ರಾಷ್ಟ್ರೀಯ ಡೆಂಗ್ಯೂ ದಿನ | ಬಿಬಿಎಂಪಿ ವ್ಯಾಪ್ತಿಯಲ್ಲಿ ಹೆಚ್ಚಿದ ಆತಂಕ

Prasthutha|

► ಮಳೆ ಬೀಳುತ್ತಿದ್ದಂತೆ ನಗರದಲ್ಲಿ ಹೆಚ್ಚುತ್ತಿದೆ ಡೆಂಗ್ಯೂ ಭೀತಿ

- Advertisement -

► ಅಪಾಯಕ್ಕೊಳಗಾಗುವ ಮುನ್ನ ಎಚ್ಚರ ವಹಿಸುವುದು ಸೂಕ್ತ

► ರಾಷ್ಟ್ರೀಯ ಡೆಂಗ್ಯೂ ದಿನದ ವಿಶೇಷ ವರದಿ

- Advertisement -

ಬೆಂಗಳೂರು: ಮಳೆಗಾಲ ಹತ್ತಿರಾಗುತ್ತಿದ್ದಂತೆ ರಾಜ್ಯಾದ್ಯಂತ ಹೆಚ್ಚಾಗುತ್ತಿರುವ ಡೆಂಗ್ಯೂ ಭೀತಿ ರಾಜ್ಯ ರಾಜಧಾನಿಯನ್ನೂ ಬಿಟ್ಟಿಲ್ಲ. ನಗರದಲ್ಲಿ ದಿನದಿಂದ ದಿನಕ್ಕೆ ಡೆಂಗ್ಯೂ ಪೀಡಿತರ ಸಂಖ್ಯೆ ಅಧಿಕವಾಗುತ್ತಿದ್ದು, ಜನ ಸಾಮಾನ್ಯರು ಮತ್ತು ಸ್ಲಂ ನಿವಾಸಿಗಳು ಆತಂಕದಲ್ಲೇ ದಿನ ಕಳೆಯುವಂತಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಈವರೆಗೆ 215ಕ್ಕೂ ಜನರು ಡೆಂಗ್ಯೂ ಜ್ವರಕ್ಕೆ ಒಳಗಾಗಿದ್ದಾರೆ. ಕಳೆದ ಒಂದು ವಾರದಲ್ಲಿ 40ಕ್ಕೂ ಹೆಚ್ಚು ಜನರು ಮಾರಕ ರೋಗಕ್ಕೆ ತುತ್ತಾಗಿದ್ದಾರೆ. ಈ ಪೈಕಿ ಮಕ್ಕಳ ಸಂಖ್ಯೆಯೇ ಅಧಿಕ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಡೆಂಗ್ಯೂ ಜ್ವರ ಪೀಡಿತರ ಸಂಖ್ಯೆ ದುಪ್ಪಟ್ಟಾಗಿರುವುದು ಸಹ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಸೊಳ್ಳೆ ಹರಡುವುದನ್ನು ನಿಯಂತ್ರಿಸಲು ಮತ್ತು ಆರೋಗ್ಯ ವ್ಯವಸ್ಥೆಯಲ್ಲಿ ಪಾಲಿಕೆ ಎಂತಹಾ ಮುನ್ನೆಚ್ಚರಿಕಾ ಕ್ರಮ ವಹಿಸಿದೆ? ಎಂಬ ಪ್ರಶ್ನೆ ಮೂಡಿದೆ.

ಈ ವಿಚಾರವಾಗಿ “ಪ್ರಸ್ತುತ ನ್ಯೂಸ್” ಜೊತೆ ಮಾತನಾಡಿದ ಬಿಬಿಎಂಪಿ ಮುಖ್ಯ ಆರೋಗ್ಯ ಅಧಿಕಾರಿ ಬಾಲಸುಂದರ್, “ನಾವು ಬಿಬಿಎಂಪಿ ವ್ಯಾಪ್ತಿಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸೊಳ್ಳೆಗಳು ಹರಡುವ ಎಲ್ಲ ಕಡೆ ಔಷಧಿ ಸಿಂಪಡಿಸುತ್ತಿದ್ದೇವೆ. ಡೆಂಗ್ಯೂ ಚಿಕಿತ್ಸೆಗೆ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಚಿಕಿತ್ಸೆ ನೀಡುತ್ತಿದ್ದೇವೆ. ನೀರು ನಿಲ್ಲುವಂತಹ ಸ್ಥಳಗಳನ್ನು ಗುರುತಿಸಿ ಮುಚ್ಚಿದ್ದೇವೆ. ಪ್ರಸ್ತುತ ಡೆಂಗ್ಯೂವನ್ನು ಹತೋಟಿಗೆ ತಂದಿದ್ದೇವೆ. ಹೀಗಾಗಿ ಜನ ಭಯಪಡುವ ಅಗತ್ಯ ಇಲ್ಲ” ಎಂದು ವಿಶ್ವಾಸ ನೀಡಿದ್ದಾರೆ.

ಡೆಂಗ್ಯೂ ಜ್ವರಕ್ಕೆ ಸಂಬಂಧಿಸಿದಂತೆ ಜನ ಸಾಮಾನ್ಯರು ಎಂತಹ ಮುನ್ನೆಚ್ಚರಿಕಾ ಕ್ರಮವನ್ನು ತೆಗೆದುಕೊಳ್ಳಬೇಕು ಮಾಹಿತಿ ನೀಡಿರುವ ವೈದ್ಯೆ ಡಾ| ಮುಬೀನಾ, “ಡೆಂಗ್ಯೂ ಜ್ವರಕ್ಕೆ ಸಂಬಂಧಿಸಿದಂತೆ ವೈಯಕ್ತಿಕ ಮುನ್ನಚ್ಚೆರಿಕೆ ಅಗತ್ಯವಾಗಿದೆ. ಜ್ವರದ ಲಕ್ಷಣ ಕಂಡರೆ ಭಯಪಡುವ ಅಗತ್ಯ ಇಲ್ಲ. ಪ್ರಸ್ತುತ ಡೆಂಗ್ಯೂ ಜ್ವರಕ್ಕೆ ಉತ್ತಮ ಗುಣಮಟ್ಟದ ಔಷಧಿ ಇದೆ. ಜ್ವರ ಇದ್ದದವರು ಹೆಚ್ಚು ನೀರು ಕುಡಿಯಬೇಕು, ಮೃದು ಆಹಾರಗಳನ್ನು ಸೇವಿಸಬೇಕು. 7 ರಿಂದ 10 ದಿವಸ ಜ್ವರ ಇರಲಿದ್ದು ವಿಶ್ರಾಂತಿ ಪಡೆದರೆ ಗುಣವಾಗುತ್ತದೆ” ಎಂದು ತಿಳಿಸಿದರು.

ಡೆಂಗ್ಯೂ ಜ್ವರಕ್ಕೆ ಕಾರಣ:

ಮಲೇರಿಯಾದಂತೆ ಸೊಳ್ಳೆಗಳಿಂದ ಹರಡುವ ಮತ್ತೊಂದು ಮಾರಕ ಕಾಯಿಲೆ ಡೆಂಗ್ಯೂ. ಈ ಕಾಯಿಲೆ ಹರಡುವ ಈಡಿಸ್ ಜಾತಿಯ ಸೊಳ್ಳೆಗಳು ಉಷ್ಣವಲಯಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಮನೆಯ ಸುತ್ತಮುತ್ತಲಿನ ಘನತ್ಯಾಜ್ಯ ವಸ್ತುಗಳಲ್ಲಿ ಸಂಗ್ರಹವಾಗುವ ನೀರಿನಿಂದ ಇವು ಉತ್ಪತ್ತಿಯಾಗುತ್ತವೆ. ಮನುಷ್ಯನ ಜೀವಕ್ಕೆ ಮಾರಕವಾಗಬಲ್ಲ ಅನೇಕ ಕಾಯಿಲೆಗಳ ಪೈಕಿ ಡೆಂಗ್ಯೂಗೆ ಅಗ್ರಸ್ಥಾನ.

