ಅಧಿಕಾರ ವಿಕೇಂದ್ರೀಕರಣಕ್ಕೆ ಬಿಜೆಪಿ ನೀಡಿರುವ ಕೊಡುಗೆ ಶೂನ್ಯ: ಸಿದ್ದರಾಮಯ್ಯ

Prasthutha|

ಮಂಡ್ಯ: ಜಾತ್ಯತೀತ ತತ್ವದಲ್ಲಿ ನಂಬಿಕೆಯಿರುವ ಎಲ್ಲಾ ಮತದಾರರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ತೀರ್ಮಾನ ಮಾಡಿದ್ದಾರೆ. ಬಿಜೆಪಿ ಪಕ್ಷ ಚುನಾವಣೆ ಸೋಲಿಗೆ ಹೆದರಿ ತಾಲೂಕು ಮತ್ತು ಜಿಲ್ಲಾ ಪಂಚಾಯತಿ ಚುನಾವಣೆಗಳನ್ನು ಮಾಡುತ್ತಿಲ್ಲ. ಅವರು ಈಗ ರಚಿಸಿರುವ ಆಯೋಗದ ಅಗತ್ಯ ಇರಲಿಲ್ಲ, ಆದರೂ ಆಯೋಗ ರಚಿಸಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

- Advertisement -


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯದಲ್ಲಿ ಸುಮಾರು 4,025 ಜನ ಪರಿಷತ್ ಮತದಾರರಿದ್ದಾರೆ. ಇಲ್ಲಿ ಮೂರು ಪಕ್ಷಗಳ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಆದರೆ ಇಲ್ಲಿ ಸ್ಪರ್ಧೆ ಇರುವುದು ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ. ಕಳೆದ ಬಾರಿ ಜೆಡಿಎಸ್ ನವರು ಗೆದ್ದಿದ್ದರು, ಈ ಬಾರಿ ದಿನೇಶ್ ಗೂಳಿಗೌಡ ನಮ್ಮ ಅಭ್ಯರ್ಥಿ ಎಂದರು.


ಈಗ ರಾಜ್ಯದಲ್ಲಿ ಬಿಜೆಪಿ ವಿರೋಧಿ ಅಲೆ ಇದ್ದು, ರಾಜಕೀಯ ಧ್ರುವೀಕರಣ ಆರಂಭವಾಗಿದೆ. ಸಾಮಾನ್ಯ ಜನ, ಚುನಾಯಿತ ಪ್ರತಿನಿಧಿಗಳು ಸೇರಿ ಎಲ್ಲರೂ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳ ಜನವಿರೋಧಿ, ಅಭಿವೃದ್ಧಿ ಶೂನ್ಯ ಆಡಳಿತದಿಂದ ರೋಸಿ ಹೋಗಿದ್ದಾರೆ. ಜನರಿಗೆ ನೀಡಿದ ಭರವಸೆಯನ್ನು ಈಡೇರಿಸುವಲ್ಲಿ ಬಿಜೆಪಿ ಸರ್ಕಾರಗಳು ವಿಫಲವಾಗಿವೆ. ಜೆಡಿಎಸ್ ಇಡೀ ರಾಜ್ಯದ ಎಲ್ಲಾ ಕಡೆ ಇರುವ ಪಕ್ಷವಲ್ಲ, ರಾಜ್ಯದ ಕೆಲವೇ ಕೆಲವು ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಆಗುತ್ತಾ ಇದೆ, ಕೇಂದ್ರದಲ್ಲಿ ಬಂದು 7 ವರ್ಷ ಆಗಿದೆ, ಇವೆರಡೂ ಸರ್ಕಾರಗಳು ಅಧಿಕಾರ ವಿಕೇಂದ್ರೀಕರಣಕ್ಕೆ ನೀಡಿರುವ ಕೊಡುಗೆ ಶೂನ್ಯ. ಪಂಚಾಯತ್ ರಾಜ್ ವ್ಯವಸ್ಥೆಗೆ ಎರಡು ಬಾರಿಯೂ ಶಕ್ತಿ ತುಂಬುವ ಕೆಲಸ ಮಾಡಿದ್ದು ಕಾಂಗ್ರೆಸ್ ಪಕ್ಷ. ರಾಮ ಮನೋಹರ ಲೋಹಿಯಾ ಅವರು ದೇಶದ ಅಧಿಕಾರ ಗ್ರಾಮ, ಜಿಲ್ಲೆ, ರಾಜ್ಯ ಹಾಗೂ ಕೇಂದ್ರ ಮಟ್ಟದಲ್ಲಿ ಹಂಚಿಕೆಯಾಗಬೇಕು ಎಂದು ಹೇಳಿದ್ದರು. ಅವರ ಈ ಅಧಿಕಾರ ವಿಕೇಂದ್ರೀಕರಣ ತತ್ವದಲ್ಲಿ ಕಾಂಗ್ರೆಸ್ ಪಕ್ಷ ನಂಬಿಕೆ ಇಟ್ಟಿದೆ. ಅಧಿಕಾರ ವಿಕೇಂದ್ರೀಕರಣಕ್ಕೆ ಇತರೆ ಪಕ್ಷಗಳ ಕೊಡುಗೆ ಶೂನ್ಯ ಎಂದು ಸಿದ್ದರಾಮಯ್ಯ ಆರೋಪಿಸಿದರು.

