ತಿರುವನಂತಪುರಂ : ಕೇರಳದಲ್ಲಿ ಬಿಜೆಪಿಯ ಮಿತ್ರಪಕ್ಷ ಭಾರತ ಧರ್ಮ ಜನಸೇನಾ (ಬಿಡಿಜೆಎಸ್) ವಿಭಜನೆಗೊಂಡಿದ್ದು, ಬಂಡಾಯ ಗುಂಪು ಹೊಸ ಪಕ್ಷ ಸ್ಥಾಪನೆಗೆ ಸಿದ್ಧತೆ ನಡೆಸಿದೆ. ಕೇರಳದಲ್ಲಿ ಚುನಾವಣೆಗಳ ವಿಷಯದಲ್ಲಿ ಎಡಪಕ್ಷಗಳ ನೇತೃತ್ವದ ಎಲ್ ಡಿಎಫ್ ಜೊತೆ ಬಿಜೆಪಿ ಗೌಪ್ಯ ಸಂಬಂಧ ಹೊಂದಿದೆ ಎಂದು ಬಿಡಿಜೆಎಸ್ ಬಂಡಾಯ ನಾಯಕರು ಆಪಾದಿಸಿದ್ದಾರೆ.
ಬಿಡಿಜೆಎಸ್ ಬಂಡಾಯ ನಾಯಕರುಗಳಾದ ವಿ. ಗೋಪಕುಮಾರ್ ಮತ್ತು ಎನ್.ಕೆ. ನೀಲಕಂಠನ್ ಹೊಸದಾಗಿ ಭಾರತೀಯ ಜನಸೇನಾ ಪಕ್ಷ ಸ್ಥಾಪಿಸಲು ಮುಂದಾಗಿದ್ದಾರೆ. ಎಲ್ ಡಿಎಫ್ ಹಿಂದೂಗಳ ಭಾವನೆಗೆ ಸಾಕಷ್ಟು ಧಕ್ಕೆ ತರುವ ಕ್ರಮಗಳನ್ನು ಕೈಗೊಂಡಿದೆ. ಅಂತಹ ಪಕ್ಷಗಳ ಜೊತೆ ಬಿಜೆಪಿ ಗೌಪ್ಯ ನಂಟು ಹೊಂದಿದೆ ಎಂದು ಅವರು ಆಪಾದಿಸಿದ್ದಾರೆ.
ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶದ ವಿಷಯದಲ್ಲಿ ನಡೆದ ಸಂಘರ್ಷದ ವೇಳೆ ಬಿಡಿಜೆಎಸ್ ಕಾರ್ಯಕರ್ತರು ಸೇರಿ ಸಾವಿರಾರು ಮಂದಿ ಪೊಲೀಸ್ ಕ್ರಮಗಳನ್ನು ಎದುರಿಸಿದ್ದಾರೆ. ಇದೀಗ, ಕಾಂಗ್ರೆಸ್ ಮುಕ್ತ ಕೇರಳ ಮಾಡುವ ಉದ್ದೇಶದ ಭಾಗವಾಗಿ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಎಲ್ ಡಿಎಫ್ ಮತ್ತೊಮ್ಮೆ ಅಧಿಕಾರಕ್ಕೆ ಬರಲಿ ಎಂಬುದಾಗಿ ಬಿಜೆಪಿ ಬಯಸುತ್ತಿದೆ. ಎಲ್ ಡಿಎಫ್ ಗೆಲುವನ್ನು ಬೆಂಬಲಿಸುವ ಬಿಜೆಪಿಯ ಷಡ್ಯಂತ್ರವನ್ನು ಹಿಂದೂ ಧರ್ಮೀಯರು ಒಪ್ಪಲು ಸಾಧ್ಯವಿಲ್ಲ ಎಂದು ಗೋಪಕುಮಾರ್ ಆಪಾದಿಸಿದ್ದಾರೆ.
