ನರೇಂದ್ರ ಮೋದಿ ದೇಶದ ಆರ್ಥಿಕತೆಯನ್ನು ಹಾಳುಗೆಡವಿದ್ದಾರೆ: ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ

Prasthutha|

ಬೆಂಗಳೂರು: ದೇಶದ ಪ್ರಧಾನಿ ಹುದ್ದೆಯನ್ನಂಲಕರಿಸಿದ ನರೇಂದ್ರ ಮೋದಿ ಅವರು ದೇಶದ ಆರ್ಥಿಕತೆಯನ್ನು ಸಂಪೂರ್ಣವಾಗಿ ಹಾಳುಗೆಡವಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

- Advertisement -

ಇಂದು ವಿಧಾನಸೌಧದ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಸರ್ಕಾರದ ಎಂಟು ವರ್ಷಗಳ ಆಡಳಿತ ವೈಫಲ್ಯಗಳ ಕುರಿತಾದ “ವರುಷ ಎಂಟು, ಅವಾಂತರಗಳು ನೂರೆಂಟು” ಎಂಬ ಕಿರುಹೊತ್ತಿಗೆಯನ್ನು ಬಿಡುಗಡೆಗೊಳಿಸಿದರು.

ನರೇಂದ್ರ ಮೋದಿ ಅವರು 2014 ಮೇ 28 ರಂದು ಪ್ರಧಾನಿಯಾಗಿದ್ದು, ಈ ವರ್ಷದ ಮೇ 28ಕ್ಕೆ ಅವರು ಪ್ರಧಾನಿಯಾಗಿ 8 ವರ್ಷಗಳು ತುಂಬಿದೆ. ಈ ಎಂಟು ವರ್ಷಗಳು ಪೂರೈಸಿರುವ ಸಂಭ್ರಮಾಚರಣೆಯನ್ನು ಹಮ್ಮಿಕೊಂಡಿದ್ದರು. ದೇಶದಲ್ಲಿ ಸುಭಿಕ್ಷೆ ತಂದಿದ್ದೇವೆ, ಸೌಹಾರ್ದ ವಾತಾವರಣ ನಿರ್ಮಾಣ ಮಾಡಿದ್ದೇವೆ ಎಂದು ದೊಡ್ಡ ದೊಡ್ಡ ಜಾಹಿರಾತುಗಳನ್ನು ಕೊಟ್ಟಿದ್ದಾರೆ. ನಮ್ಮ ರಾಜ್ಯದಲ್ಲೂ ನಿರಂತರವಾಗಿ ಎರಡು ದಿನ ಜಾಹಿರಾತು ನೀಡಿದ್ದಾರೆ ಎಂದರು.

- Advertisement -

2014ರ ಸಂಸತ್‌ ಚುನಾವಣೆಯಲ್ಲಿ ಈ ದೇಶದ ಜನರಿಗೆ ಏನು ಹೇಳಿದ್ದರು? ಪ್ರಧಾನಿಯಾಗಿ ಏನು ಮಾಡಿದರು? ಇದರಿಂದ ಬಡವರು, ಮಹಿಳೆಯರು, ಸಾಮಾನ್ಯ ಜನರು, ರೈತರು, ಅಲ್ಪಸಂಖ್ಯಾತರು, ಹಿಂದುಳಿದ ಜನರು ಎಷ್ಟು ಕರ್ಷ ಕಾರ್ಪಣ್ಯಗಳನ್ನು ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ? ಮೋದಿ ಅವರ ಭರವಸೆಗಳು ಹೇಗೆ ಹುಸಿಯಾಗಿದೆ? ಬಡವರ, ಸಾಮಾನ್ಯ ಜನರ ಜೀವನ ಹೇಗೆ ದುಸ್ಥರವಾಗಿದೆ? ಎಂಬುದನ್ನು ಪುಸ್ಕರದ ಮೂಲಕ ತಿಳಿಸುವ ಪ್ರಯತ್ನ ಮಾಡಿದ್ದೇವೆ. ಈ ಎಂಟು ವರ್ಷಗಳ ಸಂಭ್ರಮಾಚರಣೆ ಸುಳ್ಳಿನ ಆಚರಣೆ, ಜನತೆಗೆ ಕೊಟ್ಟ ಭರವಸೆಗಳನ್ನು ಈಡೇರಿಸಲಾಗದೆ, ಜನದ್ರೋಹದ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಹೈದರಾಬಾದ್‌ ನಲ್ಲಿ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಣಿ ಸಭೆ ನಡೆಯುತ್ತಿದೆ. ಈ ಪುಸ್ತಕದಲ್ಲಿರುವ ವಿಷಯಗಳಿಗೆ ಬಿಜೆಪಿಯವರು ಉತ್ತರ ನೀಡಬೇಕು. ಕಾರ್ಯಕಾರಿಣಿ ಸಭೆಯಲ್ಲಿ ನರೇಂದ್ರ ಮೋದಿ, ಅಮಿತ್‌ ಶಾ, ಜೆ.ಪಿ ನಡ್ಡಾ ಅವರು ಸೇರಿದಂತೆ ಎಲ್ಲರೂ ಭಾಗವಹಿಸಿದ್ದಾರೆ. ನಮ್ಮ ಪ್ರಶ್ನೆಗಳಿಗೆ ಉತ್ತರ ನೀಡುತ್ತಾರಾ ನೋಡೋಣ ಎಂದು ಪ್ರಶ್ನಿಸಿದ್ದಾರೆ.