- Advertisement -


ಮೋದಿಯವರು ಪ್ರಧಾನಿಯಾಗಿ ಏಳು ವರ್ಷ ಕಳೆದಿದೆ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಆಗಿದೆ. ಗ್ರಾಮಗಳ ಸಬಲೀಕರಣಕ್ಕೆ ಈ ಎರಡು ಸರ್ಕಾರಗಳು ಏನು ಮಾಡಿವೆ? ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ ಜಾರಿಗೊಳಿಸಿದ್ದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು, ಇದರಿಂದ ಗ್ರಾಮ ಪಂಚಾಯತಿಗಳಿಗೆ ಅನುದಾನ ಹರಿದು ಬರಲು ಆರಂಭವಾಯಿತು. ಕಳೆದ ಕೆಲವು ತಿಂಗಳುಗಳಿಂದ ಉದ್ಯೋಗ ಖಾತ್ರಿಯಲ್ಲಿ ಕೆಲಸ ಮಾಡಿದವರ ಕೂಲಿ ನೀಡಿಲ್ಲ. ಕೊರೊನಾ ರೋಗ ಉಲ್ಬಣಗೊಂಡ ಸಂದರ್ಭದಲ್ಲಿ ನರೇಗಾ ಯೋಜನೆ ಇಲ್ಲದೆ ಹೋಗಿದ್ದರೆ ಜನ ಇನ್ನಷ್ಟು ಸಮಸ್ಯೆ ಎದುರಿಸಬೇಕಾಗುತ್ತಿತ್ತು. ಇದು ಕಾಂಗ್ರೆಸ್ ಕೊಡುಗೆ ಎಂದರು.


