ಬೆಂಗಳೂರು : ನಗರ ಸಂಚಾರ ಪೊಲೀಸ್, ಸಾರಿಗೆ ಇಲಾಖೆ ಮತ್ತು ಬೃಹತ್ ಬೆಂಗಳೂರು ವತಿಯಿಂದ 32ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸ 2021ಕ್ಕೆ ಇಂದು ಚಾಲನೆ ನೀಡಲಾಯಿತು. ನಗರದ ಟೌನ್ ಹಾಲ್ ನಲ್ಲಿ ನಡೆದ ಸಮಾರಂಭದಲ್ಲಿ ಡಿಸಿಎಂ ಡಾ. ಅಶ್ವಥ್ ನಾರಾಯಣ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮುಂದುವರಿದ ದೇಶಗಳಲ್ಲೂ ರಸ್ತೆ ಸಂಚಾರದ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಎಲ್ಲಾ ಸಮಸ್ಯೆಗಳನ್ನು ಜಾಗೃತಿ ಮೂಲಕ ಮಾತ್ರ ಬಗೆಹರಿಸಿಕೊಳ್ಳಲು ಸಾಧ್ಯ ಎಂದು ಡಾ. ಅಶ್ವಥ್ ನಾರಾಯಣ್ ಹೇಳಿದರು.
ಶಾರ್ಟ್ ಕಟ್ ನಲ್ಲಿ ಜೀವನ ರೂಪಿಸಲು ಪ್ರಯತ್ನಿಸುತ್ತಿದ್ದೇವೆ. ಆದರೆ, ಅದು ನಮ್ಮ ಜೀವನಕ್ಕೆ ಅಪಾಯಕಾರಿಯಾಗುವ ಸಂಭವವೇ ಹೆಚ್ಚು ಎಂದು ಅವರು ತಿಳಿಸಿದರು.
ಬೆಂಗಳೂರಿನ ಫೂಟ್ ಪಾತ್ ಗಳನ್ನು ಜನರ ಬಳಕೆಗಾಗಿ ಅವಕಾಶ ಕಲ್ಪಿಸುವಂತೆ ಗೃಹ ಸಚಿವರಲ್ಲಿ ಅವರು ವಿನಂತಿಸಿದರು. ಸರಕಾರದಿಂದ ಎಲ್ಲಾ ಸಹಕಾರ ನೀಡುತ್ತೇವೆ ಎಂದು ಅವರು ಪೊಲೀಸರಿಗೆ ತಿಳಿಸಿದರು.
ಈ ವೇಳೆ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಟ್ರಾಫಿಕ್ ನಿಯಮಗಳನ್ನು ಪಾಲಿಸುವಂತೆ ನಾವು ಜನರನ್ನು ಬದಲಾಯಿಸಬೇಕು. ಜನರಿಗೆ ಪೂರಕವಾದಂತಹ ಟ್ರಾಫಿಕ್ ಸಮಸ್ಯೆಯನ್ನು ಬಗೆಹರಿಸುವಂತ ಕಾರ್ಯಕ್ರಮವನ್ನು ಅತೀ ಶೀಘ್ರವಾಗಿ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಬೆಂಗಳೂರು ಟ್ರಾಫಿಕ್ ವ್ಯವಸ್ಥೆಯನ್ನು ಆಧುನೀಕರಣಗೊಳಿಸಿ ದೇಶದಲ್ಲೇ ಮಾದರಿಯಾನ್ನಾಗಿಸುತ್ತೇವೆ. ಈ ವರ್ಷವನ್ನು ಕೇವಲ ರಸ್ತೆ ಸುರಕ್ಷತಾ ಮಾಸ ಮಾತ್ರವಲ್ಲದೆ ಸುರಕ್ಷೆ ಮತ್ತು ಮ್ಯಾನೇಜ್ಮೆಂಟ್ ವರ್ಷವಾಗಿ ಬದಲಾಯಿಸಬೇಕು ಎಂದು ಅವರು ಹೇಳಿದರು. ಪಿ.ಆರ್. ರವಿಕಾಂತ್ ಕಾರ್ಯಕ್ರಮ ನಿರೂಪಿಸಿದರು.