ನರೇಂದ್ರ ಮೋದಿ ಅವರು 12 ವರ್ಷ ಗುಜರಾತ್‌ ಮುಖ್ಯಮಂತ್ರಿಯಾಗಿದ್ದರು. ಈಗ ಪ್ರಧಾನಿಯಾಗಿ ಎಂಟು ವರ್ಷಗಳು ತುಂಬಿದೆ. ಮೋದಿ ಅವರು 2014 ರಲ್ಲಿ ಗುಜರಾತ್‌ ಮಾದರಿ ಮಾಡುತ್ತೇವೆ ಎಂದು ದೇಶದ ಉದ್ದಗಲಕ್ಕೆ ಸುಳ್ಳು ಭ್ರಮೆಯನ್ನು ಹುಟ್ಟಿಸಿದ್ದರು. ವಿದೇಶದಲ್ಲಿರುವ ಕಪ್ಪು ಹಣ ತಂದು 15 ಲಕ್ಷದಂತೆ ಪ್ರತಿ ಕುಟುಂಬಕ್ಕೆ ಹಂಚುತ್ತೇವೆ, ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತೇವೆ, ಯುವಕರಿಗೆ ಪ್ರತೀ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ, ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ, ಬೆಲೆ ಏರಿಕೆಯನ್ನು ತಡೆಗಟ್ಟಿ ಅಚ್ಚೇ ದಿನ್‌ ತರುತ್ತೇವೆ ಎಂದಿದ್ದರು. ಕಳೆದ ಎಂಟು ವರ್ಷಗಳಲ್ಲಿ ಒಂದೇ ಒಂದೂ ಭರವಸೆಯೂ ಈಡೇರಿಲ್ಲ. ಇವರ ಮಾತು ನಂಬಿ 2014 ರಲ್ಲಿ 83.4 ಕೋಟಿ ಮತದಾರರಲ್ಲಿ 17 ಕೋಟಿ ಮತದಾರರು ಬಿಜೆಪಿಗೆ ಮತ ನೀಡಿದ್ದರು. 2019ರಲ್ಲಿ ಈ ಯಾವ ಭರವಸೆಗಳು ಈಡೇರದಿದ್ದ ಕಾರಣಕ್ಕೆ ಜನ ಬೇಸರಗೊಂಡಿದ್ದರು, ಹಾಗಾಗಿ ಪುಲ್ವಾಮಾ ಮತ್ತು ಬಾಲಾಕೋಟ್‌ ವಿಷಯಗಳನ್ನು ಮುಂದಕ್ಕೆ ತಂದು ಜನರನ್ನು ವಾಸ್ತವ ಸಮಸ್ಯೆಗಳಿಂದ ಬೇರೆ ಕಡೆ ತಿರುಗಿಸಿ ಮತ್ತೆ ಅಧಿಕಾರಕ್ಕೆ ಬಂದರು. 2019ರ ಚುನಾವಣೆಯಲ್ಲಿ 92 ಕೋಟಿ ಮತದಾರದಲ್ಲಿ 22.9 ಕೋಟಿ ಮತದಾರರು ಬಿಜೆಪಿಗೆ ಮತ ನೀಡಿದ್ದರು. ಇಡೀ ದೇಶದ ಮತದಾರರು ತಮಗೆ ಬೆಂಬಲಿಸಿದ್ದಾರೆ ಎಂದು ಬಿಂಬಿಸುವ ಕೆಲಸ ಮಾಡಿದ್ದಾರೆ ಎಂದರು.