ರಾಜ್ಯಗಳಿಗೆ ಹೊಸದಾಗಿ ಯಾವ ಅನುದಾನವನ್ನು ಕೇಂದ್ರ ನೀಡಿಲ್ಲ. ನಾನು ಮುಖ್ಯಮಂತ್ರಿ ಆಗಿದ್ದಾಗ ವಾರ್ಷಿಕ 3 ಲಕ್ಷ ಮನೆಗಳಂತೆ ಐದು ವರ್ಷಕ್ಕೆ 15 ಲಕ್ಷ ಮನೆಗಳನ್ನು ನಿರ್ಮಾಣ ಮಾಡಿದ್ದೆ. ಕಳೆದ ಮೂರೂವರೆ ವರ್ಷಗಳಲ್ಲಿ ಒಂದೇ ಒಂದು ಮನೆ ಕಟ್ಟಿಸಿಕೊಟ್ಟಿಲ್ಲ. ಬಡವರಿಗೆ ನಿವೇಶನ, ಮನೆ ಕೊಡಲು ಆಗಲ್ಲ ಎಂದಮೇಲೆ ಇಂಥವರಿಗೆ ಯಾಕೆ ಮತ ನೀಡಬೇಕು. ನಮ್ಮ ಸರ್ಕಾರ ಮಂಜೂರು ಮಾಡಿದ್ದ ಕೆಲವು ಮನೆಗಳಿಗೆ ಎರಡನೇ ಕಂತಿನ, ಮೂರನೇ ಕಂತಿನ ಹಣ ನೀಡದೆ ಲಾಕ್ ಮಾಡಿದ್ದಾರೆ. ಈ ಬಗ್ಗೆ ಮಾಧ್ಯಮಗಳು ವರದಿ ಮಾಡಬೇಕು ಎಂದು ಮನವಿ ಮಾಡುತ್ತೇನೆ. ಗ್ರಾಮ ಸಭೆಗಳಲ್ಲಿ ಮನೆ ಮಂಜೂರಾತಿ ಕೆಲಸವೇ ನಿಂತಿದೆ. ಸದನದಲ್ಲಿ ಈ ಬಗ್ಗೆ ವಸತಿ ಸಚಿವ ಸೋಮಣ್ಣನವರನ್ನು ಕೇಳಿದರೆ ಸರ್ಕಾರದ ಬಳಿ ದುಡ್ಡಿಲ್ಲ ಎನ್ನುತ್ತಾರೆ ಎಂದು ಟೀಕಿಸಿದರು.


ಎರಡು ಬಾರಿ ಪ್ರವಾಹ ಬಂದಿದೆ, ಈ ಬರೀ ಅಕಾಲಿಕ ಮಳೆ ಸುರಿದು ರೈತರು ಕಂಗಾಲಾಗಿದ್ದಾರೆ. ರಾಗಿ, ಜೋಳ, ಭತ್ತ, ಅಡಿಕೆ, ತೆಂಗು, ತೊಗರಿ, ಹೂವು, ತರಕಾರಿಗಳು ಮುಂತಾದ ಬೆಳೆಗಳು ಹಾನಿಗೀಡಾಗಿವೆ. ಸುಮಾರು ನಾಲ್ಕು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಈ ಬಗ್ಗೆ ಸಮೀಕ್ಷೆ ನಡೆಸಿಲ್ಲ, ಪರಿಹಾರದ ಹಣವನ್ನು ನೀಡಿಲ್ಲ. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಘೋಷಿಸಿದ ಪರಿಹಾರವನ್ನೇ ಇನ್ನೂ ನೀಡಿಲ್ಲ. ಈ ಬಗ್ಗೆ ಸದನದಲ್ಲಿ ಎರಡೆರಡು ಬಾರಿ ಪ್ರಸ್ತಾಪ ಮಾಡಿದ್ದೇನೆ, ಮತ್ತೆ ಬರುವ ಅಧಿವೇಶನದಲ್ಲಿ ಪ್ರಸ್ತಾಪ ಮಾಡುತ್ತೇನೆ. ಈ ಸರ್ಕಾರ ರೈತ, ಬಡವರ ವಿರೋಧಿ ಸರ್ಕಾರ ಎಂಬುದನ್ನು ಜನ ಅರ್ಥ ಮಾಡಿಕೊಳ್ಳಬೇಕು. ಕೊರೊನಾ ಎರಡನೇ ಅಲೆ ಬರುವ ಮೊದಲು ಸರ್ಕಾರ ಅಗತ್ಯ ತಯಾರಿ ಮಾಡಿಕೊಳ್ಳದೆ ರಾಜ್ಯದಲ್ಲಿ ಕನಿಷ್ಟ 4 ಲಕ್ಷ ಜನ ಸಾವಿಗೀಡಾಗಿದ್ದಾರೆ. ಚಾಮರಾಜನಗರ ಜಿಲ್ಲೆಯೊಂದರಲ್ಲೇ ಒಂದೇ ದಿನ 36 ಜನ ಸಕಾಲದಲ್ಲಿ ಆಮ್ಲಜನಕ ಸಿಗದೆ ಸತ್ತುಹೋದರು. ಆರೋಗ್ಯ ಸಚಿವ ಸುಧಾಕರ್ ಚಾಮರಾಜನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಸತ್ತವರು ಕೇವಲ ಮೂರು ಜನ ಎಂದು ಸುಳ್ಳು ಹೇಳಿದರು, ನಾನು ಹೋಗಿ ವೈದ್ಯರ ಜೊತೆ ಸಭೆ ನಡೆಸಿದಾಗ ಸತ್ತವರು 36 ಎಂದು ಒಪ್ಪಿಕೊಂಡರು. ಸತ್ತವರ ಕುಟುಂಬಕ್ಕೆ ಪರಿಹಾರವನ್ನೂ ನೀಡಿಲ್ಲ ಎಂದು ಸಿದ್ದರಾಮಯ್ಯ ಆರೋಪಿಸಿದರು.


