ಭಾರತದ ರಾಜಕಾರಣದ ಘಟನೆಗಳನ್ನು ಮರುಓದಿಸಲು ಪ್ರಯತ್ನಿಸುವ ‘ಮಾಲಿಕ್’

Prasthutha|

 ಬಿರಿಯಾನಿ ಪಾತ್ರೆಯನ್ನು ಇಬ್ಬರು ಕೊಂಡೊಯ್ಯುವುದರಿಂದ ಆರಂಭವಾಗುವ ಮೊದಲ ದೃಶ್ಯ ಸುಲೇಮಾನ್ ಅಲಿಯವರ ಕಾರು ಮನೆಯಿಂದ ಹೊರಗೆ ಹೋಗುವಲ್ಲಿಗೆ ಅಂತ್ಯಗೊಳ್ಳುತ್ತದೆ. ಇಡೀ ದೃಶ್ಯವನ್ನು ಒಂದೇ ಶಾಟ್‌ ನಲ್ಲಿ ತೆಗೆಯುವ ನಿರ್ದೇಶಕರು ಚಿತ್ರಕ್ಕೆ ತಕ್ಕುದಾದ ಪರಿಚಯವನ್ನು ನೀಡುತ್ತಾರೆ. ಒಂದೇ ದೃಶ್ಯದಲ್ಲಿ ಇಡೀ ರಮದಾಪಳ್ಳಿಯ ಒಟ್ಟು ಚಿತ್ರಣ ಮತ್ತು ಕಥೆಯ ಹೂರಣವನ್ನು ಮಾತ್ರ ತಿಳಿಸದೆ ಪ್ರೇಕ್ಷಕರನ್ನು ಆರಂಭದಿಂದಲೇ ಭಿನ್ನವಾಗಿ ಚಿಂತಿಸುವಂತೆ ಮಾಡುತ್ತದೆ. ಒಟಿಟಿಯಲ್ಲಿ ಬಿಡುಗಡೆಯಾದ ‘ಮಾಲಿಕ್’ ಮಲಯಾಳಂ ಚಿತ್ರವು ಭಾರತೀಯ ರಾಜಕಾರಣವನ್ನು ನೇರ ನೇರವಾಗಿ ವಿಮರ್ಶಿಸುವ ಚಿತ್ರ.

- Advertisement -

ರಮದಾಪಳ್ಳಿಯ ಸುತ್ತ ನಡೆಯುವ ಚಿತ್ರದ ಕಥೆ ಮನುಷ್ಯ ಸಂಬಂಧ, ಪರಸ್ಪರ ವಿಶ್ವಾಸ, ಮಾನವ ಸಹಜ ಅಸೂಯೆ, ರಾಜಕೀಯ ಕುತಂತ್ರ ಹಾಗೂ ವಿಶೇಷವಾಗಿ ಪೊಲೀಸ್ ವ್ಯವಸ್ಥೆಯ ಕ್ರೌರ್ಯವನ್ನು ಯಾವುದೇ ನಾಟಕೀಯತೆಯಿಲ್ಲದೆ ವಾಸ್ತವಕ್ಕೆ ಹಿಡಿದ ಕನ್ನಡಿಯಂತೆ ನಮ್ಮ ಮುಂದಿಡುತ್ತದೆ. ಎರಡು ಧರ್ಮಗಳ ಜನರನ್ನು ಪೊಲೀಸರು ಮತ್ತು ಸರ್ಕಾರವು ಅಭಿವದ್ಧಿ ರಾಜಕಾರಣದ ಹೆಸರಿನಲ್ಲಿ ವಿಭಜಿಸಿ ಹೇಗೆ ತಮ್ಮ ಉದ್ದೇಶಗಳನ್ನು ಪೂರೈಸುತ್ತದೆ ಎಂಬುವುದೇ ಚಿತ್ರದ ಒಟ್ಟು ಕಥಾಹಂದರ.

