ಪಾಪ್ಯುಲರ್ ಫ್ರಂಟ್ ರಾಜ್ಯಾಧ್ಯಕ್ಷರಾಗಿ ನಾಸಿರ್ ಪಾಷಾ ಆಯ್ಕೆ

Prasthutha|

ಬೆಂಗಳೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕದ ನೂತನ ರಾಜ್ಯಾಧ್ಯಕ್ಷರಾಗಿ ನಾಸಿರ್ ಪಾಷಾ ಬೆಂಗಳೂರು ಆಯ್ಕೆಯಾಗಿದ್ದಾರೆ. ಬೆಂಗಳೂರಿನಲ್ಲಿ ಎಪ್ರಿಲ್ 12ರಂದು ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯವರ ಉಪಸ್ಥಿತಿಯಲ್ಲಿ ನಡೆದ ಸಂಘಟನೆಯ ಆಂತರಿಕ ಚುನಾವಣೆಯಲ್ಲಿ ಈ ಆಯ್ಕೆಯನ್ನು ಮಾಡಲಾಯಿತು.
ಪ್ರಧಾನ ಕಾರ್ಯದರ್ಶಿಯಾಗಿ ಅಯ್ಯೂಬ್ ಅಗ್ನಾಡಿ ಮತ್ತು ಕಾರ್ಯದರ್ಶಿಯಾಗಿ ಅಬ್ದುಲ್ ಖಾದರ್ ಪುತ್ತೂರು ಅವರನ್ನು ನೇಮಕ ಮಾಡಲಾಯಿತು.

- Advertisement -

ರಾಜಕೀಯ ಪ್ರೇರಿತ ಈಡಿ ದಾಳಿಗಳ‌ನ್ನು ನಿಲ್ಲಿಸಿ:
ಜಾರಿ ನಿರ್ದೇಶನಾಲಯವು ಪಾಪ್ಯುಲರ್ ಫ್ರಂಟ್ ಕೇರಳ ರಾಜ್ಯ ನಾಯಕ ಎಂ.ಕೆ.ಅಶ್ರಫ್ ರ‌ನ್ನು ಬಂಧಿಸಿರುವುದು ಖಂಡನಾರ್ಹವಾಗಿದೆ. ಇದು ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಸಂಘಟನೆಯನ್ನು ಮತ್ತು ಸಂಘಟನಾ ನಾಯಕರನ್ನು ಗುರಿಪಡಿಸುತ್ತಿರುವುದರ ಮುಂದುವರಿದ ಭಾಗವಾಗಿದೆ. ಈಡಿ, ಪಾಪ್ಯುಲರ್ ಫ್ರಂಟ್ ವಿರುದ್ಧ ನಿರಂತರ ತನಿಖೆ ನಡೆಸುತ್ತಾ ಬಂದಿದ್ದರೂ, ಸಂಘಟನೆಯು ಕಾನೂನುಬಾಹಿರ ಹಣಕಾಸಿನ ವ್ಯವಹಾರದಲ್ಲಿ ತೊಡಗಿರುವುದಕ್ಕೆ ಯಾವುದೇ ಆಧಾರ ಕಂಡು ಕೊಳ್ಳಲು ಅದಕ್ಕೆ ಸಾಧ್ಯವಾಗಿಲ್ಲ. ಸಂಘಟನೆಯ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿ ಮತ್ತು ಕಾನೂನಾತ್ಮಕವಾಗಿಯೇ ನಡೆಯುತ್ತಿದ್ದರೂ, ಇಂತಹ ದಾಳಿಗಳು ಸಂಘಟನೆಯನ್ನು ಹಿಂದಕ್ಕೆ ಸರಿಸುವ ಪ್ರಯತ್ನಗ‌ಳಷ್ಟೇ ಆಗಿವೆ. ಈಡಿ ಸಂಸ್ಥೆಯು ತನ್ನ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳಬೇಕು ಮತ್ತು ರಾಜಕೀಯಪ್ರೇರಿತ ಇಂತಹ ದಾಳಿಗಳಿಗೆ ಅಂತ್ಯ ಹಾಡಬೇಕೆಂದು ಸಭೆಯಲ್ಲಿ ಒತ್ತಾಯಿಸಲಾಯಿತು.

