳೆ ತೊಳೆದುಕೊಂಡು ಬಿಳಿಯಾಗಿ ಬ್ಯಾಂಕ್ ಖಾತೆಯಲ್ಲಿ ಭದ್ರವಾಯಿತು. ಸಾಸಿವೆ ಡಬ್ಬಾದ ಚಿಲ್ಲರೆಯನ್ನೂ ಕಳೆದುಕೊಂಡು ಹೆಣ್ಣುಮಕ್ಕಳು ಮತ್ತೆ ಪುರುಷ ಪ್ರಧಾನ ವ್ಯವಸ್ಥೆಯ ಮುಂದೆ ಕೈ ಚಾಚುವ ಪರಿಸ್ಥಿತಿ ಬಂತು.
ಈಗ ಅಂತಹದೇ ಭ್ರಮೆಯನ್ನು ಹುಟ್ಟಿಸಿ ‘ಶಿಕ್ಷಣ ನೀತಿ-2020’ನ್ನು ಜಾರಿಗೆ ತರಲಾಗುತ್ತಿದೆ. ದೇಶದ ಭವಿಷ್ಯಕ್ಕೆ ಅಡಿಪಾಯ ಹಾಕುವ ಶಿಕ್ಷಣ ವ್ಯವಸ್ಥೆಯ ನೀತಿಯನ್ನು ಪ್ರಜಾಪ್ರಭುತ್ವಕ್ಕೆ ಮಾದರಿಯಾದ ದೇಶದಲ್ಲಿ ಯಾವುದೇ ಚರ್ಚೆಯಿಲ್ಲದೆ ನೇರವಾಗಿ ಜಾರಿಗೆ ತರಲಾಗಿದೆ. ಇದಕ್ಕಿಂತ ವ್ಯಂಗ್ಯ ಬಹುಶಃ ಇನ್ನೊಂದಿರಲಾರದು.
ನೀತಿ ರೂಪಿಸುವ ಮೊದಲು 676 ಜಿಲ್ಲೆಗಳ ಎರಡೂವರೆ ಲಕ್ಷ ಗ್ರಾಮ ಪಂಚಾಯತ್ ಗಳ, ಆರು ಸಾವಿರಕ್ಕೂ ಹೆಚ್ಚು ಬ್ಲಾಕ್ ಗಳ, ಆರು ಸಾವಿರ ನಗರ ಸ್ಥಳೀಯ ಸಂಸ್ಥೆಗಳಿಂದ ಸುಮಾರು ಎರಡು ಲಕ್ಷ ಸಲಹೆ ಪಡೆಯಲಾಗಿದೆ. 2014ರಿಂದ ತಯಾರಿ ಆರಂಭಿಸಿ 2019ರ ವೇಳೆಗೆ ಪೂರ್ಣಗೊಳಿಸಲಾಗಿದೆ.
ಕೇಂದ್ರ ಸರ್ಕಾರದಲ್ಲಿ ಸಂಪುಟ ಕಾರ್ಯದರ್ಶಿಯಾಗಿದ್ದ ಟಿ.ಎಸ್.ಆರ್.ಸುಬ್ರಮಣಿಯನ್ ರಚಿಸಿದ್ದ ಕರಡನ್ನು ಇಸ್ರೋದ ಮಾಜಿ ಅಧ್ಯಕ್ಷ ಕೃಷ್ಣಸ್ವಾಮಿ ಕಸ್ತೂರಿ ರಂಗನ್ ನೀತಿಗೆ ಅಂತಿಮ ಸ್ಪರ್ಷ ನೀಡಿದ್ದಾರೆ. ಶಿಕ್ಷಣ ನೀತಿಯ ಕರಡು 484 ಪುಟಗಳಿತ್ತು. ಅದನ್ನು ಸಂಕ್ಷಿಪ್ತಗೊಳಿಸಿ 87 ಪುಟಗಳಿಗೆ ಸಂಕಲನಗೊಳಿಸಿದ್ದು ಯಾರು ಎಂಬುದನ್ನು ಕೇಂದ್ರ ಸರ್ಕಾರ ಬಹಿರಂಗ ಪಡಿಸಿಲ್ಲ. ಒಟ್ಟಾರೆ ಶಿಕ್ಷಣ ನೀತಿಯನ್ನು ಗಮನಿಸಿದರೆ ನಾಗಪುರದ ಸರಸಂಘಚಾಲಕರ ತಂಡ ಕುಳಿತು ತಿದ್ದಿತೀಡಿರುವುದು ಸ್ಪಷ್ಟವಾಗಿದೆ.
