January 23, 2021
ದೆಹಲಿ ಮಾತ್ರ ಯಾಕೆ?; ದೇಶಕ್ಕೆ ನಾಲ್ಕು ರಾಜಧಾನಿಗಳು ಬೇಕು : ಮಮತಾ ಬ್ಯಾನರ್ಜಿ

ಕೊಲ್ಕತಾ : ದೆಹಲಿಯಲ್ಲಿ ದೇಶಕ್ಕೆ ಒಂದೇ ಒಂದು ರಾಜಧಾನಿ ಇರುವುದಕ್ಕಿಂತ ನಾಲ್ಕು ಸರದಿ ಆಧಾರಿತ ರಾಜಧಾನಿಗಳಿರಬೇಕು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಒತ್ತಾಯಿಸಿದ್ದಾರೆ.
ಕೊಲ್ಕತಾದಲ್ಲಿ ಇಂದು ನಡೆದ ಬೃಹತ್ ಸಮಾವೇಶವೊಂದರಲ್ಲಿ ಮಾತನಾಡುತ್ತಾ ಅವರು ಈ ಮಾತುಗಳನ್ನಾಡಿದರು. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಇದೇ ವೇಳೆ ಅವರು ವಾಗ್ದಾಳಿ ನಡೆಸಿದರು.
“ಭಾರತಕ್ಕೆ ನಾಲ್ಕು ಸರದಿ ಆಧಾರಿತ ರಾಜಧಾನಿಗಳು ಬೇಕೆಂಬುದು ನನ್ನ ಅನಿಸಿಕೆ. ಇಂಗ್ಲಿಷರು ಇಡೀ ದೇಶವನ್ನು ಕೊಲ್ಕತಾದಿಂದ ಆಳಿದರು. ನಮ್ಮ ದೇಶದಲ್ಲಿ ಒಂದೇ ರಾಜಧಾನಿ ನಗರ ಏಕಿರಬೇಕು?” ಎಂದು ಮಮತಾ ಬ್ಯಾನರ್ಜಿ ಪ್ರಶ್ನಿಸಿದರು.
ನೇತಾಜಿ ಸುಭಾಶ್ಚಂದ್ರ ಬೋಸ್ 125ನೇ ಜನ್ಮ ದಿನಾಚರಣೆಯ ಹಿನ್ನೆಲೆಯಲ್ಲಿ ಬೃಹತ್ ಸಮಾವೇಶವನ್ನು ಆಯೋಜಿಸಲಾಗಿತ್ತು. ಬೋಸ್ ಜನ್ಮ ದಿನಾಚರಣೆಗೆ ರಾಷ್ಟ್ರೀಯ ರಜಾ ದಿನ ಘೋಷಿಸಬೇಕೆಂದು ಅವರು ಇದೇ ವೇಳೆ ಒತ್ತಾಯಿಸಿದರು.