ಮಡಿಕೇರಿ: ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ ಅವರಿಗೆ ಅನಾಮಧೇಯ ಪತ್ರದ ಮೂಲಕ ಕೊಲೆ ಬೆದರಿಕೆ ಹಾಕಿರುವ ಆರೋಪಿಯನ್ನು ತಕ್ಷಣ ಬಂಧಿಸಬೇಕು ಎಂದು ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಕಿಸಾನ್ ಘಟಕದ ಪ್ರಧಾನ ಕಾರ್ಯದರ್ಶಿ ಬೊಳ್ಳದಂಡ ಈ. ನಾಚಪ್ಪ ನವೀನ್ ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಭ್ರಷ್ಟ ಅಧಿಕಾರಿಗಳ ವಿರುದ್ಧ ಹೋರಾಟ ನಡೆಸುತ್ತಾ ಸಾಮಾಜಿಕ ಕಳಕಳಿ ತೋರುತ್ತಿರುವ ಮೈನಾ ಅವರ ಕಾರ್ಯವೈಖರಿಯಿಂದ ಭಯ ಭೀತರಾದ ಕಿಡಿಗೇಡಿಗಳು ಬೆದರಿಕೆವೊಡ್ಡಿರುವ ಬಗ್ಗೆ ಸಂಶಯವಿದೆ ಎಂದು ತಿಳಿಸಿದ್ದಾರೆ. ಪೊಲೀಸರು ಶೀಘ್ರ ತನಿಖೆಯನ್ನು ಪೂರ್ಣಗೊಳಿಸಿ ತಪ್ಪಿತಸ್ಥರನ್ನು ಬಂಧಿಸಬೇಕೆoದು ಆಗ್ರಹಿಸಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ರಾಜಕಾರಿಣಿಗಳ ಪ್ರಭಾವದಿಂದಾಗಿ ಕೆಲವು ಅಧಿಕಾರಿಗಳು ನೇರವಾಗಿ ಕೋಟ್ಯಂತರ ರೂ.ಗಳ ಭ್ರಷ್ಟಾಚಾರ ನಡೆಸಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದ್ದು ಈ ಬಗ್ಗೆ ಅಧಿಕೃತ ಮಾಹಿತಿಯನ್ನು ಅವರು ಕಲೆ ಹಾಕಿದ್ದಾರೆ. ಲೋಕೋಪಯೋಗಿ ಇಲಾಖೆ , ಮಡಿಕೇರಿ ನಗರ ಸಭೆ, ಪಂಚಾಯತ್ ರಾಜ್ ಇಲಾಖೆಗಳಲ್ಲಿ ಅವ್ಯವಹಾರ ನಡೆದಿದ್ದು ಇವುಗಳ ಬಗ್ಗೆ ಸಮಗ್ರ ತನಿಖೆ ನಡೆಸಲು ತನಿಖಾ ಸಂಸ್ಥೆಗಳಿಗೆ ದೂರು ಸಲ್ಲಿಸಲು ಎಲ್ಲಾ ದಾಖಲೆಗಳು ಸಿದ್ಧವಾಗಿವೆ. ಇದರಿಂದ ವಿಚಲಿತರಾದ ಭ್ರಷ್ಟ ಅಧಿಕಾರಿಗಳು ಬೆದರಿಸುವ ಸಲುವಾಗಿ ಕೊಲೆ ಬೆದರಿಕೆ ಪತ್ರ ಕಳಿಸಿದ್ದಾರೆ.
ಈ ಭ್ರಷ್ಟರೊಂದಿಗೆ ಕೆಲವು ರಾಜಕಾರಿಣಿಗಳು ಮತ್ತು ಹೊರಜಿಲ್ಲೆಯ ಗುತ್ತಿಗೆದಾರರು ಶಾಮೀಲಾಗಿದ್ದಾರೆ ಹಾಗೂ ಈ ಅಧಿಕಾರಿಗಳಿಗೆ ಅಭದ್ರತೆ ಕಾಡುತ್ತಿರುವುದರಿಂದ ತಮ್ಮ ಅಸ್ತಿತ್ವದ ಉಳಿವಿಗೆ ಈ ರೀತಿ ಮಾಡುತ್ತಿದ್ದಾರೆ. ಅವರು ಪ್ರಾಮಾಣಿಕರಾಗಿದ್ದರೆ ಆರೋಪವನ್ನು ಅಲ್ಲಗಳೆಯ ಬೇಕಿತ್ತು. ಕಾನೂನು ಹೋರಾಟ ಮಾಡಬೇಕಿತ್ತು. ಅದು ಸಾಧ್ಯವಿಲ್ಲ . ಅವರು ಅವ್ಯವಹಾರ ನಡೆಸಿರುವುದು ಇದರಿಂದ ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ನಾಚಪ್ಪ ಆರೋಪಿಸಿದ್ದಾರೆ.