ಜನ ಸಾಮಾನ್ಯರ ಮೇಲೆ ಪೊಲೀಸರು ನಿರ್ದಯಿಯಾಗಿ ಲಾಠಿ ಬೀಸುವುದನ್ನು ಬಿಡಬೇಕು: ನಾರಾಯಣಗೌಡ

Prasthutha|

ಬೆಂಗಳೂರು : ಲಾಕ್‌ಡೌನ್ ನಿಯಮ ಉಲ್ಲಂಘಿಸಿದರೆಂಬ ಕಾರಣಕ್ಕೆ ಜನಸಾಮಾನ್ಯರ ಮೇಲೆ ನಿರ್ದಯವಾಗಿ ಲಾಠಿ ಬೀಸುವುದನ್ನು ಪೊಲೀಸ್ ಇಲಾಖೆ ಕೂಡಲೇ ಕೈಬಿಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಒತ್ತಾಯಿಸಿದೆ.

- Advertisement -

ಹೀಗೆ ಜನರನ್ನು ಥಳಿಸುವ ಯಾವ ಅಧಿಕಾರವೂ ಪೊಲೀಸರಿಗಿಲ್ಲ. ಸರ್ಕಾರ ಕೂಡಲೇ ಇದಕ್ಕೆ ಕಡಿವಾಣ ಹಾಕಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿಎ ನಾರಾಯಣಗೌಡ ಹೇಳಿದ್ದಾರೆ.

ಜನರು ಈಗಾಗಲೇ ಕೋವಿಡ್ ಸಂಕಷ್ಟಗಳಿಂದ ನರಳುತ್ತಿದ್ದಾರೆ. ಗಾಯದ ಮೇಲೆ ಬರೆ ಎಳೆದಂತೆ ಲಾಕ್‌ಡೌನ್ ಕೂಡ ಬಂದಿದೆ. ಇದರ ಪರಿಣಾಮ ಬಡ, ಮಧ್ಯಮ ವರ್ಗದ ಜನರ ಮೇಲಾಗುತ್ತಿದೆ. ಈ ಜನರೇ ಇಂದು ಬೀದಿಯಲ್ಲಿ ಪೊಲೀಸರ ದೌರ್ಜನ್ಯಗಳಿಗೆ ಗುರಿಯಾಗುತ್ತಿದ್ದಾರೆ.

- Advertisement -

ದಕ್ಷಿಣದ ಇತರ ರಾಜ್ಯಗಳು ಲಾಕ್‌ಡೌನ್ ಜತೆಗೇ ಆರ್ಥಿಕವಾಗಿ ದುರ್ಬಲವಾಗಿರುವ ಜನರಿಗಾಗಿ ಹಲವು ಯೋಜನೆ ಜಾರಿಗೆ ತಂದಿವೆ. ಆದರೆ ಕರ್ನಾಟಕ ಸರ್ಕಾರ ಇಂಥ ಯಾವುದೇ ಕ್ರಮ ಕೈಗೊಂಡಿಲ್ಲ. ಬಡವರ ಪಾಲಿಗೆ ಕೆಲಸವೂ ಇಲ್ಲ, ಆರೋಗ್ಯವೂ ಇಲ್ಲ, ಆಹಾರವೂ ಇಲ್ಲ ಎಂಬಂಥ ಸ್ಥಿತಿ ನಿರ್ಮಾಣವಾಗಿದೆ.

ಕೋವಿಡ್ ಎರಡನೇ ಅಲೆ ನಿರೀಕ್ಷಿತವಾಗಿದ್ದರೂ ಸರ್ಕಾರ ಯಾವುದೇ ಮುಂಜಾಗ್ರತೆ ವಹಿಸದೆ ಇಷ್ಟು ದೊಡ್ಡ ಅನಾಹುತಗಳಿಗೆ ಕಾರಣವಾಗಿದೆ. ತನ್ನ ಹೊಣೆಯನ್ನು ಹೊರಲಾಗದೆ, ಎಲ್ಲ ಭಾರವನ್ನು ಜನರ ಮೇಲೇ ಹೊರೆಸುವುದು ಎಷ್ಟು ಸರಿ? ಇನ್ನಾದರೂ ಸರ್ಕಾರ ತನ್ನ ಜವಾಬ್ದಾರಿ ಅರಿತು ಕ್ರಿಯಾಶೀಲವಾಗಬೇಕು.

ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ಆಸ್ಪತ್ರೆ ಹಾಸಿಗೆ ಇಲ್ಲದೆ, ಆಮ್ಲಜನಕ ಇಲ್ಲದೆ, ಚಿಕಿತ್ಸೆ ಇಲ್ಲದೆ ಅಸುನೀಗುತ್ತಿರುವ ಜನರ ರಕ್ಷಣೆಗೆ ನಿಲ್ಲಬೇಕು. ಇದಕ್ಕಾಗಿ ಎಲ್ಲ ರೀತಿಯ ಕ್ರಮ ಕೈಗೊಳ್ಳಬೇಕು. ಎಲ್ಲ ಜನರಿಗೂ ತ್ವರಿತವಾಗಿ ಮೂರು ತಿಂಗಳೊಳಗೆ ಉಚಿತ ವ್ಯಾಕ್ಸಿನ್ ನೀಡಬೇಕು. ಜನರ ಜೀವ ರಕ್ಷಣೆಯೇ ಈಗ ಸರ್ಕಾರದ ಆದ್ಯ ಕರ್ತವ್ಯವಾಗಬೇಕು ಎಂದು ಹೇಳಿದ್ದಾರೆ.



Join Whatsapp