ದೇಶದಲ್ಲಿ ಕೊರೊನಾದಿಂದ ಕಡಿಮೆ ಎಂದರೂ 50 ಲಕ್ಷ ಜನ ಸತ್ತಿದ್ದಾರೆ. ಮೃತರ ಕುಟುಂಬಕ್ಕೆ ಪರಿಹಾರ ನೀಡಿ ಎಂದರೆ ಅದನ್ನೂ ಮಾಡಿಲ್ಲ. ನಿರ್ಮಲಾ ಸೀತಾರಾಮನ್ ಅವರು 20 ಲಕ್ಷ ಪರಿಹಾರ ಕೊಡ್ತೀವಿ ಎಂದರು, ಕೊಟ್ಟರೋ ಬಿಟ್ಟರೋ ಯಾರಿಗೂ ಗೊತ್ತಿಲ್ಲ. ನಮ್ಮ ಸರ್ಕಾರದ ಯೋಜನೆಗಳನ್ನು ನಿಲ್ಲಿಸಿದ್ದಾರೆ. ಸಿದ್ದರಾಮಯ್ಯ ಅವರ ಸರ್ಕಾರ ಏಳು ಕೆ.ಜಿ ಅಕ್ಕಿಯನ್ನು ಒಂದೇ ವರ್ಷ ಕೊಟ್ಟಿದ್ದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸುಳ್ಳು ಹೇಳುತ್ತಾರೆ. ಬಿಜೆಪಿಯ ಕೆಲವರು ಉಚಿತ ಅಕ್ಕಿ ನೀಡುವುದು ಕೇಂದ್ರ ಸರ್ಕಾರದ ಕಾರ್ಯಕ್ರಮ ಎನ್ನುತ್ತಾರೆ. ಹಾಗಾದರೆ ಉತ್ತರ ಪ್ರದೇಶ, ರಾಜಸ್ಥಾನ ಮುಂತಾದ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಈ ಕಾರ್ಯಕ್ರಮ ಯಾಕಿಲ್ಲ. ನಮ್ಮ ಸರ್ಕಾರದ ಇಂದಿರಾ ಕ್ಯಾಂಟೀನ್, ಪಶುಭಾಗ್ಯ, ಕೃಷಿ ಭಾಗ್ಯ ಮುಂತಾದ ಯೋಜನೆಯನ್ನು ನಿಲ್ಲಿಸಿದ್ದಾರೆ. ಜನ ಈ ಸರ್ಕಾರದ ಬಗೆಗೆ ರೋಸಿ ಹೋಗಿದ್ದಾರೆ. ಇದರಿಂದ ಎಲ್ಲಾ ಕಡೆ ಕಾಂಗ್ರೆಸ್ ಪರವಾದ ಅಲೆ ಆರಂಭವಾಗಿದೆ. ಬಹಳಷ್ಟು ಜನರು ಬೇರೆ ಪಕ್ಷಗಳನ್ನು ಬಿಟ್ಟು ಕಾಂಗ್ರೆಸ್ ಸೇರುತ್ತಿದ್ದಾರೆ, ಮುಂದೆಯೂ ಸೇರುವವರಿದ್ದಾರೆ. ಇದರರ್ಥ ರಾಜಕೀಯ ಧ್ರುವೀಕರಣ ಆರಂಭವಾಗಿದೆ.


ನರೇಂದ್ರ ಮೋದಿ ಅವರು ದೇಶದಲ್ಲಿ ಅಚ್ಚೇ ದಿನ್ ಬರುತ್ತೆ ಎಂದರೂ, ನಾ ಖಾವೂಂಗಾ – ನಾ ಖಾನೇದೂಂಗ ಎಂದರು, ರಾಜ್ಯ ಬಿಜೆಪಿ ಸರ್ಕಾರದ ಸಚಿವರು, ಅಧಿಕಾರಿಗಳು ಸರ್ಕಾರಿ ಟೆಂಡರ್ ಗಳಲ್ಲಿ 40% ಕಮಿಷನ್ ತೆಗೆದುಕೊಳ್ಳುತ್ತಿದೆ ಎಂದು ಗುತ್ತಿಗೆದಾರರ ಸಂಘದವರು ಪ್ರಧಾನಿಗೆ ಪತ್ರ ಬರೆದಿದ್ದಾರೆ. ಅದರ ಬಗ್ಗೆ ತನಿಖೆ ನಡೆಸಿದ್ರಾ? ಭ್ರಷ್ಟರಿಗೆ ಶಿಕ್ಷೆ ಕೊಟ್ರಾ? ಬರೀ ಬಾಯಿಮಾತಿಗೆ ನಾ ಖಾವೂಂಗಾ, ನಾ ಖಾನೇದೂಂಗ ಅಂದರೆ ಏನರ್ಥ?

ಮೋದಿ ಅವರ ಅಚ್ಚೇ ದಿನ್ ಎಲ್ಲಿದೆ? ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಗಗನಕ್ಕೇರಿದೆ. ಡೀಸೆಲ್ ಬೆಲೆ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ 45 – 47 ರೂಪಾಯಿ ಇತ್ತು, ಅದರ ಮೇಲೆ ತೆರಿಗೆ 3 ರೂಪಾಯಿ 47 ಪೈಸೆ ಇತ್ತು, ಮೋದಿ ಅವರು ಬಂದಮೇಲೆ ಡೀಸೆಲ್ ಬೆಲೆ 100 ರೂಪಾಯಿ ಆಗಿದೆ, ಡೀಸೆಲ್ ಮೇಲಿನ ತೆರಿಗೆ 31 ರೂಪಾಯಿ 80 ಪೈಸೆಗೆ ಏರಿದೆ. ಪೆಟ್ರೋಲ್ ಬೆಲೆ ಯು.ಪಿ.ಎ ಅವಧಿಯಲ್ಲಿ 65 – 67 ಇತ್ತು, ಪೆಟ್ರೋಲ್ ಮೇಲಿನ ತೆರಿಗೆ 9 ರೂಪಾಯಿ 20 ಪೈಸೆ ಇತ್ತು, ಇವತ್ತು ಪೆಟ್ರೋಲ್ ಬೆಲೆ 100 ದಾಟಿದೆ, ಪೆಟ್ರೋಲ್ ಮೇಲಿನ ತೆರಿಗೆ 32 ರೂಪಾಯಿ 90 ಪೈಸೆ ಆಗಿದೆ. ನರೇಂದ್ರ ಮೋದಿ ಅವರು ಮನ್ ಕೀ ಬಾತ್ ನಲ್ಲಿ ಹೇಳುವಂತೆ ಹಿಂದಿನ ಸರ್ಕಾರ ಸಾಲ ಮಾಡಿದ್ದಕ್ಕೆ ಬೆಲೆ ಹೆಚ್ಚಾಗಿದೆ ಎಂಬುದು ಶುದ್ಧ ಸುಳ್ಳು, ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಕೆಗೆ ಅವುಗಳ ಮೇಲಿನ ತೆರಿಗೆ ಹೆಚ್ಚಳ ಕಾರಣ.