 ಸುಲೇಮಾನ್ ಅಲಿಯೆಂಬ ರಮದಾಪಳ್ಳಿಯ ಜನನಾಯಕನ ಬಂಧನದಿಂದ ಆರಂಭವಾಗುವ ಚಿತ್ರದ ಕಥೆ, ಪೊಲೀಸರು ಜೈಲಿನಲ್ಲಿಯೇ ಅಲಿಯನ್ನು ಕೊಲೆ ಮಾಡಿಸುವ ಸಂಚುಗಳ ದೃಶ್ಯಗಳೊಂದಿಗೆ ತೀವ್ರತೆ ಪಡೆಯಲಾರಂಭಿಸುತ್ತದೆ. ಒಮ್ಮೆಲೇ ಫ್ಲಾಶ್ ಬ್ಯಾಕ್‌ ಗೆ ಹೊರಡುವ ಚಿತ್ರಕಥೆಯು ಅಲಿ ಡೇವಿಡ್ ಮತ್ತು ಸಂಗಡಿಗರ ಗುಂಪು ಬೆಳೆಯುವುದನ್ನು ತೋರಿಸುತ್ತಲೇ ಇಡೀ ರಮದಾಪಳ್ಳಿಯ ಆರ್ಥಿಕತೆ ಮತ್ತು ಮಾರುಕಟ್ಟೆ ವಿಸ್ತರಣೆಯನ್ನು ಕೂಡ ಜೊತೆಯಲ್ಲಿಯೇ ದೃಶೀಕರಿಸುತ್ತದೆ. ಮುಂದೆ ರಮದಾಪಳ್ಳಿಗಾಗಿ ಎಲ್ಲರನ್ನೂ ಎದುರಿಸುವ ಸುಲೇಮಾನ್ ಯಾವುದೇ ಪೊಲೀಸ್ ಹಸ್ತಕ್ಷೇಪವನ್ನು ಸಹಿಸುವುದಿಲ್ಲ. ತನ್ನ ಸಂಗಡಿಗ ಡೇವಿಡ್ ತಂಗಿಯನ್ನು ವರಿಸುವ ಸುಲೇಮಾನ್ ಎಲ್ಲೂ ಕೂಡಾ ಅವಳ ಧಾರ್ಮಿಕ ಆಯ್ಕೆಯನ್ನು ಕಿತ್ತುಕೊಳ್ಳುವುದಿಲ್ಲ. ಆದರೆ ತನ್ನ ಜೊತೆಯೇ ಇರುವ ಸುಲೇಮಾನ್ ನೋಡ ನೋಡುತ್ತಲೇ ಜನನಾಯಕನಾಗಿ ಬೆಳೆಯುವಾಗ ಸಹಜವಾಗಿ ಡೇವಿಡ್ ಗೆ ಅಸೂಯೆ ಆರಂಭವಾಗುತ್ತದೆ. ತನ್ನ ತಂಗಿಯ ನಿಕಾಹ್ ಕಣ್ತುಂಬಿಕೊಳ್ಳುವ ಡೇವಿಡ್ ಗೆ ಸಹಜವಾಗಿ ತನ್ನ ಧರ್ಮದ ಕಟ್ಟುಪಾಡುಗಳು ನೆನಪಾಗುತ್ತವೆ. ಮುಂದೆ ತನ್ನ ತಂಗಿಯ ಮಗುವಿಗೆ ಕ್ರಿಶ್ಚಯನ್ ಹೆಸರು ಹಾಕುವ ವಿಚಾರದಲ್ಲಿ ಆರಂಭವಾದ ಮನಸ್ತಾಪ, ನಂತರ ಇಡೀ ರಮದಾಪಳ್ಳಿಯ ಭಾವೈಕ್ಯತೆಗೆ ಹೊಸ ಸ್ವರೂಪವನ್ನು ನೀಡುತ್ತದೆ. ತನ್ನ ತಂಗಿಯನ್ನು ಸುಲೇಮಾನ್‌ ಗೆ ನಿಕಾಹ್ ಮಾಡಿಕೊಡುವಾಗ ಯಾವುದೇ ಧಾರ್ಮಿಕತೆಯನ್ನು ನೋಡದ ಡೇವಿಡ್‌ ನ ಕೆಲವು