ಶಿಕ್ಷಣ ಖಾಸಗೀಕರಣವಾಗಿದೆ, ಬಡವರ್ಗಕ್ಕೆ ಕೈಗೆಟುಕದ ಗತಿಗೆ ತಲುಪಿದೆ. ಸರ್ಕಾರಿ ಶಾಲೆಗಳಿರುವುದಕ್ಕೆ ಕನಿಷ್ಠ ಪ್ರೌಢಶಾಲೆಗಳವರೆಗೂ ಕಲಿಯಲು ಶೋಷಿತ ಹಾಗೂ ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಸಾಧ್ಯವಾಗುತ್ತಿದೆ. ಹೊಸ ಶಿಕ್ಷಣ ನೀತಿ ದೇಶದಲ್ಲಿರುವ 45 ಸಾವಿರ ಕಾಲೇಜುಗಳಿಗೂ ಸ್ವಾಯತ್ತ ಸ್ಥಾನ ನೀಡುವುದಾಗಿ ಅರ್ಥಾತ್ ಸ್ವಾತಂತ್ರ್ಯ ನೀಡುವುದಾಗಿ ಘೋಷಿಸಿದೆ. ಕಾಲೇಜುಗಳು ತಾವೇ ಪರೀಕ್ಷೆ ನಡೆಸಿ, ಮೌಲ್ಯಮಾಪನ ಮಾಡಿ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರ ನೀಡಬೇಕು, ಶಿಕ್ಷಣಕ್ಕೆ ಅಗತ್ಯವಾದ ಸಂಪನ್ಮೂಲಗಳನ್ನು ತಾವೇ ಒದಗಿಸಿಕೊಳ್ಳಬೇಕು ಎಂಬುದನ್ನು ಪರೋಕ್ಷವಾಗಿ ಹೇಳಲಾಗಿದೆ. ಶಿಕ್ಷಣಕ್ಕಾಗಿ ಬಜೆಟ್ ನಲ್ಲಿ ಜಿಡಿಪಿಯ ಶೇ.4ರಷ್ಟನ್ನು ಮೀಸಲಿಡುತ್ತಿರುವ ಅನುದಾನವನ್ನು ನೂತನ ನೀತಿ ಶೇ.6ಕ್ಕೆ ಹೆಚ್ಚಿಸಲು ಶಿಫಾರಸ್ಸು ಮಾಡಿದೆ. ಆಧುನಿಕತೆ, ದುಬಾರಿ ಕಾಲದಲ್ಲಿ ಶಿಕ್ಷಣ ಮತ್ತು ಆರೋಗ್ಯ ಜನ ಸಾಮಾನ್ಯರ ಕೈಗೆಟುಕದಾಗಿವೆ. ಈ ಎರಡು ಬಾಬ್ತುಗಳಿಗೆ ಜಿಡಿಪಿಯ ಶೇ.25ರಷ್ಟನ್ನು ಮೀಸಲಿಡಬೇಕು ಎಂಬ ಬೇಡಿಕೆ ಕನಿಷ್ಠ ಕಾಗದದ ಮೇಲಾದರೂ ದಾಖಲಾಗಿಲ್ಲ. ನೂತನ ನೀತಿಯಲ್ಲಿ ಅನುದಾನದ ಮೊತ್ತವನ್ನು ಶೇ.25ಕ್ಕೆ ಹೆಚ್ಚಿಸಿದ್ದರೆ ಮುಂದೊಂದು ದಿನ ಅದು ಜಾರಿಯಾಗಬಹುದು ಎಂಬ ನಿರೀಕ್ಷೆಗಳಾದರೂ ಇರುತ್ತಿದ್ದವು. ಆದರೆ ಶಿಕ್ಷಣ ನೀತಿಯುದ್ಧಕ್ಕೂ ಇದೇ ರೀತಿಯ ಖಾಲಿ ಗೋಪುರಗಳನ್ನು ಕಟ್ಟಲಾಗಿದೆ. ಅಲ್ಲಿ ಹುಸಿತನವೇ ಎದ್ದು ಕಾಣುತ್ತಿದೆ.
