ಬಡ, ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಮಾರಕವಾಗುತ್ತಿರುವ ನೀಟ್: ನಿಷೇಧಕ್ಕೆ ಕ್ಯಾಂಪಸ್ ಫ್ರಂಟ್ ಆಗ್ರಹ

Prasthutha|

ಬೆಂಗಳೂರು: ವೈದ್ಯಕೀಯ ಶಿಕ್ಷಣ ಕಳೆದ ಕೆಲವು ವರ್ಷಗಳಿಂದ ನೀಟ್ ಎಂಬ ಅರ್ಹತಾ ಪರೀಕ್ಷೆಯಿಂದಾಗಿ ರಾಜ್ಯದ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಗಗನ ಕುಸುಮವಾಗಿದೆ. ದೇಶದಲ್ಲಿ ಇತರ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯವು ವೈದ್ಯಕೀಯ ಕ್ಷೇತ್ರದಲ್ಲಿ ಅಮೂಲಾಗ್ರ ಸಾಧನೆ ಮಾಡಿದೆ. ಸುಮಾರು 69ರಷ್ಟು ವೈದ್ಯಕೀಯ ಕಾಲೇಜುಗಳು ನಮ್ಮ ರಾಜ್ಯದಲ್ಲಿದ್ದು, 7245ರಷ್ಟು ಸರ್ಕಾರಿ ಕೋಟಾದ ಸೀಟುಗಳಿದ್ದರೂ ಅದರಲ್ಲಿ ಬಹುತೇಕ ಸೀಟುಗಳು ಉತ್ತರ ಭಾರತದ ಅಥವಾ ಹೊರ ರಾಜ್ಯದ ವಿದ್ಯಾರ್ಥಿಗಳ ಪಾಲಾಗುವ ಮೂಲಕ ರಾಜ್ಯದ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣದ ಅವಕಾಶ ವಂಚಿತರಾಗುತ್ತಿದ್ದಾರೆ ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಪ್ರಧಾನ ಕಾರ್ಯದರ್ಶಿ ಅನೀಸ್ ಕುಂಬ್ರ ಆರೋಪಿಸಿದ್ದಾರೆ.

- Advertisement -

ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಸರ್ಕಾರದ ಯೋಜನೆಗಳು ಬಡವರಿಗೆ ಫಲವನ್ನು ಅನುಭವಿಸುವಂತಾಗಬೇಕೆ ಹೊರತು, ಫಲಾನುಭವಿಗಳಿಂದ  ಕಿತ್ತುಕೊಳ್ಳುವಂತಿರಬಾರದು. ನೀಟ್ ಪರೀಕ್ಷೆ ಬರೆದು ವೈದ್ಯಕೀಯ ಶಿಕ್ಷಣದ ಅರ್ಹತೆ ಪಡೆಯಬೇಕಾದರೆ ಸಿಬಿಎಸ್ ಇ ಪಠ್ಯಕ್ರಮದಲ್ಲಿ ಓದಬೇಕಾಗುತ್ತದೆ. ಆ ಮೂಲಕ ರಾಜ್ಯದ ಪಠ್ಯಕ್ರಮವನ್ನು ಮೂಲೆಗುಂಪು ಮಾಡಿ, ಸಿಬಿಎಸ್ ಇ ಪಠ್ಯಕ್ರಮವನ್ನು ಬಲವಂತವಾಗಿ ಪಡೆಯುವಂತೆ ಪ್ರೇರೆಪಿಸಲಾಗುತ್ತದೆ. ಈಗಾಗಲೇ ಸಿಬಿಎಸ್ ಇ ಪಠ್ಯಕ್ರಮ ಅಳವಡಿಸಿಕೊಂಡಿರುವ ಶಿಕ್ಷಣ ಸಂಸ್ಥೆಗಳ ಶುಲ್ಕವು ಬಡ ಮತ್ತು ಮಧ್ಯಮ ವರ್ಗದ ಜನರ ಕೈಗೆಟಕುವ ಹಂತಕ್ಕಿಂತ ಎತ್ತರದಲ್ಲಿದೆ. ಇದರಿಂದಾಗಿ ಸಂವಿಧಾನದ ಮೂಲ ಅಶಯಗಳಾದ ಎಲ್ಲರಿಗೂ ಉಚಿತ ಗುಣಮಟ್ಟದ ಶಿಕ್ಷಣ ಕೊಡುವ ಸರಕಾರದ ಜವಬ್ದಾರಿಯನ್ನೇ ಸರಕಾರದಿಂದಲೇ ಮರಿಚಿಸುವಂತಾಗಿದೆ. ಇದು ದೇಶದ ಒಕ್ಕೂಟ ವ್ಯವಸ್ಥೆಗೂ ಸಹ ಕೊಡಲಿ ಏಟು ಆಗಿದೆ ಎಂದು ತಿಳಿಸಿದ್ದಾರೆ.

ಈಗಾಗಲೇ ಕೇರಳ, ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ಸರ್ಕಾರ ನೀಟ್ ಅರ್ಹತಾ ಪರೀಕ್ಷೆಯಲ್ಲಿ ಹಲವಾರು ಲೋಪದೊಷಗಳಿದೆ ಎಂದು ಪ್ರತಿಭಟಿಸಿದೆ ಮತ್ತು ತಮಿಳುನಾಡು ಸರ್ಕಾರ ತಮ್ಮ ರಾಜ್ಯವನ್ನು ನೀಟ್ ಪರೀಕ್ಷೆಯಿಂದ ಹೊರಗಿಡಬೇಕೆಂದು ಮಸೂದೆ ರಚಿಸಿ ಅಂಕಿತಕ್ಕಾಗಿ ರಾಷ್ಟ್ರಪತಿಯವರಿಗೆ ಕಳುಹಿಸಿದ್ದಾರೆ. ಒಟ್ಟಿನಲ್ಲಿ ನೀಟ್ ಅರ್ಹತಾ ಪರೀಕ್ಷೆಯಿಂದಾಗಿ ಬಡ, ಮಧ್ಯಮ ಮತ್ತು ಗ್ರಾಮೀಣ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣದಿಂದ ಹೊರಗುಳಿಯುವಂತೆ ಮಾಡಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ತಮಿಳುನಾಡು ಮಾದರಿಯಲ್ಲಿ ನೀಟ್ ವಿರುದ್ಧ ಮಸೂದೆ ಜಾರಿಗೆ ತರುವ ಮೂಲಕ ವೈದ್ಯಕೀಯ ಶಿಕ್ಷಣವನ್ನು ಎಲ್ಲಾ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ದೊರಕುವಂತಹ ಯೋಜನೆಯನ್ನು ಇದೇ ಶೈಕ್ಷಣಿಕ ವರ್ಷದಿಂದಲೇ ಕಾರ್ಯರೂಪಕ್ಕೆ ತರಬೇಕೆಂದು ಅನೀಸ್ ಕುಂಬ್ರ ಆಗ್ರಹಿಸಿದ್ದಾರೆ.

Join Whatsapp