2020 ರಿಂದ ಗ್ಯಾಸ್‌ ಸಬ್ಸಿಡಿಯನ್ನು ನಿಲ್ಲಿಸಿದ್ರು. ಯಾವಾಗ ಡೀಸೆಲ್‌ ಬೆಲೆ ಏರಿಕೆ ಆಗುತ್ತೆ ಆಗ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗುತ್ತದೆ. ಸಾರಿಗೆ ವೆಚ್ಚ ಏರಿಕೆಯಾದಂತೆ ಆಹಾರ ಪದಾರ್ಥಗಳು, ಸಿಮೆಂಟ್‌, ಕಬ್ಬಿಣ ಇವುಗಳ ಬೆಲೆ ಹೆಚ್ಚಾಯಿತು. ಇದು ನರೇಂದ್ರ ಮೋದಿ ಅವರ 8 ವರ್ಷಗಳ ಕೊಡುಗೆ ಎಂದು ತಿಳಿಸಿದ್ದಾರೆ.

ನಾವು 8 ವರ್ಷಗಳಲ್ಲಿ ಕರ್ನಾಟಕಕ್ಕೆ ವಿವಿಧ ಯೋಜನೆಗಳ ಅಡಿ 1,29,766 ಕೋಟಿ ಕೊಟ್ಟಿದ್ದೇವೆ ಎಂದು ಜಾಹಿರಾತು ನೀಡಿ, ತಮ್ಮ ಬೆನ್ನು ತಾವು ತಟ್ಟಿಕೊಂಡಿದ್ದಾರೆ. ಕಳೆದ 8 ವರ್ಷಗಳಲ್ಲಿ ಕರ್ನಾಟಕದಿಂದ ಸಂಗ್ರಹವಾಗಿರುವ ತೆರಿಗೆ 19 ಲಕ್ಷ ಕೋಟಿ. ಆದರೆ ಅವರು ನೀಡಿರುವುದು 1.29 ಲಕ್ಷ ಕೋಟಿ. ಇದರಲ್ಲಿ ನಮ್ಮ ತೆರಿಗೆ ಪಾಲು ಮತ್ತು ಕೇಂದ್ರ ಪ್ರಾಯೋಜಕತ್ವದ ಯೋಜನೆಗಳಿಗೆ 2.14 ಲಕ್ಷ ಕೋಟಿ. ಎರಡೂ ಒಟ್ಟು ಸೇರಿ ಸಿಕ್ಕಿರುವುದು 3.43 ಲಕ್ಷ ಕೋಟಿ ಚಿಲ್ಲರೆ ಹಣ. ಕಳೆದ ವರ್ಷ 2021-22 ರಲ್ಲಿ ಕರ್ನಾಟಕದಿಂದ ಸಂಗ್ರಹವಾದ ತೆರಿಗೆ 3 ಲಕ್ಷ ಕೋಟಿ. ನಮಗೆ 42% ಬರಬೇಕಾದ ಪಾಲಿನ ಪ್ರಕಾರ 19 ಲಕ್ಷ ಕೋಟಿಯಲ್ಲಿ 8 ಲಕ್ಷ ಕೋಟಿ ಬರಬೇಕು. ಬಹಳ ದೊಡ್ಡದಾಗಿ ಭೀಕ್ಷೆ ಕೊಟ್ಟವರಂತೆ ಜಾಹಿರಾತು ನೀಡಿದ್ದಾರೆ, ಈ ಹಣ ನಮ್ಮದೇ. ಕರ್ನಾಟಕದಿಂದಲೇ ತೆರಿಗೆ ಮೂಲಕ ಸಂಗ್ರಹವಾದ ಹಣ ಎಂದರು.