ಮಾನವ ಸಹಜ ದೌರ್ಬಲ್ಯಗಳನ್ನು ಬಳಸುವ ಸರ್ಕಾರ ಮತ್ತು ಪೊಲೀಸ್ ವ್ಯವಸ್ಥೆ ನಂತರ ಇಡೀ ರಮದಾಪಳ್ಳಿಯನ್ನು ಗದ್ದಲದ ಗೂಡಾಗಿಸುತ್ತದೆ. ಮಾನವ ವಿರೋಧಿ ಅಭಿವದ್ಧಿ ರಾಜಕಾರಣವನ್ನು ಖಂಡ ತುಂಡವಾಗಿ ವಿರೋಧಿಸುವ ಸುಲೇಮಾನ್ ಮುಂದೆ ರಾಜಕೀಯಕ್ಕೆ ಸವಾಲಾಗಿ ಪರಿಣಮಿಸುತ್ತಾನೆ. ಶಾಸಕನಿಗಿಂತಲೂ, ಜಮಾತ್ ಕಮಿಟಿಗಿಂತಲೂ ಹೆಚ್ಚು ಬಲಿಷ್ಠವಾದ ಸುಲೇಮಾನ್ ಮಣಿಸಲು ಸರಕಾರ ಎರಡು ಕುಟುಂಬಗಳ ಮನಸ್ತಾಪವನ್ನು ಧರ್ಮದ ಲೇಪನ ಹಚ್ಚಿ ಹೆಮ್ಮರವಾಗಿಸುತ್ತದೆ. ಮುಂದೆ ನಡೆಯುವುದೆಲ್ಲವೂ ಸರಕಾರಿ ಪ್ರಾಯೋಜಿತ ಗಲಭೆ. ಮಾನವ ವಿರೋಧಿ ರಾಜಕಾರಣವು ಹೇಗೆ ಜನರನ್ನು ವಿಭಜಿಸುತ್ತದೆ ಎಂಬುದನ್ನು ನೇರವಾಗಿಯೇ ಹೇಳುವ ನಿರ್ದೇಶಕರು ಎಲ್ಲಿಯೂ ಕೃತಕತೆಯನ್ನು ತುಂಬುವುದಿಲ್ಲ. ಚಿತ್ರದಲ್ಲಿ ನಡೆಯುವ ಗೋಲಿಬಾರ್ ಗಳು ಇಡೀ ಭಾರತೀಯ ರಾಜಕಾರಣದ ಪೊಲೀಸ್ ನಕಲಿ ಗೋಲಿಬಾರ್ ಗಳನ್ನು ನೆನಪಿಸುತ್ತದೆ. ಮತ್ತು ಸರಕಾರ ತನ್ನ ದುರಾಸೆಗೆ ಜನರನ್ನು ವಿಭಜಿಸುವಾಗ, ದೇಶದಲ್ಲಿ ನಡೆದ ಕೋಮು ದಳ್ಳುರಿಗಳು ನಮ್ಮ ಮಾನಸಿನ ದೃಶ್ಯ ಪರದೆಯಲ್ಲಿ ಮೂಡುತ್ತದೆ. ಪ್ರಜೆಗಳು ಧಾರ್ಮಿಕ ಭಿನ್ನತೆಗಳ ಜೊತೆಗೆ ಬದುಕುವುದಾದರೂ ದೇಶದ ರಾಜಕೀಯಕ್ಕೆ ಇದು ಬೇಕಾಗಿಲ್ಲ ಎನ್ನುವುದು ಇಲ್ಲಿ ನೇರವಾಗಿ ವ್ಯಕ್ತವಾಗುತ್ತದೆ. ಪೊಲೀಸ್ ಗೋಲಿಬಾರ್ ಗಳು ಮತ್ತು ಕೋಮುಗಳೆಲ್ಲವೂ ಸರ್ಕಾರಿ ಪ್ರಾಯೋಜಿತ ಆಗಿರಬಹುದು ಎನ್ನುವ ಮರು ಓದನ್ನು ಚಿತ್ರವು ಪ್ರೇರೇಪಿಸುವಲ್ಲಿ ಸಫಲವಾಗುತ್ತದೆ.

