ರಾಷ್ಟ್ರೀಯ ಪಕ್ಷ ಬಿಜೆಪಿಗೆ ಇಂತಹ ಸ್ಥಿತಿ ಬರಬಾರದಿತ್ತು: ಜೆಡಿಎಸ್ ಜೊತೆಗೆ ಮೈತ್ರಿಗೆ ಕಾಂಗ್ರೆಸ್ ವ್ಯಂಗ್ಯ

Prasthutha|

ಬೆಂಗಳೂರು: ಜೆಡಿಎಸ್ ಜತೆ ಹೊಂದಾಣಿಕೆ ಮಾಡಿಕೊಳ್ಳಲು ಮುಂದಾಗಿರುವುದು ಬಿಜೆಪಿ ಪಕ್ಷ ಅದೆಷ್ಟು ದುರ್ಬಲವಾಗಿದೆ ಎಂಬುದಕ್ಕೆ ಸಾಕ್ಷಿ. ಜೆಡಿಎಸ್ ಜತೆ ಹೋಗುತ್ತೇವೆ ಎಂದು ಮಾಜಿ ಸಿಎಂ ಯಡಿಯೂರಪ್ಪನವರು ಹೇಳಿರುವುದು ಬಿಜೆಪಿಗೆ ಅದೆಂಥ ದುಸ್ಥಿತಿ ಬಂದಿದೆ ಎಂಬುದನ್ನು ಸಾರುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

- Advertisement -


ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಎರಡೂ ಕಡೆ ಬಿಜೆಪಿ ಸರಕಾರವೇ ಆಳ್ವಿಕೆಯಲ್ಲಿದೆ. ಆದರೂ ಅವರಿಗೆ ಸ್ವಂತ ಬಲದ ಮೇಲೆ ನಂಬಿಕೆ ಇಲ್ಲ. ಜೆಡಿಎಸ್ ಮೇಲೆ ಅವಲಂಬಿತ ವಾಗಲು ಮುಂದಾಗಿದೆ. ಶಿವಮೊಗ್ಗ ಸೇರಿದಂತೆ ಹಲವೆಡೆ ಅವರ ಅಭ್ಯರ್ಥಿಗಳು ಸೋಲುತ್ತಿದ್ದಾರೆ ಎಂಬುದಕ್ಕೆ ಇದಕ್ಕಿಂಥ ಸಾಕ್ಷಿ ಬೇರೆ ಬೇಕಿಲ್ಲ ಎಂದು ಟೀಕಿಸಿದರು.


ನಾವು ಬಿಡಿ, ಮೊದಲಿಂದಲೂ ಬಿಜೆಪಿ ಜತೆ ಅಂತರ ಕಾಯ್ದುಕೊಂಡಿದ್ದೇವೆ. ಆದರೆ ಜೆಡಿಎಸ್ ಜತೆ ವಿಷಯಾಧಾರಿತವಾಗಿ ಹೊಂದಾಣಿಕೆ ಮಾಡಿಕೊಂಡಿದ್ದೆವು, ವಿರೋಧ ಮಾಡಿದ್ದು ನಿಜ. ನಾವು, ಅವರು ಗೆದ್ದಿರಬಹುದು, ಸೋತಿರಬಹುದು, ಫೈಟ್ ಮಾಡಿರಬಹುದು ಅದೆಲ್ಲ ನಿಜ. ಈಗಲೂ ಬೆಂಗಳೂರು ಗ್ರಾಮಾಂತರ ಸೇರಿ ಕೆಲವೆಡೆ ಫ್ರೆಂಡ್ಲಿ ಫೈಟ್ ಮಾಡುತ್ತಿದ್ದೇವೆ. ಆದರೆ ಬಿಜೆಪಿ ರೀತಿ ಹೊಂದಾಣಿಕೆ ಮಾಡಿಕೊಂಡಿಲ್ಲ ಎಂದು ಹೇಳಿದರು.