ಮೋದಿ ಅವರು ನೋಟ್‌ ಬ್ಯಾನ್‌ ಮಾಡಿ ಇನ್ನುಮುಂದೆ ದೇಶದಲ್ಲಿ ಕಪ್ಪು ಹಣ ಇರಲ್ಲ, ಭ್ರಷ್ಟಾಚಾರ ಇರಲ್ಲ, ಭಯೋತ್ಪಾದನೆ ಇರಲ್ಲ ಎಂದು ಮಧ್ಯರಾತ್ರಿ ಭಾಷಣ ಮಾಡಿದ್ದೇ ಮಾಡಿದ್ದು. ಈಗ ಕಪ್ಪು ಹಣ, ಭ್ರಷ್ಟಾಚಾರ ಇಲ್ಲವೇ? ಭಯೋತ್ಪಾದನೆ ನಿಂತಿದೆಯೇ? ಇದರ ಬಗ್ಗೆ ಮೋದಿ ಅವರು ಮಾತೇ ಆಡಲ್ಲ. ಈಗ ಕಪ್ಪು ಹಣ ಎಷ್ಟಿದೆ ಎಂದು ಅವರೇ ಹೇಳಬೇಕು ಕುಟುಕಿದರು.

ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದಿದ್ದರು. ನೋಟು ರದ್ದತಿ, ಜಿಎಸ್‌ಟಿ ಜಾರಿ, ಕೊರೊನಾ ಬರುವ ಪೂರ್ವದಲ್ಲಿ ದೇಶದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಲ್ಲಿ ಸುಮಾರು 10 ಕೋಟಿ ಉದ್ಯೋಗಗಳು ಇದ್ದವು. ಈಗ ಅವುಗಳಲ್ಲಿ 2.5 ಕೋಟಿ ಉದ್ಯೋಗ ಉಳಿದಿವೆ. ವಿದ್ಯಾವಂತ ಯುವಜನತೆ ಕೆಲಸ ಕೇಳಿದರೆ ಪಕೋಡ ಮಾರಿ ಎಂದರು, ವಿದ್ಯಾವಂತರು ಪಕೋಡ ಮಾರೋಕೆ ಹೋದರೆ ಮೊದಲು ಪಕೋಡ ಮಾರುತ್ತಿದ್ದವರು ಎಲ್ಲಿ ಹೋಗಬೇಕು? ಇಂದು ದೇಶದ ನಿರುದ್ಯೋಗ ಮಿತಿಮೀರಿದೆ. ಸರ್ಕಾರದ ಉದ್ಯೋಗಗಳನ್ನು ಭರ್ತಿ ಮಾಡುತ್ತಿಲ್ಲ ಎಂದರು.

ಸರ್ಕಾರಿ ಸ್ವಾಮ್ಯದ ಕಂಪೆನಿಗಳು, ವಿಮಾನ ನಿಲ್ದಾಣಗಳು, ಬಂದರುಗಳು, ರಸ್ತೆಗಳನ್ನು ಖಾಸಗೀಕರಣ‌ ಮಾಡಲಾಗುತ್ತಿದೆ ಅಥವಾ ಲೀಜ್ ಮೇಲೆ ಕೊಡಲು ಆರಂಭ ಮಾಡಿದ್ದಾರೆ. ಈ ಖಾಸಗೀಕರಣದಿಂದ ಸರ್ಕಾರಿ ಉದ್ಯೋಗದಲ್ಲಿ ದೊರೆಯುತ್ತಿದ್ದ ಮೀಸಲಾತಿಯೂ ಇಲ್ಲವಾಗಿದೆ. ಒಂದು ಕಡೆ ನಿರುದ್ಯೋಗ ಸೃಷ್ಟಿ ಮತ್ತು ಇನ್ನೊಂದು ಕಡೆ ಮೀಸಲಾತಿ ಸಿಗದಂತೆ ಮಾಡಿ ಶೋಷಿತರಿಗೆ, ಕೆಳ ವರ್ಗದ ಜನರಿಗೆ, ದಲಿತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕೇಂದ್ರ ಸರ್ಕಾರ ಕಾರ್ಪೋರೇಟ್‌ ಸಂಸ್ಥೆಗಳ ಪರವಾಗಿ ಕೆಲಸ ಮಾಡುತ್ತಿದೆ. ಕೊರೊನಾ ಪೂರ್ವದಲ್ಲಿ ದೇಶದ ಸುಮಾರು 150 ಕಾರ್ಪೋರೇಟ್‌ ಬಾಡಿಗಳ ಆದಾಯ 23 ಲಕ್ಷ ಕೋಟಿ ರೂಪಾಯಿ ಇತ್ತು, ಕೊರೊನಾ ಬಂದ ನಂತರದ ಎರಡು ವರ್ಷಗಳಲ್ಲಿ ಇದು 53 ಲಕ್ಷ ಕೋಟಿ ಆಗಿದೆ. ಇದಕ್ಕೆ ಕಾರಣ ಕೇಂದ್ರ ಸರ್ಕಾರದ ಕೆಟ್ಟ ಆರ್ಥಿಕ ನೀತಿ ಮತ್ತು ಕಾರ್ಪೋರೇಟ್ ತೆರಿಗೆ ಪದ್ಧತಿ. ಕಾರ್ಪೋರೇಟ್‌ ಬಾಡಿಗಳ ಮೇಲಿನ ತೆರಿಗೆ 30% ಇಂದ 22% ಗೆ ಇಳಿಸಿದ್ದಾರೆ. ಜನ ಸಾಮಾನ್ಯರ ಮೇಲಿನ ಪರೋಕ್ಷ ತೆರಿಗೆ ಅಧಿಕವಾಗಿದೆ.


