ನ್ಯಾಯಾಂಗ ಉತ್ತರಿಸಬೇಕಾದ್ದು ಸಂವಿಧಾನಕ್ಕೆ ಮಾತ್ರ: ಸಿಜೆಐ ಎನ್. ವಿ. ರಮಣ

Prasthutha|

ವಾಷಿಂಗ್ಟನ್: ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಸಮಾವೇಶವೊಂದರಲ್ಲಿ ಮಾತನಾಡಿದ ಭಾರತದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್. ವಿ. ರಮಣ, ಒಳಗೊಳ್ಳುವಿಕೆಯನ್ನು ಗೌರವಿಸಬೇಕು ಎಂದು ಒತ್ತಿ ಹೇಳಿದರು. 

- Advertisement -

 “ನಾವು 75ನೇ ಸ್ವಾತಂತ್ರ್ಯ ದಿನ ಆಚರಿಸುತ್ತಿದ್ದೇವೆ, ನಮ್ಮ ಪ್ರಜಾಪ್ರಭುತ್ವಕ್ಕೆ 72 ವರುಷ. ಆದರೆ ಸಂವಿಧಾನವು ನಮಗೆಲ್ಲ ನೀಡಿರುವ ಜವಾಬ್ದಾರಿಯನ್ನು ಅರ್ಥ ಮಾಡಿಕೊಳ್ಳದಿರುವುದು ವಿಷಾದನೀಯ” ಎಂದು ಹೇಳಿದರು. ಈ ಎಲ್ಲ ಗೊಂದಲದಿಂದಾಗಿ ಜನಸಾಮಾನ್ಯರು ಸಂವಿಧಾನವನ್ನು ಅರಿತುಕೊಳ್ಳಲು ಅವಕಾಶವಾಗಿಲ್ಲ ಎಂದವರು ಹೇಳಿದರು.

ಜನಸಾಮಾನ್ಯರಿಗೆ ನ್ಯಾಯ ಸಿಗದ ಹಾಗೆ ಕೆಲವೆಡೆ ವ್ಯವಸ್ಥೆ ಇರುವುದು ಸಂವಿಧಾನದ ಬಗ್ಗೆ ಅವಜ್ಞೆ ಮೂಡಲು ಕಾರಣವಾಗಿದೆ. ಆದ್ದರಿಂದ ದೇಶದಲ್ಲಿ ಸಂವಿಧಾನದ ಸಂಸ್ಕೃತಿ ಬೆಳೆಸಬೇಕಾಗಿದೆ. ವ್ಯಕ್ತಿಗತ ಮತ್ತು ಸಾಂಸ್ಥಿಕ ಜವಾಬ್ದಾರಿಗಳು ಪಾಲ್ಗೊಳ್ಳುವುದೇ ಪ್ರಜಾಪ್ರಭುತ್ವ ಎಂದವರು ಹೇಳಿದರು.

- Advertisement -

ಸ್ಯಾನ್ ಫ್ರಾನ್ಸಿಸ್ಕೋದ ಭಾರತೀಯ ಅಮೆರಿಕನ್ನರು ಏರ್ಪಡಿಸಿದ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದರು.

“ಅಮೆರಿಕದಲ್ಲಿ ಎಲ್ಲರನ್ನು ಒಳಗೊಳ್ಳುವಿಕೆ ಹೇಗಿದೆಯೋ, ಅದೇ ಭಾರತಕ್ಕೂ ಮಾದರಿಯಾಗಬೇಕು. ಅಮೆರಿಕ ಸಂಯುಕ್ತ ಸಂಸ್ಥಾನವು ಈ ಒಳಗೊಳ್ಳುವಿಕೆಯಿಂದಾಗಿ ಜಗತ್ತಿನ ಎಲ್ಲ ಕಡೆಯ ಸಾಮರ್ಥ್ಯಶಾಲಿಗಳನ್ನು ಆಕರ್ಷಿಸುತ್ತಿದೆ. ಸಾಮರ್ಥ್ಯಕ್ಕೆ ಮನ್ನಣೆ ದೊರೆತಾಗ ಅದು ಉತ್ತಮ ಫಲ ನೀಡುತ್ತದೆ” ಎಂದು ಅವರು ತಿಳಿಸಿದರು.

“ಒಳಗೊಳ್ಳುವಿಕೆ ಎನ್ನುವುದು ವಿಶ್ವ ನೀತಿ, ತತ್ವ. ಅದು ಸಮಾಜವನ್ನು ಬಲಪಡಿಸಿ ಶಾಂತಿ ಮತ್ತು ಅಭಿವೃದ್ಧಿ ನೀಡುತ್ತದೆ. ಆದ್ದರಿಂದ ನಾವು ಒಗ್ಗಟ್ಟಾಗುವುದನ್ನು ನೋಡಬೇಕೇ ಹೊರತು, ವಿಭಜನೆಯಾಗುವುದನ್ನಲ್ಲ. 21ನೇ ಶತಮಾನದಲ್ಲಿ ಸಾಮಾಜಿಕ ಸಂಬಂಧ ಕೈಯೊಳಗಿರುವಾಗ ಮಾನವಾಭಿವೃದ್ಧಿ ಮಾತ್ರ ನಮ್ಮ ಗುರಿಯಾಗಿರಬೇಕು ಎಂದು ಅವರು ಹೇಳಿದರು.

“ಯುಎಸ್ಎ ಮತ್ತು ಭಾರತ  ತಮ್ಮ ವೈವಿಧ್ಯತೆಗೆ ಹೆಸರಾಗಿವೆ. ಈ ವೈವಿಧ್ಯತೆಯನ್ನು ಗೌರವಿಸಬೇಕು; ಪೋಷಿಸಬೇಕು. ಅಮೆರಿಕಕ್ಕೆ ಅತ್ಯದ್ಭುತ ಕೌಶಲದವರು ಬರುವುದು ಅದಕ್ಕೆ. ತೆರೆದ ತೋಳಿನಿಂದ ಸ್ವಾಗತಿಸುವ ದೇಶಕ್ಕೆ ಭಾಷೆ ತಡೆಯಲ್ಲ; ಅದು ಶಾಂತಿಯುತ ಸಂವಹನಕ್ಕೆ ಮಾರ್ಗ” ಎಂದು ಎನ್. ವಿ. ರಮಣ ಹೇಳಿದರು.

“ಎರಡು ದಶಕಗಳ ಹಿಂದೆಯೇ ಭಾರತವನ್ನು ಕೇಂದ್ರವಾಗಿಸಿ ಇಲ್ಲಿನ ನಾಯಕರು ಕೆಲಸ ಮಾಡಿದ್ದರಿಂದ ಒಂದು ಮಟ್ಟಿಗಿನ ಒಳಗೊಳ್ಳುವಿಕೆ ಭಾರತದಲ್ಲಿ ಅರಳಿದೆ. ಆದರೆ ಇತ್ತೀಚಿನ ರಾಷ್ಟ್ರೀಯತೆ ಮೋಹವು ದೇಶದೊಳಗಿನ ಬೆಳವಣಿಗೆಗೆ ಅಡ್ಡಿಯಾಗಿದೆ” ಸಿಜೆಐ ಅವರು ಹೇಳಿದರು.

ಭಾರತದ ಭೌಗೋಳಿಕ ವೈವಿಧ್ಯತೆಯನ್ನು ಅರ್ಥ ಮಾಡಿಕೊಂಡು ಹೆಜ್ಜೆ ಇಡುವುದು ಜಾಣತನ ಎಂದೂ ಅವರು ಹೇಳಿದರು.

Join Whatsapp