ಮುಸ್ಲಿಮ್ ವಿರೋಧಿ ಹಿಂಸಾಚಾರಗಳ ಬಗ್ಗೆ ನ್ಯಾಯಾಂಗ ತನಿಖೆಯಾಗಲಿ:
ರಾಜ್ಯದಲ್ಲಿ ಮುಸ್ಲಿಮ್ ವಿರೋಧಿ ಹಿಂಸಾಚಾರಗಳು ವ್ಯಾಪಕವಾಗಿದೆ. ಹಿಜಾಬ್, ಹಲಾಲ್, ಮುಸ್ಲಿಮ್ ವ್ಯಾಪಾರಿಗಳಿಗೆ ಬಹಿಷ್ಕಾರ ಹಾಕುವ ಮೊದಲಾದವುಗಳ ಮೂಲಕ ಸಾಮಾಜಿಕ ಸ್ವಾಸ್ಥ್ಯವನ್ನು ಕೆಡಿಸುವ ಪ್ರಯತ್ನ ನಡೆಸಲಾಗುತ್ತಿದೆ. ಅಹಿತಕರ ಘಟನೆಗಳು ನಿರಂತರವಾಗಿ ನಡೆಯುತ್ತಿದ್ದರೂ ಬೊಮ್ಮಾಯಿ ಸರಕಾರ ನಿಷ್ಕ್ರಿಯವಾಗಿದೆ ಮತ್ತು ಗಂಭೀರ ಆಡಳಿತ ವೈಫಲ್ಯವನ್ನು ಎದುರಿಸುತ್ತಿದೆ. ಬಜರಂಗದಳ ಸಹಿತ ಸಂಘಪರಿವಾರದ ಗೂಂಡಾಗಳಿಗೆ ದುಷ್ಕೃತ್ಯದಲ್ಲಿ ನಡೆಸಲು ಮುಕ್ತ ಅವಕಾಶವನ್ನು ನೀಡಲಾಗಿದೆ. ಈ ಮೂಲಕ ಕರ್ನಾಟಕವನ್ನು ಕೂಡ ಉತ್ತರ ಪ್ರದೇಶದಂತೆ ಗೂಂಡಾ ರಾಜ್ ಆಗಿ ಪರಿವರ್ತಿಸುವ ಪ್ರಯತ್ನಗಳು ನಡೆಯುತ್ತಿವೆ. ಈ ಎಲ್ಲಾ ಘಟನೆಗಳು ರಾಜ್ಯ ಸರಕಾರದ ಕುಮ್ಮಕ್ಕಿನಿಂದಲೇ ನಡೆಯುತ್ತಿರುವುದರಿಂದ ಇದರ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕೆಂದು ಸಭೆ ಒತ್ತಾಯಿಸುತ್ತದೆ.

- Advertisement -

ಸಚಿವ ಈಶ್ವರಪ್ಪರನ್ನು ಕೂಡಲೇ ಬಂಧಿಸಿ ಜೈಲಿಗಟ್ಟಬೇಕು:
ಗುತ್ತಿಗೆದಾರರನ್ನು 40% ಕಮಿಷನ್ ಗೆ ಒತ್ತಾಯಪಡಿಸಲಾಗುತ್ತಿದೆ ಎಂಬ ಗಂಭೀರ ಆರೋಪ ಈ ಹಿಂದೆಯೇ ಕೇಳಿ ಬಂದಿತ್ತಾದರೂ, ಅದರ ಬಗ್ಗೆ ಸರಕಾರ ಮೌನ ತಾಳಿತು. ಗುತ್ತಿಗೆದಾರ ಸಂತೋಷ್ ಪಾಟೀಲ್ ರ ಆತ್ಮಹತ್ಯೆಯ ಮೂಲಕ 40% ಕಮಿಷನ್ ವಿಚಾರ ಮತ್ತೆ ಚರ್ಚೆಯ ಮುನ್ನೆಲೆಗೆ ಬಂದಿದೆ. ಗುತ್ತಿಗೆದಾರರ ಸಂಘದ ಅಧ್ಯಕ್ಷರೂ ಕಮಿಷನ್ ದಂಧೆಯ ವಿಚಾರವನ್ನು ಸ್ವತಃ ಬಹಿರಂಗಪಡಿಸಿದ್ದಾರೆ. ಇದೀಗ ಗುರುತರ ಆರೋಪ ಎದುರಿಸುತ್ತಿರುವ ಸಚಿವ ಈಶ್ವರಪ್ಪರ ರಾಜೀನಾಮೆ ಪಡೆಯುವುದು ಮಾತ್ರವಲ್ಲ, ಅವರ‌ನ್ನು ಕೂಡಲೇ ಬಂಧಿಸಿ ಜೈಲಿಗಟ್ಟಬೇಕು. ಅದರೊಂದಿಗೆ ರಾಜ್ಯದಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರಗಳ ಬಗ್ಗೆಯೂ ಸೂಕ್ತ ತನಿಖೆ ನಡೆಸಬೇಕೆಂದು ಸಭೆ ಒತ್ತಾಯಿಸುತ್ತದೆ.

Join Whatsapp