ಪ್ರಮುಖವಾಗಿ ಬೇಕಾದದ್ದೇ ಅಲ್ಲಿಲ್ಲ:
ಹೊಸ ಶಿಕ್ಷಣ ನೀತಿಯ ಕರಡು ಸಿದ್ಧಪಡಿಸುವ ವೇಳೆ ಪ್ರಮುಖವಾಗಿ ಕೇಳಿ ಬಂದ ಸಲಹೆ ಏಕರೂಪ ಶಿಕ್ಷಣ ಪದ್ಧತಿ. ಏಕರೂಪ ನಾಗರೀಕ ಸಂಹಿತೆ ಜಾರಿಗೆ ತರಲು ತುದಿಗಾಲಲ್ಲಿ ನಿಂತಿರುವ ಬಿಜೆಪಿ ಸರ್ಕಾರ, ಈಗಾಗಲೇ ‘ಒಂದು ದೇಶ ಒಂದು ತೆರಿಗೆ’ ಎಂದು ಜಿಎಸ್ ಟಿ ಹೆಸರಲ್ಲಿ ಮಕ್ಮಲ್ ಟೋಪಿ ಹಾಕಿದೆ. ಅದೇ ಹುಮ್ಮಸ್ಸಿನಲ್ಲಿ ‘ಒಂದು ದೇಶ ಒಂದೇ ಶಿಕ್ಷಣ’ ಎಂಬ ನೀತಿ ಜಾರಿಗೆ ತರಬಹುದು ಎಂಬ ನಿರೀಕ್ಷೆಗಳು ದೊಡ್ಡದಾಗಿದ್ದವು. ಆದರೆ ಬಿಜೆಪಿ ಸರ್ಕಾರ ಹೇಳಿಕೊಳ್ಳಲಷ್ಟೇ ಪೌರುಷ ಪ್ರದರ್ಶನ ಮಾಡುತ್ತದೆ. ಒಳಗೆಲ್ಲಾ ಡಂಭಾಚಾರ ಎಂಬುದಕ್ಕೆ ಶಿಕ್ಷಣ ನೀತಿ ಸ್ಪಷ್ಟ ಉದಾಹರಣೆ. ಪ್ರಸ್ತುತ ದೇಶದಲ್ಲಿ ಸೆಂಟ್ರಲ್, ಸ್ಟೇಟ್, ಇಂಟರ್ ನ್ಯಾಷನಲ್ ಎಂದು ಹಲವಾರು ವಿಧಗಳ ಶಿಕ್ಷಣ ಪಠ್ಯಕ್ರಮಗಳಿವೆ. ಇವನ್ನೆಲ್ಲಾ ಬದಲಾಯಿಸಿ ಏಕರೂಪ ಪಠ್ಯಕ್ರಮ ವ್ಯವಸ್ಥೆ ಜಾರಿಗೆ ತರಬೇಕು ಎಂಬುದು ಶಿಕ್ಷಣ ತಜ್ಞರ ಬೇಡಿಕೆಯಾಗಿತ್ತು. ಸೋಕಾಲ್ಡ್ ಪ್ರತಿಷ್ಠಿತ ಶಾಲೆಗಳಲ್ಲಿ ಮತ್ತು ಮುರುಕಲು ಹೆಂಚಿನ ಸರ್ಕಾರಿ ಶಾಲೆಯಲ್ಲಿ ಎರಡು ಕಡೆ ಒಂದೇ ಪಠ್ಯ ಬೋಧಿಸಲಾಗುವುದಾದರೆ ಬಡವರೇಕೆ ಸಾಲ ಮಾಡಿ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳುಹಿಸುತ್ತಾರೆ. ಶ್ರೀಮಂತರು ಕೂಡ ಸರ್ಕಾರಿ ಶಾಲೆಗೆ ತಮ್ಮ ಮಕ್ಕಳನ್ನು ಕಳುಹಿಸಲು ಮುಂದಾಗುತ್ತಾರೆ. ಡೊನೇಷನ್ ಮಾಫಿಯಾ ತನ್ನಷ್ಟಕ್ಕೆ ತಾನೇ ಸತ್ತು ಹೋಗುತ್ತದೆ. ಸರ್ಕಾರ ಮೂಲಭೂತ ಸೌಲಭ್ಯ ಅಭಿವದ್ಧಿಗೆಂದು ಕೋಟ್ಯಂತರ ರೂಪಾಯಿ ವೆಚ್ಚ ಮಾಡುವ ನೆಪದಲ್ಲಿ ಲೂಟಿ ಹೊಡೆಯುವುದು ತಪ್ಪುತ್ತದೆ. ಶಿಕ್ಷಣದ ಖರ್ಚು ಕಡಿಮೆಯಾದರೆ ಪೋಷಕರೇ ಸರ್ಕಾರಿ ಶಾಲೆಗಳಿಗೆ ಅಗತ್ಯ ಮೂಲಸೌಲಭ್ಯ ಒದಗಿಸಿಕೊಡುತ್ತಾರೆ. ಸರ್ಕಾರ ಏಕರೂಪ ಪಠ್ಯಕ್ರಮ ಜಾರಿಗೆ ತಂದು ಅದನ್ನು ಬೋಧಿಸುವ ಶಿಕ್ಷಕರಿಗೆ ಸೂಕ್ತ ತರಬೇತಿ ನೀಡಿದರೆ ಸಾಕು. ಆದರೆ ಈ ಬಗ್ಗೆ ನೂತನ ನೀತಿ ಚಕಾರವೆತ್ತಿಲ್ಲ. ಅಗತ್ಯವಾದದ್ದನ್ನೇ ಮಾಡದೆ ಸಮಾನತೆ ಶಿಕ್ಷಣದ ಮಾರ್ಜಾಲ ಜಪ ಮಾಡಿದೆ.
ಹೊಸ ನೀತಿಯಲ್ಲಿ ಸಮಾನತೆ ವಿಷಯ ಪ್ರಸ್ತಾಪವಾಗಿರುವ ಸಂದರ್ಭ ನೋಡಿದರೆ ಶಿಕ್ಷಣದಲ್ಲಿ ನೀಡುತ್ತಿರುವ ಮೀಸಲಾತಿಯನ್ನು ಕಿತ್ತು ಹಾಕಿ, ಎಲ್ಲರಿಗೂ ಒಂದೇ ರೀತಿ ಅವಕಾಶಗಳು ದೊರಕಿಸಿಕೊಡಬೇಕು ಎಂಬರ್ಥದಲ್ಲಿದೆ. ಅಲ್ಲಲ್ಲಿ ಹಿಂದುಳಿದ ಪ್ರದೇಶಗಳಿಗೆ, ಅವಕಾಶ ವಂಚಿತ ಸಮುದಾಯಗಳಿಗೆ ಹೆಚ್ಚಿನ ಅವಕಾಶ ನೀಡಬೇಕು ಎಂದು ಪ್ರಸ್ತಾಪಿಸಲಾಗಿದೆ. ಸಾಚಾರ್ ಸಮಿತಿ, ಮಂಡಲ್ ಕಮಿಷನ್ ಸೇರಿದಂತೆ ಅನೇಕ ಆಯೋಗಗಳು ದುರ್ಬಲ ವರ್ಗಗಳ ಶಿಕ್ಷಣ ವಂಚನೆಯ ಬಗ್ಗೆ ಪ್ರಸ್ತಾಪಿಸಿವೆ. ಶಿಕ್ಷಣಕ್ಕೆ ಹೆಚ್ಚಿನ ಅವಕಾಶ ನೀಡಿದರೆ ಸಮುದಾಯಗಳು ಅಭಿವದ್ಧಿಯಾಗುವ ಬಗ್ಗೆ ವಿವಿಧ ಸಮಿತಿಗಳಲ್ಲಿ ವಿವರಿಸಲಾಗಿದೆ.
ನೂತನ ಸಮಿತಿ ಯಾವ ಸಮಿತಿಯ ವರದಿಯನ್ನೂ ಗಣನೆಗೆ ತೆಗೆದುಕೊಂಡಿಲ್ಲ. ಹಲವಾರು ಗೊಂದಲಗಳನ್ನು ಹುಟ್ಟು ಹಾಕುತ್ತಿದೆ. ಒಂದು ಕಡೆ ಭಾರತೀಯ ಸನಾತ ಶಿಕ್ಷಣ ಪದ್ಧತಿ ಮರುಕಳಿಸಬೇಕು ಎಂದು ಹೇಳಿದರೆ ಮತ್ತೊಂದು ಕಡೆ ಆಧುನಿಕತೆಗೆ ಹೊಂದಿಕೊಳ್ಳುವಂತೆ ತಾಂತ್ರಿಕತೆ ಮತ್ತು ವೈಜ್ಞಾನಿಕತೆಯನ್ನು ಅಳವಡಿಕೊಳ್ಳಬೇಕು ಎಂದು ಪ್ರಸ್ತಾಪಿಸುತ್ತದೆ. ಸನಾತದ ಪದ್ಧತಿಯೇ ವೈಜ್ಞಾನಿಕತೆ ಎಂದು ವಾದ ಮಾಡುವವರಿಗೆ ಏನೂ ಹೇಳಲಾಗುವುದಿಲ್ಲ. ಮೂರ್ಖರನ್ನು ಬದಲಾಯಿಸಲು ಎಂದೂ ಸಾಧ್ಯವಿಲ್ಲ.
ಮೇಲ್ನೋಟಕ್ಕೆ ಹೇಳುವುದಾದರೆ ಪರಿಷ್ಕೃತ ಶಿಕ್ಷಣ ನೀತಿ ಈವರೆಗೂ ಅನಧಿಕೃತವಾಗಿ ನಡೆಯುತ್ತಿದ್ದ ಶಿಕ್ಷಣ ಕರಾಳ ದಂಧೆಗೆ ಮತ್ತು ಅದರ ಪರಿಣಾಮಗಳಿಗೆ ಮಾನ್ಯತೆ ನೀಡಲು ರೂಪಿಸಿದಂತಿದೆ. ಮೂರು ವರ್ಷಗಳಿಂದ ಮಕ್ಕಳಿಗೆ ಶಿಕ್ಷಣ ನೀಡುವುದು, ಉನ್ನತ ಶಿಕ್ಷಣವನ್ನೂ ಸಂಪೂರ್ಣ ಸ್ವಾಯತ್ತಗೊಳಿಸಿ ಖಾಸಗೀಕರಣ ಮಾಡುವುದು, ವೃತ್ತಿ ತರಬೇತಿ ಹೆಸರಿನಲ್ಲಿ ಪುಡಿಗಾಸು ಸಂಪಾದಿಸುವ ಶಿಕ್ಷಣ ಕೊಟ್ಟು ದುರ್ಬಲ ವರ್ಗದ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡುವ ಹುನ್ನಾರ ಹೊಸ ನೀತಿಯಲ್ಲಿ ಎದ್ದು ಕಾಣುತ್ತಿದೆ.
