ಹಾವೇರಿ: ಇತ್ತೀಚಿಗೆ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಿಜೆಪಿ ಶಾಸಕಾಂಗ ಪಕ್ಷದ ತೀರ್ಮಾನದಂತೆ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿಯನ್ನು ಘೋಷಣೆ ಮಾಡಲಾಯಿತು. ಮರುದಿನ ಬೊಮ್ಮಾಯಿ ರಾಜ್ಯಪಾಲರಿಂದ ಪ್ರಮಾಣ ವಚನ ಸ್ವೀಕರಿಸಿದರು. ಇದಾದ ಬಳಿಕ ರಾಜ್ಯದಲ್ಲಿ ಸಚಿವ ಸಂಪುಟಕ್ಕೆ ಲಾಬಿ ನಡೆಯುತ್ತಿದೆ. ಹಲವರು ಇದೀಗಾಗಲೇ ಸಚಿವ ಸಂಪುಟಕ್ಕೆ ಸೇರ್ಪಡೆಗೊಳಿಸುವಂತೆ ಒತ್ತಾಯ ಮಾಡುತ್ತಿದ್ದಾರೆ. ಇಂದು ಶಾಸಕ ನೆಹರು ಓಲೇಕಾರ್ ಕೂಡ ಸಚಿವ ಸಂಪುಟದಲ್ಲಿ ನನಗೂ ಅವಕಾಶ ನೀಡಬೇಕು ಮುಖ್ಯಮಂತ್ರಿಗೆ ಒತ್ತಾಯಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸಂಪುಟಕ್ಕೆ ನನ್ನನ್ನು ಸೇರಿಸಿಕೊಳ್ಳಬೇಕು ಎಂದು ಒತ್ತಡ ಹಾಕುತ್ತಿದ್ದೇನೆ. ಅದೇ ರೀತಿ ನಮ್ಮ ಕಾರ್ಯಕರ್ತರೂ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಹಾವೇರಿ ಜಿಲ್ಲೆಯ ಪ್ರತಿಯೊಬ್ಭರೂ ಸಚಿವ ಸ್ಥಾನ ನೀಡುವಂತೆ ಆಗ್ರಹಿಸುತ್ತಿದ್ದಾರೆ. ಬಳಹ ದಿನಗಳಿಂದ ಶಾಸಕರಾಗಿ ಕೆಲಸ ಮಾಡುತ್ತಾ ಬಂದಿದ್ದೇನೆ. ಆದರೂ ಸಚಿವ ಸ್ಥಾನದ ಅವಕಾಶ ಸಿಕ್ಕಿಲ್ಲ. ಆದರೆ ಈ ಸಲನೂ ವಂಚಿತರಾಗಬಾರದು ಎಂದು ಗಣ್ಯರ, ಹಿರಿಯರ ಗಮನ ಸೆಳೆಯುವ ಉದ್ದೇಶದಿಂದಾಗಿ ಇವತ್ತು ಪ್ರತಿಭಟನೆಯ ರೂಪದಲ್ಲಿ ಆಗ್ರಹವನ್ನು ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಆಗ್ರಹಿಸಿದ ಪ್ರತಿಯೊಬ್ಬರನ್ನು ಅಭಿನಂದಿಸುತ್ತೇನೆ ಮತ್ತು ಈ ಹೋರಾಟ ಇಲ್ಲಿಗೆ ಅಂತ್ಯವಾಗುವುದಿಲ್ಲ ಬದಲಾಗಿ ಸಚಿವ ಸ್ಥಾನ ಸಿಗುವವರೆಗೂ ಮುಂದುವರಿಯಲಿದೆ. ಮೂರನೇ ಬಾರಿಯಾಗಿದ್ದರಿಂದ ನನಗೊಂದು ಅವಕಾಶ ಕೊಡಬೇಕು. ಮೂರು ಬಾರಿ ಆಯೋಗದ ಅಧ್ಯಕ್ಷರಾಗಿರುವ ನನಗೆ ಅನುಭವವಿದೆ ಎಲ್ಲಾ ರೀತಿಯ ಅರ್ಹತೆಯಿದೆ ಎಂದು ಹೇಳಿದ್ದಾರೆ.