ಟೊಕಿಯೊ ಒಲಂಪಿಕ್ಸ್ | ಜಾವೆಲಿನ್ ಥ್ರೋ : ಮೊದಲ ಪ್ರಯತ್ನದಲ್ಲೇ ನೀರಜ್ ಚೋಪ್ರಾ ಫೈನಲ್ ಪ್ರವೇಶ

Prasthutha|

ಟೋಕಿಯೊ, ಆ.4: ಭಾರತದ ಭರವಸೆಯ ಅಥ್ಲೀಟ್ ನೀರಜ್ ಚೋಪ್ರಾ ಟೋಕಿಯೋ ಒಲಿಂಪಿಕ್ಸ್ ನ ಪುರುಷರ ಜಾವೆಲಿನ್ ಥ್ರೋ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ್ದಾರೆ. ಎ ವಿಭಾಗದ ಅರ್ಹತಾ ಸುತ್ತಿನಲ್ಲಿ ಮೊದಲ ಪ್ರಯತ್ನದಲ್ಲಿಯೇ 86.65 ಮೀಟರ್ ಜಾವೆಲಿನ್ ಎಸೆದ ಚೋಪ್ರಾ, ಫೈನಲ್ ಹಂತಕ್ಕೆ ನೇರವಾಗಿ ಅರ್ಹತೆ ಪಡೆದರು.

- Advertisement -


ಎ ಹಾಗೂ ಬಿ ವಿಭಾಗದಿಂದ ಕನಿಷ್ಠ 83.50 ಮೀಟರ್ ಜಾವೆಲಿನ್ ಎಸೆದ 12 ಮಂದಿ ಸ್ಪರ್ಧಾಳುಗಳು ಫೈನಲ್ ಹಂತಕ್ಕೆ ಪ್ರವೇಶ ಪಡೆಯಲಿದ್ದಾರೆ. ನೀರಜ್ ಚೋಪ್ರಾ ಜೊತೆಗೆ ಫಿನ್ ಲ್ಯಾಂಡ್ ನ ಲಸ್ಸಿ ಎಟೆಲಾಟಲೊ ಕೂಡ ಮೊದಲ ಪ್ರಯತ್ನದಲ್ಲಿಯೇ ಅಂತಿಮ ಸುತ್ತಿಗೆ ಅರ್ಹತೆ ಪಡೆದರು. ಆಗಸ್ಟ್ 7 ರಂದು ಒಲಿಂಪಿಕ್ ಸ್ಟೇಡಿಯಂನಲ್ಲಿ ಜಾವೆಲಿನ್ ಥ್ರೋ ಫೈನಲ್ ಹಂತದ ಸ್ಪರ್ಧೆಗಳು ನಡೆಯಲಿದ್ದು, ನೀರಜ್ ಚೋಪ್ರಾ, ಟೋಕಿಯೋದಲ್ಲಿ ಭಾರತಕ್ಕೆ ಮತ್ತೊಂದು ಪದಕದ ಭರವಸೆ ಮೂಡಿಸಿದ್ದಾರೆ.


2018 ರಲ್ಲಿ ಗೋಲ್ಡ್ ಕೋಸ್ಟ್ ನಲ್ಲಿ ನಡೆದಿದ್ದ ಕಾಮನ್ ವೆಲ್ತ್ ಹಾಗೂ ಜಕಾರ್ತದಲ್ಲಿ ಜರುಗಿದ್ದ ಏಷ್ಯನ್ ಕ್ರೀಡಾಕೂಟಗಳಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದು ಸಾಧನೆ ಮಾಡಿದ್ದರು. ಏಷ್ಯನ್ ಚಾಂಪಿಯನ್ ಶಿಪ್ನಲ್ಲೂ ಚೋಪ್ರಾ ಚಾಂಪಿಯನ್ ಆಗಿದ್ದರು. ಇದರ ಜೊತೆಗೆ ದಕ್ಷಿಣ ಏಷ್ಯನ್ ಕ್ರೀಡಾಕೂಟ ಮತ್ತು ಪೋಲೆಂಡ್ನಲ್ಲಿ ನಡೆದಿದ್ದ ವಿಶ್ವ ಜೂನಿಯರ್ ಚಾಂಪಿಯನ್ ಶಿಪ್ ನಲ್ಲೂ ಚೋಪ್ರಾ ಚಿನ್ನ ಜಯಿಸಿ ಭಾರತದ ಕೀರ್ತಿ ಪತಾಕೆ ಹಾರಿಸಿದ್ದರು.

- Advertisement -

ಶಿವಪಾಲ್ ಸಿಂಗ್ ಗೆ ನಿರಾಸೆ:
ಬಿ ಗುಂಪಿನ ಅರ್ಹತಾ ಸುತ್ತಿನಲ್ಲಿ ಭಾಗವಹಿಸಿದ್ದ ಭಾರತದ ಮತ್ತೊರ್ವ ಜಾವೆಲಿನ್ ಥ್ರೋ ಪಟು ಶಿವಪಾಲ್ ಸಿಂಗ್ ಫೈನಲ್ ಗೆ ಅರ್ಹತೆ ಪಡೆಯುವಲ್ಲಿ ವಿಫಲರಾದರು. ಶಿವಪಾಲ್ ಸಿಂಗ್ ಮೂರೂ ಪ್ರಯತ್ನಗಳಲ್ಲಿ ಕ್ರಮವಾಗಿ 76.40 , 74.80 ಹಾಗೂ 74.81 ಮೀಟರ್ ಜಾವೆಲಿನ್ ಎಸೆಯುವ ಮೂಲಕ ಅಂತಿಮ ಸುತ್ತಿಗೆ ಅರ್ಹತೆ ಪಡೆಯುವಲ್ಲಿ ವಿಫಲರಾದರು.

ಮಹಿಳೆಯರ ವಿಭಾಗದಲ್ಲಿ ರಾಣಿ ಪ್ರದರ್ಶನ

ನಿನ್ನೆ ನಡೆದಿದ್ದ ಮಹಿಳೆಯರ ವಿಭಾಗದಲ್ಲಿ ಭಾರತದ ಅನ್ನು ರಾಣಿ ಫೈನಲ್ ಹಂತಕ್ಕೆ ಅರ್ಹತೆ ಪಡೆಯುವಲ್ಲಿ ವಿಫಲರಾಗಿದ್ದರು. ಒಟ್ಟು 14 ಸ್ಪರ್ಧಿಗಳಿದ್ದ ಎ ಗುಂಪಿನ ಅರ್ಹತಾ ಸುತ್ತಿನಲ್ಲಿ ನೀರಸ ಪ್ರದರ್ಶನದೊಂದಿಗೆ ರಾಣಿ ಕೊನೆಯವರಾಗಿ 14ನೇ ಸ್ಥಾನದಲ್ಲಿ ಸ್ಪರ್ಧೆ ಮುಗಿಸಿದ್ದರು. ಮೊದಲ ಪ್ರಯತ್ನದಲ್ಲಿ 50.35 ಮೀಟರ್, ಎರಡನೇ ಪ್ರಯತ್ನದಲ್ಲಿ 53.19 ಮೀಟರ್ ದೂರ ಜಾವೆಲಿನ್ ಎಸೆದಿದ್ದರು.

Join Whatsapp