ತಲಪಾಡಿ ಗಡಿಯಲ್ಲಿ ನಿರ್ಬಂಧ: ಎಡಿಜಿಪಿ ಭೇಟಿ ವೇಳೆ ಕೇರಳಿಗರಿಂದ ಹೆದ್ದಾರಿ ತಡೆದು ಪ್ರತಿಭಟನೆ

Prasthutha|

ಮಂಗಳೂರು, ಆ.3 : ಕೇರಳದಲ್ಲಿ ಕೊರೊನಾ ಪ್ರಕರಣ ಹೆಚ್ಚಳ ಹಿನ್ನೆಲೆಯಲ್ಲಿ ಆರ್ ಟಿ ಪಿ ಸಿ ಆರ್ ನೆಗೆಟಿವ್ ವರದಿ ಇದ್ದವರಿಗೆ ಮಾತ್ರ ಕೇರಳದಿಂದ ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದ್ದು, ತಲಪಾಡಿ ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಗಡಿಯಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದ್ದು, ