ರಾಷ್ಟ್ರೀಯ ಶಿಕ್ಷಣ ನೀತಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕ, ತರಾತುರಿಯಲ್ಲಿ ಜಾರಿ ಸಲ್ಲ; ಸಿದ್ದರಾಮಯ್ಯ

Prasthutha|

ಬೆಂಗಳೂರು: ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕೆಂದರೆ ಮೊದಲು ಈ ದೇಶ ಮಾರಾಟ ಆಗದಂತೆ ತಡೆಯಬೇಕು ಎಂದು ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.


ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ದೇಶವನ್ನೇ ಮಾರಾಟ ಮಾಡುತ್ತಿದೆ. ಈ ದೇಶದಲ್ಲಿ ವಿದ್ಯಾರ್ಥಿಗಳಿಗೂ ಭವಿಷ್ಯವಿದೆ. ಆದ್ದರಿಂದ ಇತಿಹಾಸವನ್ನು ಚೆನ್ನಾಗಿ ಅರಿತು ದೇಶ ಉಳಿಸಲು ಮುಂದಾಗಿ ಎಂದು ಅವರು ತಿಳಿಸಿದ್ದಾರೆ.

- Advertisement -


ರಾಜ್ಯ ವಿದ್ಯಾರ್ಥಿ ಕಾಂಗ್ರೆಸ್ (ಎನ್‌ಎಸ್‌ಯುಐ) ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಸಮೂಹಕ್ಕೆ ದೇಶದ ಚರಿತ್ರೆಯನ್ನು ಅರ್ಥ ಮಾಡಿಸುತ್ತಲೇ ಸಂವಿಧಾನದ ಮಹತ್ವವನ್ನು ತಿಳಿಸಿ ಶಿಕ್ಷಣ-ಸಂಘಟನೆ-ಹೋರಾಟದ ಮಾರ್ಗದಲ್ಲಿ ಭವಿಷ್ಯ ರೂಪಿಸಿಕೊಳ್ಳಲು ಸಿದ್ದರಾಮಯ್ಯ ಅವರು ಕರೆನೀಡಿದರು.


ವಿದ್ಯಾರ್ಥಿ ಕಾಂಗ್ರೆಸ್‌ಗೆ 1971 ರಲ್ಲಿ ಇಂದಿರಾಗಾಂಧಿ ಅವರು ಅಡಿಪಾಯ ಹಾಕಿದರು. ದೇಶದ ವಿದ್ಯಾರ್ಥಿ-ಯುವಜನರನ್ನು ಸೃಜನಶೀಲರನ್ನಾಗಿ, ಪ್ರಜಾತಾಂತ್ರಿಕ ಮಾರ್ಗದಲ್ಲಿ ಸನ್ನದ್ಧ ಗೊಳಿಸಿದರೆ ದೇಶವನ್ನು 21 ನೇ ಶತಮಾನಕ್ಕೆ ಮುನ್ನಡೆಸಲು ಸಾಧ್ಯವಿದೆ ಎಂದು ರಾಜೀವ್‌ಗಾಂಧಿ ಅವರು ಆತ್ಮವಿಶ್ವಾಸದಿಂದ ನುಡಿದಿದ್ದರು.
ರಾಹುಲ್‌ಗಾಂಧಿ ಅವರು ವಿದ್ಯಾರ್ಥಿ ಕಾಂಗ್ರೆಸ್‌ಗೆ ಕಾನೂನುಬದ್ಧ ಚೌಕಟ್ಟು ನೀಡಿದರು. ಹೀಗಾಗಿ ಇಂದು ವಿದ್ಯಾರ್ಥಿ ಸಂಘಟನೆ ಮತ್ತು ವಿದ್ಯಾರ್ಥಿ ಚಳವಳಿ ಇಡಿ ದೇಶಕ್ಕೆ ವ್ಯಾಪಿಸಿದೆ. ಸಾಮಾಜಿಕ ಚಳವಳಿಗಳು ವಿದ್ಯಾರ್ಥಿಗಳು ಸಮಾಜವನ್ನು ಗ್ರಹಿಸಲು, ದೇಶದ ಚರಿತ್ರೆಯನ್ನು ಅರ್ಥ ಮಾಡಿಕೊಳ್ಳಲು ನೆರವಾಗುತ್ತವೆ. ಈ ದಿಕ್ಕಿನಲ್ಲಿ ವಿದ್ಯಾರ್ಥಿ ಸಮೂಹ ತಮ್ಮ ಇತಿಹಾಸ ಪ್ರಜ್ಞೆಯನ್ನು ಹೆಚ್ಚಿಸಿಕೊಂಡು ದೇಶದ ಪ್ರಜಾಪ್ರಭುತ್ವದ ಅಡಿಪಾಯನ್ನು ಗಟ್ಟಿಗೊಳಿಸಬೇಕು ಎಂದರು.


“ಇತಿಹಾಸ ಗೊತ್ತಿಲ್ಲದವನು ಭವಿಷ್ಯ ರೂಪಿಸಲಾರ” ಎಂದು ನಮ್ಮ ಹಿರಿಯರು ಹೇಳಿದ್ದರು. ಇಡೀ ದೇಶದ ಆಸ್ತಿಯನ್ನು ಮಾರಾಟ ಮಾಡುತ್ತಿರುವ ಬಿಜೆಪಿ ಮತ್ತು ಕೇಂದ್ರ ಸರ್ಕಾರಕ್ಕೆ ದೇಶ ನಿರ್ಮಾಣದ ಚರಿತ್ರೆಯೇ ಇಲ್ಲ. ಕಳೆದ 75 ವರ್ಷಗಳಿಂದ ಈ ದೇಶದ ಆಸ್ತಿಯನ್ನು ನಿರ್ಮಿಸಿದವರು ಈ ದೇಶದ ಜನ. ಜವಾಹರಲಾಲ್ ನೆಹರೂ, ಲಾಲ್ ಬಹದ್ದೂರ್ ಶಾಸ್ತ್ರಿ, ಇಂದಿರಾಗಾಂಧಿ, ಪಿ.ವಿ.ನರಸಿಂಹರಾವ್, ರಾಜೀವ್‌ಗಾಂಧಿ, ಮನಮೋಹನ್‌ಸಿಂಗ್ ಅವಧಿಯಲ್ಲಿ ದೇಶದ ಜನ ನಿರ್ಮಿಸಿದ ದೇಶದ ಆಸ್ತಿಗಳನ್ನು ಬಿಜೆಪಿ ಮುಲಾಜಿಲ್ಲದೆ ಮಾರಾಟ ಮಾಡುತ್ತಿದೆ. ಈ ಬಿಜೆಪಿಯವರಿಗೆ ದೇಶದ ಆಸ್ತಿಯನ್ನು ನಿರ್ಮಿಸಿದ, ದೇಶ ಕಟ್ಟಿದ ಅನುಭವವಾಗಲೀ, ಚರಿತ್ರೆಯಾಗಲೀ ಇಲ್ಲ. ಹೀಗಾಗಿ ಈ ದೇಶದ ಬಗ್ಗೆ ಯಾವುದೇ ಭಾವನಾತ್ಮಕ ಸಂಬಂಧವೂ ಇಲ್ಲದಂತೆ ಇಡಿ ದೇಶದ ಆಸ್ತಿಯನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ದೇಶದ ಆಸ್ತಿ ಮಾರಾಟ ಮಾಡುವಾಗ ವಿದ್ಯಾರ್ಥಿ-ಯುವಜನರು ಇದನ್ನೆಲ್ಲಾ ತಿಳಿದುಕೊಳ್ಳದಂತೆ, ಪ್ರಶ್ನಿಸದಂತೆ ಮಾಡಲು ಗಮನವನ್ನು ಬೇರೆಡೆಗೆ ಸೆಳೆಯುತ್ತಿದ್ದಾರೆ. ಹಿಂದೂ-ಮುಸ್ಲಿಮ್, ಪಾಕಿಸ್ತಾನ-ಚೀನಾ ವಿಚಾರಗಳಲ್ಲಿ ನಿಮ್ಮನ್ನು ಕಟ್ಟಿಹಾಕಿ ಬಿಜೆಪಿಯವರು ನಿಮ್ಮ ಭವಿಷ್ಯವನ್ನೂ ಮಾರಾಟ ಮಾಡುತ್ತಿದ್ದಾರೆ. ಪ್ರತೀ ದಿನ ನಿರಂತರ ಸುಳ್ಳುಗಳ ಮೂಲಕ ವಿದ್ಯಾರ್ಥಿ ಯುವಜನರ ಹಾದಿ ತಪ್ಪಿಸುತ್ತಿದ್ದಾರೆ. ಆದ್ದರಿಂದ ನೀವು ಹಾದಿ ತಪ್ಪಬಾರದು. ನಿಮಗೆ ಸತ್ಯ ಗೊತ್ತಾಗಬೇಕು ಎಂದರೆ ಶಿಕ್ಷಿತರಾಗಬೇಕು. ಈ ದೇಶದ ದಲಿತ-ಶೂದ್ರ ಸಮುದಾಯವನ್ನು ಹಲವು ಶತಮಾನಗಳ ಕಾಲ ಶಿಕ್ಷಣದಿಂದ ವಂಚಿತರನ್ನಾಗಿ ಮಾಡಿದ್ದು ಯಾರು ಎನ್ನುವುದನ್ನು ಯಾವತ್ತಾದರೂ ಪ್ರಶ್ನಿಸಿದ್ದೀರಾ ? ಈ ದೇಶದ ಮಹಿಳೆಯರನ್ನೂ ಶಿಕ್ಷಣದಿಂದ ವಂಚಿತರನ್ನಾಗಿ ಮಾಡಲಾಗಿತ್ತು. ಆದರೆ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೀಡಿದ ಸಂವಿಧಾನ ಎಲ್ಲರಿಗೂ ಶಿಕ್ಷಣದ ಹಕ್ಕನ್ನು ನೀಡಿತು. ಇದರಿಂದಾಗಿ ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಕೇವಲ ಶೇ 18 ರಷ್ಟಿದ್ದ ಶಿಕ್ಷಿತ ಮಹಿಳೆಯರ ಪ್ರಮಾಣ ಈಗ ಶೇ 78 ಕ್ಕೆ ಏರಿಕೆಯಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.


ಶಿಕ್ಷಿತರ ಪ್ರಮಾಣ ಹೆಚ್ಚಾದಷ್ಟೂ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಯಾಗಬೇಕಿತ್ತು. ಆದರೆ ಶಿಕ್ಷಿತರೇ ಇಂದು ಜಾತಿ ವ್ಯವಸ್ಥೆಯ-ಕೋಮುವಾದದ ಪೋಷಿತರಾಗಿ ದೇಶವನ್ನು ಅಪಾಯಕ್ಕೆ ದೂಡುತ್ತಿರುವುದು ಆತಂಕಕಾರಿಯಾಗಿದೆ ಎಂದರು.
ಈ ದೇಶದ ಜಾತಿ ವ್ಯವಸ್ಥೆ ಸಮಾಜದಲ್ಲಿ ಯಾರನ್ನೂ ಒಗ್ಗಟ್ಟಾಗಿ, ನೆಮ್ಮದಿಯಾಗಿ ಬದುಕಲು ಬಿಡುವುದಿಲ್ಲ. ಜತೆಗೆ ಎಲ್ಲರಿಗೂ ಸಮಾನ ಅವಕಾಶಗಳನ್ನು ಕೊಡುವುದಿಲ್ಲ ಎನ್ನುವುದನ್ನು ಅರ್ಥ ಮಾಡಿಕೊಂಡಿದ್ದ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಸಮಸಮಾಜ ನಿರ್ಮಾಣದ ಆಶಯವನ್ನು, ಜಾತ್ಯತೀತತೆಯನ್ನು , ಸಮಾನತೆಯನ್ನು, ಸರ್ವಧರ್ಮ ಸಹೋದರತ್ವವನ್ನು, ಪರಧರ್ಮ ಸಹಿಷ್ಣುತೆಯನ್ನು, ಸಾಮಾಜಿಕ ನ್ಯಾಯವನ್ನು ಸೇರಿಸಿದರು.
ಅಂಬೇಡ್ಕರ್ ಅವರ ಸಂವಿಧಾನವನ್ನು ನೆಹರೂ, ಇಂದಿರಾಗಾಂಧಿ ಸೇರಿ ಎಲ್ಲಾ ಕಾಂಗ್ರೆಸ್ ನಾಯಕರು ಒಪ್ಪಿಕೊಂಡರು. ಅಪ್ಪಿಕೊಂಡರು. ಹೀಗಾಗಿ ಸಮಸಮಾಜದ ವಿರೋಧಿಗಳಾದ, ಜಾತ್ಯತೀತತೆಯ ಶತ್ರುಗಳಾದ ಬಿಜೆಪಿಯವರು ಸಂವಿಧಾವನ್ನು ವಿರೋಧಿಸುತ್ತಿದ್ದಾರೆ. ಈ ಹುನ್ನಾರಗಳು ಇತಿಹಾಸದುದ್ದಕ್ಕೂ ನಡೆದುಕೊಂಡು ಬಂದಿದ್ದು ಇದನ್ನೆಲ್ಲಾ ವಿದ್ಯಾರ್ಥಿಗಳು ಅರಿತುಕೊಳ್ಳಬೇಕು ಎಂದರು.


ಕಳೆದ 75 ವರ್ಷಗಳಲ್ಲಿ ದೇಶದಲ್ಲಿ ನಿರ್ಮಾಣ ಆಗಿರುವ ಆಸ್ತಿಗಳನ್ನು ಮಾರಾಟ ಮಾಡಲು ಅನುಕೂಲ ಆಗುವಂತೆ ಬಿಜೆಪಿ ಮತ್ತು ಕೇಂದ್ರ ಸರ್ಕಾರ ಸಂವಿಧಾನ ವಿರೋಧಿ ನಿಲುವುಗಳನ್ನು ತೆಗೆದುಕೊಳ್ಳುತ್ತಿವೆ. ರಾಜ್ಯಗಳ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿವೆ. ಶಿಕ್ಷಣ ಮತ್ತು ಕೃಷಿ ಸಂವಿಧಾನದ ಸಮವರ್ತಿ ಮತ್ತು ರಾಜ್ಯ ಪಟ್ಟಿಯಲ್ಲಿ ಬರುತ್ತವೆ. ಆದರೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳ ಹಕ್ಕುಗಳನ್ನು ಕಿತ್ತುಕೊಂಡು ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದು ದೇಶಾದ್ಯಂತ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಹಾಗೆಯೇ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರುವಾಗಲೂ ರಾಜ್ಯಗಳ ಜತೆ ಚರ್ಚಿಸಿಲ್ಲ. ಪಾರ್ಲಿಮೆಂಟಿನಲ್ಲೂ ಚರ್ಚೆ ಆಗಿಲ್ಲ. ರಾಜ್ಯ ವಿಧಾನಸಭೆಯಲ್ಲೂ ಚರ್ಚೆ ಆಗಿಲ್ಲ. ಚರ್ಚೆಯೇ ಆಗದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ತರಾತುರಿಯಲ್ಲಿ ಜಾರಿ ಮಾಡುತ್ತಿದೆ ಎಂದರು.
ಚರ್ಚೆ ಆದರೆ ವಿದ್ಯಾರ್ಥಿಗಳು ಈ ನೀತಿಯಲ್ಲಿರುವ ಹುಳುಕುಗಳನ್ನು, ತಮ್ಮ ಭವಿಷ್ಯಕ್ಕೆ ಮಾರಕ ಆಗಿರುವ ಸಂಗತಿಗಳನ್ನು ಪ್ರಶ್ನಿಸುತ್ತಾರೆ ಎನ್ನುವ ಕಾರಣಕ್ಕೆ ಚರ್ಚೆಯೇ ಇಲ್ಲದೆ ಜಾರಿ ಮಾಡಲಾಗುತ್ತಿದೆ. ಈ ಎಲ್ಲಾ ಹುನ್ನಾರ ಮತ್ತು ಸಂಚುಗಳನ್ನು ವಿದ್ಯಾರ್ಥಿಗಳು ಅರ್ಥ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.

- Advertisement -