ಬೆಂಗಳೂರು, ಆ.3: ಭಯೋತ್ಪಾದಕರ ವಿರುದ್ಧ ಸಂಸತ್ತಿನಲ್ಲಿ ಮಸೂದೆಯನ್ನು ತಂದಾಗ, ಕಾಂಗ್ರೆಸ್ ಪಕ್ಷದ ಸಂಸದರು ಸದನದಿಂದ ಹೊರನಡೆದಿರುವುದು ದೇಶದ ಸುರಕ್ಷತೆ ವಿಚಾರದಲ್ಲಿ ಆ ಪಕ್ಷಕ್ಕೆ ಇರುವ ನಿಷ್ಕಾಳಜಿಗೆ ಸಾಕ್ಷಿ. ಕಾಂಗ್ರೆಸ್ ಮುಖವಾಡ ಈ ಮೂಲಕ ಮತ್ತೊಮ್ಮೆ ಕಳಚಿ ಬಿದ್ದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್ ಕುಮಾರ್ ಕಟೀಲ್ ಟೀಕಿಸಿದ್ದಾರೆ. ಕಾಂಗ್ರೆಸ್ ಪಕ್ಷವು ಕೇಂದ್ರದಲ್ಲಿ ಆಡಳಿತದಲ್ಲಿದ್ದಾಗ ಹಿಂದೂಗಳ ವಿರುದ್ಧ ಮಸೂದೆಯನ್ನು ತರುತ್ತಿತ್ತು. ಆದರೆ, ಈಗ ದೇಶವಿರೋಧಿಗಳನ್ನು ಪತ್ತೆ ಹಚ್ಚಲು ಪೂರಕ ಮಸೂದೆ ತಂದಾಗ ಅದನ್ನು ಬೆಂಬಲಿಸದೆ ಸದನದ ಕಲಾಪ ಬಹಿಷ್ಕರಿಸಿರುವುದು ಕಾಂಗ್ರೆಸ್ ಪಕ್ಷದ ಭಯೋತ್ಪಾದಕರ ಪರ ನೀತಿಯನ್ನು ತೋರಿಸುವಂತಿದೆ ಎಂದು ಅವರು ತಿಳಿಸಿದ್ದಾರೆ.
ಮತದಾನದ ಸಮಯ ಬಂದಾಗ, ಕಾಂಗ್ರೆಸ್ ನ ಸೋನಿಯಾ ಗಾಂಧಿ ಸೇರಿದಂತೆ ಕಾಂಗ್ರೆಸ್ ನ ಎಲ್ಲ ಸಂಸದರು ಮಸೂದೆ ಸರಿಯಿಲ್ಲ ಎಂದು ಹೇಳಿ ಸದನವನ್ನು ಬಹಿಷ್ಕರಿಸಿದರು. ಭಯೋತ್ಪಾದಕರಿಗೆ ಆರ್ಥಿಕವಾಗಿ ಸಹಾಯ ಮಾಡಿದ ಮತ್ತು ಜಿಹಾದಿ ಸಾಹಿತ್ಯದಿಂದ ಅವರನ್ನು ಭಯೋತ್ಪಾದಕರನ್ನಾಗಿ ಮಾಡಿದ ಜನರ ಬಗ್ಗೆ ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್ ಗೆ ಸಹಾನುಭೂತಿ ಯಾಕೆ ಎಂದು ಅರ್ಥವಾಗುತ್ತಿಲ್ಲ ಎಂದೂ ಅವರು ಪ್ರಶ್ನಿಸಿದ್ದಾರೆ.
ಭಯೋತ್ಪಾದಕರಿಗೆ ಹಣ ನೀಡುವವರನ್ನು ಮತ್ತು ಜಿಹಾದಿ ಸಾಹಿತ್ಯವನ್ನು ಒದಗಿಸಿ ಕೊಡುವವರನ್ನು ಭಯೋತ್ಪಾದಕರೆಂದು ಪರಿಗಣಿಸುವ ಮಸೂದೆಯನ್ನು ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಅಂಗೀಕರಿಸಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಧನ್ಯವಾದ ಸಮರ್ಪಿಸುವುದಾಗಿ ನಳಿನ್ ಕುಮಾರ್ ಕಟೀಲ್ ಅವರು ತಿಳಿಸಿದ್ದಾರೆ.
ಭಯೋತ್ಪಾದಕರ ದುಷ್ಕೃತ್ಯವನ್ನು ಗುರುತಿಸಿ, ಶಿಕ್ಷಿಸಿ ಭಯೋತ್ಪಾದನೆಯನ್ನು ಬೇರು ಸಹಿತ ಕಿತ್ತೊಗೆಯಲು ಕಠಿಣ ಕಾನೂನುಗಳನ್ನು ತಂದಿರುವ ಬಿಜೆಪಿ ಸರಕಾರ ಮತ್ತು ಕೇಂದ್ರದ ನಾಯಕರ ಕ್ರಮಕ್ಕೆ ರಾಜ್ಯದ ಜನರ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ಅವರು ತಿಳಿಸಿದ್ದಾರೆ.