- Advertisement -


ರಾಷ್ಟ್ರೀಯ ಪಕ್ಷ ಬಿಜೆಪಿಗೆ ಇಂತಹ ಸ್ಥಿತಿ ಬರಬಾರದಿತ್ತು. ಬಿಜೆಪಿ ರಾಷ್ಟ್ರೀಯ ನಾಯಕರಾದ ಅರುಣ್ ಸಿಂಗ್ ಅವರು ಜೆಡಿಎಸ್ ಬಗ್ಗೆ ಬಾಯಿಗೆ ಬಂದಂತೆ ಮಾತಾಡಿದ್ದರು. ಜೆಡಿಎಸ್ ನವರೂ ತಿರುಗಿಸಿ ಹೇಳಿದ್ದರು. ಆರೆಸ್ಸೆಸ್ ಮುಖಂಡರು ಏನು ಹೇಳಿದ್ದರು. ರಾಜ್ಯ ಬಿಜೆಪಿ ಮುಖಂಡರು ಏನು ಟೀಕೆ ಮಾಡಿದ್ದರು. ಇದೇ ಯಡಿಯೂರಪ್ಪನವರು ಹಿಂದೆ ಏನು ಹೇಳಿದ್ದರು. ಈಗ ಏನು ಹೇಳುತ್ತಿದ್ದಾರೆ ಎಂಬುದನ್ನು ನೋಡಿದರೆ ಒಂದು ಸಂದೇಶ ರವಾನೆ ಆಗುತ್ತಿದೆ. ಬಿಜೆಪಿ ದುರ್ಬಲವಾಗಿದೆ ಅಂತಾ.
ಮುಂದಿನ ಚುನಾವಣೆಗಳಿಗೂ ಇದು ದಿಕ್ಸೂಚಿಯೇ? ಬಿಜೆಪಿ, ಜೆಡಿಎಸ್ ಇದೇ ರೀತಿ ಹೊಂದಾಣಿಕೆ ಮಾಡಿಕೊಳ್ಳುತ್ತವೆ ಎಂಬುದಕ್ಕೆ ಇದೊಂದು ಸಂಕೇತವೇ ಎಂಬ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್ ಅವರು, ಈ ಬಗ್ಗೆ ಸಿಎಂ ಬೊಮ್ಮಾಯಿಯವರು ಮಾತಾಡುತ್ತಿಲ್ಕ. ಬಿಜೆಪಿ ರಾಜ್ಯಾಧ್ಯಕ್ಷರು ಮಾತಾಡುತ್ತಿಲ್ಲ. ಬಿಜೆಪಿ ಉಳಿದ ಮುಖಂಡರು ಮಾತಾಡುತ್ತಿಲ್ಲ. ಯಡಿಯೂರಪ್ಪನವರು ಹೇಳಿದರು ಅಂತಾ ನಮ್ಮ ಜಿಲ್ಲೆಯಲ್ಲಂತೂ ಬಿಜೆಪಿಯವರು ಜೆಡಿಎಸ್ ಗೆ ವೋಟ್ ಹಾಕಲ್ಲ. ಅವರ ವೋಟು ಅವರು ಹಾಕ್ಕೋತ್ತಾರೆ. ಮಂಡ್ಯದಲ್ಲೂ ಅಷ್ಟೇ. ಯಡಿಯೂರಪ್ಪನವರು ಬೂಕನಕೆರೆಗೆ ಹೋಗಿ ಹೇಳಲಿ ನೋಡೋಣ. ಬಿಜೆಪಿಯವರು ಜೆಡಿಎಸ್ ಗೆ ವೋಟು ಹಾಕಿ ಅಂತಾ. ಮೈಸೂರಲ್ಲೂ ಹೇಳೋಕೆ ಆಗಲ್ಲ. ಅವೆಲ್ಲ ಆಗಲ್ಲಾ. ಎಲ್ಲೋ ಕ್ಯಾಂಡಿಡೇಟ್ ಇಲ್ಲದ ಕಡೆ ಹೇಳಬಹುದು. ಆದರೆ ಬಿಜೆಪಿ ಪಕ್ಷದವರು ಪ್ರತಿಷ್ಟೆ ಪಕ್ಕಕ್ಕಿಟ್ಟು ಇವರ ಮಾತು ಕೇಳಲ್ಲ.


ಸಿಎಂ ಹೇಳಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷರೂ ಹೇಳಿಲ್ಲ. ಹಾಗಾದರೆ ಯಡಿಯೂರಪ್ಪನವರ ಹೇಳಿಕೆ ಪಕ್ಷದೊಳಗೇ ಅವರಿಗೇ ತಿರುಗುಬಾಣವಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್ ಅವರು, ಖಂಡಿತಾ, ಬಿಜೆಪಿ ಒಟ್ಟಾರೆ ಈಗ ಗೊಂದಲದ ಗೂಡಾಗಿದೆ. ಕೋಲಾರದಲ್ಲಿ ಬಿಜೆಪಿ, ಜೆಡಿಎಸ್ ಎರಡೂ ಪಕ್ಷದ ಅಭ್ಯರ್ಥಿಗಳು ಮನೆ, ಮನೆಗೂ ವೋಟು ಕೇಳಿಕೊಂಡು ತಿರುಗುತ್ತಿದ್ದಾರೆ. ಹಾಗಾದರೆ ಯಡಿಯೂರಪ್ಪನವರ ಮಾತಿಗೆಲ್ಲಿದೆ ಬೆಲೆ. ಬಿಜೆಪಿಗೆ ಬಿಟ್ಟುಕೊಟ್ಟರೆ ಜೆಡಿಎಸ್ ನೆಲೆ ಕಳೆದುಕೊಳ್ಳುತ್ತದೆ. ಚಿಕ್ಕಬಳ್ಳಾಪುರದಲ್ಲಿ ವೋಟ್ ಟ್ರಾನ್ಸ್ ಫರ್ ಮಾಡಿದ್ರೆ ಅಸೆಂಬ್ಲಿಯಲ್ಲಿ ಮರ್ಯಾದೆ ಹೋಗುತ್ತದೆ. ಅಲ್ಲಿ ಆಂತರಿಕ ಪ್ರತಿಷ್ಟೆ ವಿಚಾರಗಳು ಬೇಕಾದಷ್ಟಿವೆ.


ಜಾತ್ಯತೀತ ಶಕ್ತಿಗಳು ಒಂದಾಗಬೇಕು ಅಂತ ಹೇಳ್ತಿರುತ್ತೀರಿ ಎಂಬ ಪ್ರಸ್ತಾಪಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ಅವರು, ಹಿಂದೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹಾಸನ, ಮಂಡ್ಯದಲ್ಲಿ ಹೊಂದಾಣಿಕೆ ಮಾಡಿಕೊಳ್ಳೋಣ ಅಂತಾ ನಾನೇ ಜೆಡಿಎಸ್ ಗೆ ಹೇಳಿದ್ದೆ. ಅವತ್ತು ನಮ್ಮ ಪಾರ್ಟಿಯಿಂದ ಹೋದ ನಾಯಕರು ವಾಪಸ್ ಬಂದೇ ಇಲ್ಲ. ಹಿಂಗಾಗಿ ಬೆಂಗಳೂರು ಗ್ರಾಮಾಂತರದಲ್ಲಿ ಫ್ರೆಂಡ್ಲಿ ಫೈಟ್ ಮಾಡ್ತಿದ್ದೇವೆ ಎಂದು ಡಿಕೆಶಿ ಹೇಳಿದರು.

Join Whatsapp