ನೂತನ ನೀತಿಯಲ್ಲಿ ಮಕ್ಕಳ ಕಲಿಕಾ ವಯೋಮಿತಿಯನ್ನು ಮೂರು ವರ್ಷಗಳಿಗೆ ಬದಲಾಯಿಸಲಾಗಿದೆ. ಆರು ವರ್ಷದ ಒಳಗಿನ ಮಕ್ಕಳ ಮಿದುಳು ಶೇ.80ರಷ್ಟು ವಿಕಸನಗೊಂಡಿರುತ್ತದೆ. ಆ ಹಂತದಲ್ಲಿ ವಿದ್ಯೆ ತುರುಕಿದರೆ ಜೀವನ ಪರ್ಯಂತ ಬೇರೂರಲಿದೆ ಎಂಬುದು ಶಿಕ್ಷಣ ನೀತಿಯನ್ನು ಪರಿಷ್ಕರಿಸಿದ ತಜ್ಞರ ಅಂಬೋಣ. ಅದಕ್ಕಾಗಿ ಈಗಾಗಲೇ ಖಾಸಗಿ ಶಿಕ್ಷಣ ವ್ಯವಸ್ಥೆ ಅನಧಿಕೃತವಾಗಿ ನಡೆಸುತ್ತಿರುವ ಎಲ್ ಕೆ ಜಿ, ಯುಕೆಜಿಗೆ ಅಧಿಕೃತ ಮುದ್ರೆ ಒತ್ತಲು ಅವಕಾಶ ಮಾಡಿಕೊಡಲಾಗುತ್ತಿದೆ. ಸರ್ಕಾರ ಕಡ್ಡಾಯ ಶಿಕ್ಷಣವನ್ನು 16 ವರ್ಷದವರೆಗೂ ನಿಗದಿ ಮಾಡಿತ್ತು, ಅದಕ್ಕೆ ಇನ್ನೂ ಎರಡು ವರ್ಷ ಸೇರಿಸಿ 18 ವರ್ಷಗಳವರೆಗೂ ಕಡ್ಡಾಯ ಶಿಕ್ಷಣ ನೀಡುವ ಘೋಷಣೆ ಮಾಡಲಾಗಿದೆ. ಏನನ್ನು ಕಲಿಯಬೇಕು ಎಂಬುದಕ್ಕಿಂತ ಹೇಗೆ ಕಲಿಯಬೇಕು ಎಂದು ಆಲೋಚಿಸುವ ಪ್ರಚೋದನೆಯೇ ನೂತನ ನೀತಿಯ ಮೂಲೋದ್ದೇಶ. ಮೂರನೇ ತರಗತಿಯ ವೇಳೆಗೆ ಮಕ್ಕಳು ಅಕ್ಷರ ಮಾಲೆಗಳು, ಗಣಿತದ ಕೂಡುವುದು, ಕಳೆಯುವುದು, ಗುಣಾಕಾರ, ಭಾಗಾಕಾರ, ಅಂಕಿಗಳು ಸೇರಿದಂತೆ ಮೂಲಭೂತ ಕಲಿಕೆ ಪೂರ್ಣಗೊಂಡಿರಬೇಕು ಎಂಬ ಗುರಿ ನಿಗದಿ ಪಡಿಸಲಾಗಿದೆ. ಅದಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡಿ 2025ರ ವೇಳೆಗೆ ಗುರಿ ತಲುಪಬೇಕು ಎಂಬ ಷರತ್ತು ವಿಧಿಸಲಾಗಿದೆ. 2030ರ ವೇಳೆಗೆ ನಮ್ಮ ಶಿಕ್ಷಣ ವ್ಯವಸ್ಥೆಯೇ ಬದಲಾಗಿರಬೇಕು. ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣದವರೆಗೂ ಹಲವಾರು ರೀತಿಯ ಶಿಫಾರಸ್ಸು ಮಾಡಲಾಗಿದೆ. ಆದರೆ ಯಾವುದು ಹೊಸದಲ್ಲ. ಹಳೆಯದನ್ನೇ ಒಂದಿಂಚು ಎತ್ತರಿಸಿ ಹೊಸ ಕಟ್ಟಡ ಕಟ್ಟುವ ಪ್ರಯತ್ನ ಮಾಡಲಾಗಿದೆ. ನೂತನ ಶಿಕ್ಷಣ ನೀತಿ ಭಾರತವನ್ನು ವಿಶ್ವಗುರುವಾಗಿಸುವುದಕ್ಕಿಂತ ದೇಶದ ಜನರಿಗೆ ವಿಷದ ಗುರುಕುಲವಾಗುವ ಆತಂಕವಿದೆ.