ಮೋದಿ ಸರ್ಕಾರದ 8 ವರ್ಷಗಳ 8 ಅನಾಹುತಗಳು:

  1. ದೇಶ ಹಿಂದೆಂದೂ ಇಲ್ಲದಷ್ಟು ಸಾಲದ ಸುಳಿಗೆ ಸಿಲುಕಿದೆ. ರೂಪಾಯಿ ಬೆಲೆ ಪಾತಾಳಕ್ಕೆ ಕುಸಿಯುತ್ತಿದೆ.
  2. ಬೆಲೆಯೇರಿಕೆ ಹಿಂದೆಂದು ಇಲ್ಲದ ಮಟ್ಟಕ್ಕೆ ಮುಟ್ಟಿದೆ. ಹಣದುಬ್ಬರ ಕಳೆದ 17 ವರ್ಷಗಳಲ್ಲಿ ತೀವ್ರ ಗತಿಗೆ ಮುಟ್ಟಿದೆ.
  3. ನಿರುದ್ಯೋಗ ತಾರಕಕ್ಕೇರಿದೆ.
  4. ರಾಜ್ಯಗಳ ಆರ್ಥಿಕತೆ ಕುಸಿದುಹೋಗುತ್ತಿದೆ.
  5. ಒಕ್ಕೂಟ ವ್ಯವಸ್ಥೆ ಶಿಥಿಲವಾಗುತ್ತಿದೆ ಇದರ ಜೊತೆಯಲ್ಲಿ ದೇಶದ ಪ್ರಜಾಪ್ರಭುತ್ವ ಭಯಬೀತವಾಗಿದೆ.
  6. ಜಿಎಸ್‌ಟಿ, ನೋಟು ಅಮಾನ್ಯೀಕರಣ, ಕೊರೊನಾ ನಿರ್ವಹಣೆಯ ಎಡಬಿಡಂಗಿ ನಿಲುವುಗಳು ದೇಶದ ಬೆನ್ನುಮೂಳೆಯನ್ನು ಟೊಳ್ಳು ಮಾಡಿದೆ.
  7. ದೇಶದ ಜನರು ಕಷ್ಟಪಟ್ಟು ಕಟ್ಟಿದ್ದ ಲಾಭದಾಯಕ ಸಂಸ್ಥೆ, ಕಾರ್ಖಾನೆಗಳನ್ನು ಬಿಡಿಗಾಸಿಗೆ ಖಾಸಗಿಯವರಿಗೆ ಮಾರಾಟ ಮಾಡಲಾಗುತ್ತಿದೆ.
  8. ರೈತರು, ಕಾರ್ಮಿಕ, ಮಹಿಳೆ, ಯುವ ಜನರ ವಿರೋಧಿ ಕಾನೂನುಗಳನ್ನು ಜಾರಿಗೆ ತಂದು ಅದರ ಮೂಲಕ ಜನರನ್ನು ಶತ್ರುಗಳಂತೆ ಭಾವಿಸಿ, ಧಮನಿಸಲಾಗುತ್ತಿದೆ. ಜನರನ್ನು ಬಡತನಕ್ಕೆ ತಳ್ಳಲಾಗುತ್ತಿದೆ, ಅಂಬಾನಿ, ಅದಾನಿಗಳಂತಹಾ ಕಾರ್ಪೋರೇಟ್‌ ಬಂಡವಾಳಿಗರನ್ನು ಕೊಬ್ಬಿಸಿ ಮೆರೆಸಲಾಗುತ್ತಿದೆ ಎಂದು ತಿಳಿಸಿದರು.


Join Whatsapp