- Advertisement -

ಎಲ್ಲವನ್ನು ಮುಲಾಜಿಲ್ಲದೆ ತೋರಿಸುವ ನಿರ್ದೇಶಕರ ಧೈರ್ಯವನ್ನು ಮೆಚ್ಚಲೇಬೇಕು. ಪ್ರಸಕ್ತ ಸಂದರ್ಭದಲ್ಲಿ ಈ ಧೈರ್ಯ ಹೆಚ್ಚು ಹೊಗಳಿಕೆಗರ್ಹವಾಗಿರುತ್ತದೆ. ಒಟ್ಟಾರೆ ಚಿತ್ರವು 2009ರ ಮೇ ತಿಂಗಳಲ್ಲಿ ನಡೆದ ಭೀಮಪಳ್ಳಿ ಪೊಲೀಸ್ ಫೈರಿಂಗ್ ಸತ್ಯಾಸತ್ಯತೆಯನ್ನು ಜನರಿಗೆ ತೋರಿಸುವ ಪ್ರಯತ್ನವೇ ಆಗಿದೆ. ಭೀಮಪಳ್ಳಿ ಮಾರ್ಕೆಟ್ ಮೂಲಕ ಸ್ವತಂತ್ರವಾಗಿ ಜೀವಿಸುತ್ತಿದ್ದ ಭೀಮಪಳ್ಳಿಯ ಜನರು ತಮ್ಮದೇ ಆದ ಸ್ವಾಯತ್ತ ಆರ್ಥಿಕತೆಯನ್ನು  ಹೊಂದಿದ್ದರು. ಇದರಿಂದ ಅಸೂಯೆಗೊಂಡ ಅಲ್ಲಿನ ಸರ್ಕಾರ ಇದನ್ನು ನಾಶಮಾಡುಲು ಸರ್ಕಾರಿ ಪ್ರಾಯೋಜಿತ ಫೈರಿಂಗ್ ಮತ್ತು ನಕಲಿ ಗಲಭೆ ಸುದ್ದಿಯ ಮೂಲಕ ಆರು ಮುಸ್ಲಿಂ ಮೀನುಗಾರರನ್ನು ಕೊಂದಿತ್ತು ಮತ್ತು ಪಕ್ಕದ ಚರ್ಚಿನ ಮೇಲೆ ದಾಳಿ ಎಂಬ ನಕಲಿ ಸುದ್ದಿಗಳನ್ನು ಸರಕಾರ ಬೆದರಿಕೆಯ ತಂತ್ರದ ಮೂಲಕ ಸತ್ಯವೆಂದು ಬಿಂಬಿಸಿತ್ತು. ಈ ಪೊಲೀಸ್ ಫೈರಿಂಗ್ ಘಟನೆಯಿಂದ ಪ್ರೇರಿತವಾಗಿಯೇ ಈ ಚಿತ್ರವನ್ನು ನಿರ್ಮಿಸಲಾಗಿದೆ. ಚಿತ್ರದ ಕೊನೆಯಲ್ಲಿ ಒಂದು ಪಾತ್ರವೂ ‘ಎಲ್ಲವೂ ಪೊಲೀಸರು ನಡೆಸುವ ಕೃತ್ಯ’ಎನ್ನುವುದರ ಮೂಲಕ ಸೂಚ್ಯವಾಗಿ ಭೀಮಪಳ್ಳಿಯ ನೈಜತೆಯನ್ನು ನಿರ್ದೇಶಕರು ಧೈರ್ಯವಾಗಿ ತೋರಿಸುತ್ತಾರೆ. ಒಟ್ಟಾರೆಯಾಗಿ ಭಾರತದ ರಾಜಕಾರಣದಲ್ಲಿ ಕಂಡುಬರುವಂತಹ ಸರಕಾರಿ ಪ್ರಾಯೋಜಿತ ಗಲಭೆಗಳು, ಅಸಮ್ಮತಿಯ ಧ್ವನಿಗಳನ್ನು ಅಡಗಿಸುವ ಗೋಲಿಬಾರ್ ಗಳು ಮತ್ತು ಮಾನವೀಯತೆಯನ್ನೇ ಮರೆತಂತೆ ವರ್ತಿಸುತ್ತಿರುವ ಪೊಲೀಸರ ಕುತಂತ್ರಗಳನ್ನು ಯಥಾವತ್ತಾಗಿ ತೋರಿಸುವ ಮೂಲಕ ‘ಮಾಲಿಕ್’ ಜನರಲ್ಲಿ ಹಲವು ಗಂಭೀರ ಘಟನೆಗಳನ್ನು ಮರು ಓದಿನ ಮೂಲಕ ಮರುವ್ಯಾಖ್ಯಾನಗೊಳಿಸಬೇಕು ಎಂಬ ಆಶಯವನ್ನು ಬಿತ್ತುವುದರಲ್ಲಿ ಸಫಲವಾಗುತ್ತದೆ.

Join Whatsapp