ಹಿಂದಿನ ಸರ್ಕಾರಗಳು ರೂ. 1 ಲಕ್ಷದ 40 ಸಾವಿರ ಕೋಟಿ ತೈಲ ಬಾಂಡ್ ಗಳ ಮೇಲೆ ಸಾಲ ಮಾಡಿದ್ದವು. ಕಳೆದ ಏಳು ವರ್ಷಗಳಲ್ಲಿ ತೆರಿಗೆ ಏರಿಕೆ ಮಾಡಿದ್ದರಿಂದ ಕೇಂದ್ರ ಸರ್ಕಾರಕ್ಕೆ 23 ಲಕ್ಷ ಕೋಟಿ ಆದಾಯ ಬಂದಿದೆ. ಅದರಲ್ಲಿ ಸಾಲದ ಮೊತ್ತ ಕಳೆದರೂ 21 ಲಕ್ಷದ 60 ಸಾವಿರ ಕೋಟಿ ಹಣ ಉಳಿಯುತ್ತೆ. 416 ರೂಪಾಯಿ ಇದ್ದ ಗ್ಯಾಸ್ ಬೆಲೆ ಈಗ ಸಾವಿರ ದಾಟಿದೆ, ಹೀಗೆ ಅಡುಗೆ ಎಣ್ಣೆ, ರಸಗೊಬ್ಬರ, ಸಿಮೆಂಟ್, ಕಬ್ಬಿಣದ ಬೆಲೆ ಗಗನಕ್ಕೇರಿದೆ. ಎಲ್ಲಿದೆ ಅಚ್ಚೇ ದಿನ್? ಬಿಜೆಪಿಗೆ ಮತ ನೀಡಿದರೆ ಒಳ್ಳೆ ದಿನ ಬರುತ್ತೆ ಎಂದುಕೊಂಡಿದ್ದ ಸಾಮಾನ್ಯ ಜನರೀಗ ರೋಸಿ ಹೋಗಿದ್ದಾರೆ. ಬಿಜೆಪಿಯನ್ನು ಕಿತ್ತು ಬಿಸಾಕ್ಬೇಕು ಎಂಬುದು ಜನರ ಮನಸ್ಸಿನಲ್ಲಿದೆ.


ಈ ಬಾರಿ ಮಂಡ್ಯದಲ್ಲಿ ದಿನೇಶ್ ಗೂಳಿಗೌಡ ನೂರಕ್ಕೆ ನೂರರಷ್ಟು ಗೆಲ್ಲುತ್ತಾರೆ ಎಂದು ನಮ್ಮ ಪಕ್ಷದ ಕಾರ್ಯಕರ್ತರು, ಮುಖಂಡರು ಹೇಳುತ್ತಿದ್ದಾರೆ. ನಮ್ಮ ಪಕ್ಷದ ಅಭ್ಯರ್ಥಿಗೆ ಸಿಂಗಲ್ ಮತ ಹಾಕಬೇಕು ಎಂದು ಇಲ್ಲಿನ ಮತದಾರರಲ್ಲಿ ಮನವಿ ಮಾಡುತ್ತೇನೆ. ಅಧಿಕಾರ ವಿಕೇಂದ್ರೀಕರಣದ ಪರವಾಗಿರುವ ಕಾಂಗ್ರೆಸ್ ಗೆ ಶಕ್ತಿ ತುಂಬುವ ಕೆಲಸವನ್ನು ಕ್ಷೇತ್ರದ ಮತದಾರರು ಮಾಡಬೇಕು.
ಯಾರೆಲ್ಲಾ ನಾಯಕರು ಕಾಂಗ್ರೆಸ್ ಪಕ್ಷ ಸೇರುವವರಿದ್ದಾರೆ ಎಂದು ಈಗಲೇ ಹೇಳಲ್ಲ, ಮುಂದಿನ ದಿನಗಳಲ್ಲಿ ಯಾರೆಲ್ಲಾ ಸೇರುತ್ತಾರೆಂದು ಗೊತ್ತಾಗಲಿದೆ.