ಡೆಂಗ್ಯೂ ಜ್ವರದ ಲಕ್ಷಣಗಳು:

ಡೆಂಗ್ಯೂ ಜ್ವರಕ್ಕೆ ತುತ್ತಾದ ಪ್ರಾರಂಭದ ದಿನಗಳಲ್ಲಿ ಯಾವುದೇ ರೋಗ ಲಕ್ಷಣಗಳು ಕಂಡುಬರುವುದಿಲ್ಲ. 4 ರಿಂದ 7 ದಿನಗಳ ನಂತರ ಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತವೆ. ಸಾಮಾನ್ಯವಾಗಿ ಡೆಂಗ್ಯೂ ಜ್ವರ ಬಂದ ವ್ಯಕ್ತಿಯ ದೇಹದ ತಾಪಮಾನ 100°ಸಿ ರಿಂದ 102°ಸಿ ಇರುತ್ತದೆ. ತಲೆನೋವು, ಮೈ-ಕೈ ನೋವು, ಕೀಲುನೋವು, ವಾಂತಿ ,ಕಣ್ಣುಗಳ ಹಿಂಭಾಗದಲ್ಲಿ ನೋವು ಮತ್ತು ದೇಹದ ಮೇಲೆ ಕಲೆಗಳು ಸೇರಿದಂತೆ ಅನೇಕ ಲಕ್ಷಣಗಳು ಕಂಡುಬರುತ್ತವೆ. ಈ ಸಂದರ್ಭದಲ್ಲಿ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯುವುದು ಉತ್ತಮ.

ಡೆಂಗ್ಯೂ ತಡೆಗಟ್ಟುವ ವಿಧಾನಗಳು:

ಡೆಂಗ್ಯೂ ತಡೆಗಟ್ಟಲು ಸೊಳ್ಳೆಗಳನ್ನು ನಿಯಂತ್ರಿಸಿ, ಸೊಳ್ಳೆ ಕಚ್ಚದಂತೆ ಎಚ್ಚರವಹಿಸಿಬೇಕು. ಎಲ್ಲ ಸಮಯದಲ್ಲೂ ಶುದ್ಧ ಹಾಗೂ ಬಿಸಿ ನೀರನ್ನು ಕುಡಿಯಬೇಕು. ನೀರು ಶೇಖರಣಾ ಪಾತ್ರೆಗಳಲ್ಲಿ ಮಿತವಾದ ನೀರು ಸಂಗ್ರಹಿಸಿ ಅದರ ಮುಚ್ಚಳವನ್ನು ಸರಿಯಾಗಿ ಮುಚ್ಚಿಡಬೇಕು. ಅಲ್ಲದೆ ನೀರನ್ನು 2 ದಿವಸಗಳಿಗೊಮ್ಮೆ ಬದಲಿಸಬೇಕು. ಮನೆಯ ಸುತ್ತ ಹಾಗೂ ಮೇಲ್ಛಾವಣಿ ಮೇಲೆ ನೀರು ನಿಲ್ಲದಂತೆ ಎಚ್ಚರವಹಿಸಿಬೇಕು. ತೆಂಗಿನ ಚಿಪ್ಪು, ಟಯರ್ ನಂತಹ ತ್ಯಾಜ್ಯಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕು. ಸೀನುವಾಗ, ಕೆಮ್ಮುವಾಗ ಕರವಸ್ತ್ರಗಳನ್ನು ಬಳಸುವುದು ಸೂಕ್ತ.

Join Whatsapp