ಬಿಡಿಜೆಎಸ್ ನ 14 ಜಿಲ್ಲಾ ಸಮಿತಿಗಳ ಪೈಕಿ, 11 ಜಿಲ್ಲಾ ಸಮಿತಿಗಳು ತಮ್ಮ ಪರವಾಗಿವೆ ಎಂದು ನೀಲಕಂಠನ್ ಹೇಳಿದ್ದಾರೆ. ನೀಲಕಂಠನ್ ಕೇರಳದಲ್ಲಿ ಪ್ರಮುಖ ಪರಿಶಿಷ್ಟ ಜಾತಿ ಸಮುದಾಯಗಳ ನಾಯಕರುಗಳಲ್ಲಿ ಒಬ್ಬರು. ಕೇರಳ ಪುಲಯ ಮಹಾಸಭಾದ ಪ್ರಮುಖ ನಾಯಕರಾಗಿರುವ ನೀಲಕಂಠನ್ ಇದೀಗ ಬಿಡಿಜೆಎಸ್ ನಿಂದ ಹೊರಬಂದಿದ್ದಾರೆ.
ಹೊಸದಾಗಿ ಸ್ಥಾಪಿಸಲಾಗುವ ಬಿಜೆಎಸ್ ಯುಡಿಎಫ್ ಮೈತ್ರಿಕೂಟವನ್ನು ಬೆಂಬಲಿಸಲಿದೆ.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಎಡಪಕ್ಷಗಳ ಗೆಲುವಿಗೆ ಬೆಂಬಲಿಸುವಂತೆ ತಮ್ಮ ಕಾರ್ಯಕರ್ತರಿಗೆ ಬಿಜೆಪಿ ಸದ್ದಿಲ್ಲದೆ ನಿರ್ದೇಶನ ನೀಡುತ್ತಿದೆ ಎಂದು ನೀಲಕಂಠನ್ ಹೇಳಿದ್ದಾರೆ.
ಆದಾಗ್ಯೂ, ಬಿಡಿಜೆಎಸ್ ಅಧ್ಯಕ್ಷ ತುಷಾರ್ ವೆಲ್ಲಪಳ್ಳಿ ತಮ್ಮ ಪಕ್ಷದ ಬೆಂಬಲ ಎನ್ ಡಿಎಗೇ ಮುಂದುವರಿಸಲು ಬಯಸಿದ್ದಾರೆ ಎಂದು ಅವರು ತಿಳಿಸಿದ್ದಾರೆ. “ಪಕ್ಷ ಬಿಟ್ಟು ಹೋದವರು ಸಂಸದರಾಗುವ ಕನಸಿನೊಂದಿಗೆ ತೆರಳಿದ್ದಾರೆ. ಬಿಡಿಜೆಎಸ್ ಗೆ ಒಂದು ಸ್ಪಷ್ಟ ರಾಜಕೀಯ ಬದ್ಧತೆ ಇದೆ ಮತ್ತು ಅದು ಎನ್ ಡಿಎಯೊಂದಿಗೆ ಮುಂದುವರೆಯುತ್ತದೆ” ಎಂದು ತುಷಾರ್ ಹೇಳಿದ್ದಾರೆ.
ಎಡಪಂಥೀಯರನ್ನು ಉರಿದುಬೀಳುವ ಬಿಜೆಪಿ ನಾಯಕರು, ಕಾರ್ಯಕರ್ತರನ್ನು ಎಡಪಂಥೀಯವರ ವಿರುದ್ಧ ಸದಾ ಎತ್ತಿಕಟ್ಟುತ್ತಿರುತ್ತಾರೆ. ಬಿಜೆಪಿ ಸರಕಾರಗಳ ವಿರುದ್ಧ ಯಾರೇ ಮಾತನಾಡಿದರೂ ಅವರನ್ನು ಎಡಪಂಥೀಯರೆಂದು ಜರೆಯುತ್ತಾರೆ. ಇಲ್ಲಿ ನೋಡಿದರೆ, ಬಿಜೆಎಸ್ ಮುಖಂಡರ ಆಪಾದನೆ ಪ್ರಕಾರ, ಒಳಗೊಳಗಿಂದ ಬಿಜೆಪಿ ನಾಯಕರು ಎಡಪಂಥೀಯರನ್ನು ಅಧಿಕಾರದಲ್ಲಿ ಮುಂದುವರಿಸಲು ಷಡ್ಯಂತ್ರ ರೂಪಿಸಿರುವುದು ಕಂಡುಬರುತ್ತದೆ.