ದೇಶದಲ್ಲಿ 1986ರಲ್ಲಿ ಮೊದಲು ಜಾರಿಗೆ ಬಂದ ಶಿಕ್ಷಣ ನೀತಿ, 1992ರಲ್ಲಿ ಪರಿಷ್ಕರಣೆಗೊಂಡಿತ್ತು. ಅವೆರಡರಲ್ಲೂ ಇದ್ದ ಅಂಶಗಳನ್ನೆ ಮುಂದುವರೆಸಲಾಗಿದೆ. 16 ವರ್ಷದವರೆಗೂ ಕಡ್ಡಾಯ ಶಿಕ್ಷಣ ಎಂಬುದನ್ನು ಎರಡು ವರ್ಷಗಳಿಗೆ ಹೆಚ್ಚಿಸಿ 18 ವರ್ಷಕ್ಕೆ ಹೆಚ್ಚಿಸಲಾಗಿದೆ. 2009ರ ಶಿಕ್ಷಣ ಹಕ್ಕು ಕಾಯ್ದೆಯನ್ನು ಅಳವಡಿಸಿಕೊಂಡಿರುವುದರಿಂದ ಶಿಕ್ಷಣ ಕಡ್ಡಾಯಗೊಳಿಸಲು ಯಾವುದೇ ತೊಂದರೆ ಇಲ್ಲ ಎಂದು ಪ್ರತಿಪಾದಿಸಲಾಗಿದೆ. ಪ್ರಸ್ತುತ ಕಾಲ ಮಾನದಲ್ಲಿ ಎಲ್ಲರಿಗೂ ಶಿಕ್ಷಣದ ಮಹತ್ವ ಅರಿವಾಗಿದೆ. ತಮ್ಮ ಮಕ್ಕಳಿಗೆ ಸರ್ಕಾರ ಹೇಳಲಿ ಬಿಡಲಿ ಶಿಕ್ಷಣ ಕೊಡಿಸುವ ಪ್ರಯತ್ನ ಮಾಡುತ್ತಲೇ ಇರುತ್ತಾರೆ. ಸರ್ಕಾರ ಕಡ್ಡಾಯ ಶಿಕ್ಷಣಕ್ಕಿಂತ ಪ್ರಮುಖವಾಗಿ ಜಾರಿಗೆ ತರಬೇಕಿರುವುದು ಕಡ್ಡಾಯವಾದ ಉಚಿತ ಶಿಕ್ಷಣವನ್ನು. ಏಕರೂಪ ಶಿಕ್ಷಣ ಪದ್ಧತಿ ಜಾರಿಗೊಳಿಸಿ ಎಲ್ಲರಿಗೂ ಉಚಿತ ಶಿಕ್ಷಣ ಘೋಷಣೆ ಮಾಡಿದ್ದರೆ ಶಿಕ್ಷಣ ನೀತಿಗೊಂಡು ಸಾರ್ಥಕತೆ ಬರುತ್ತಿತ್ತು.