ನನಗೆ ವೈಯಕ್ತಿಕವಾಗಿ ಯಡಿಯೂರಪ್ಪ, ಕುಮಾರಸ್ವಾಮಿ, ದೇವೇಗೌಡರು, ಬಸವರಾಜ ಬೊಮ್ಮಾಯಿ ಯಾರ ಮೇಲೂ ದ್ವೇಷವಿಲ್ಲ. ನಮ್ಮ ನಡುವೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ಇರುವುದರಿಂದ ಅವರನ್ನು ತೀವ್ರವಾಗಿ ವಿರೋಧ ಮಾಡುತ್ತೇನೆ.
ಜಾತಿ ವ್ಯವಸ್ಥೆ ಜೀವಂತವಾಗಿರುವುದು ಸತ್ಯ. ಆದರೆ ರಾಜಕೀಯದಲ್ಲಿ ಜಾತಿ ತರಬಾರದು. ನನ್ನದು ಜಾತ್ಯಾತೀತ ಸಿದ್ದಾಂತ. ನಾನು ರಾಜಕೀಯದಲ್ಲಿ ಜಾತಿ ಬೆರೆಸಲ್ಲ.
ಕುಟುಂಬ ರಾಜಕಾರಣ ಬೇರೆಲ್ಲೂ ಇಲ್ಲ ಎಂದು ಹೇಳಲಾಗದು. ಆದರೆ ಇಡೀ ಜೆಡಿಎಸ್ ಪಕ್ಷ ಒಂದೇ ಕುಟುಂಬದ ಸುತ್ತ ಗಿರಕಿ ಹೊಡೆಯುತ್ತಿದೆ. ನನ್ನ ಮಗನೂ ಶಾಸಕನಾಗಿದ್ದಾನೆ, ಜನ ಬಯಸಿದ್ರೆ ಯಾರೂ ಬೇಕಾದರೂ ಶಾಸಕರಾಗಬಹುದು. ಆದರೆ ಜನ ಬಯಸದೆ ಇದ್ರೂ ಒತ್ತಾಯಪೂರ್ವಕವಾಗಿ ಜನರ ಮೇಲೆ ಕುಟುಂಬದ ಅಭ್ಯರ್ಥಿಯನ್ನು ಹೇರೋದು ತಪ್ಪು.

ಮಂಡ್ಯದಲ್ಲಿ ಏಳು ಜನ ಜೆಡಿಎಸ್ ಶಾಸಕರಿದ್ದರು, ಜೆಡಿಎಸ್ ನ ಪರಿಷತ್ ಸದಸ್ಯರು ಇದ್ದರು, ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದರು. ಆದರೂ ಲೋಕಸಭೆಯಲ್ಲಿ ಸೋತರು. ಮಂಡ್ಯದ ರೈತ ಸಂಘದವರು, ಕೂಲಿ ಕಾರ್ಮಿಕರ ಸಂಘದವರು, ಕಮ್ಯುನಿಸ್ಟ್ ಪಕ್ಷದವರು ನಮ್ಮ ಪಕ್ಷಕ್ಕೆ ಬೆಂಬಲ ನೀಡಿದ್ದಾರೆ. ಅವರೆಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ. ನಮ್ಮ ಪಕ್ಷ ತೊರೆದು ಬಿಜೆಪಿ ಹೋದವರಿಗೆ ಮರಳಿ ಕಾಂಗ್ರೆಸ್ ಪಕ್ಷ ಸೇರುವುದಕ್ಕೆ ಅವಕಾಶ ಇಲ್ಲ. ಇದನ್ನು ಅಧಿವೇಶನದಲ್ಲೂ ಹೇಳಿದ್ದೆ, ಇದು ಬದಲಾಗಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

Join Whatsapp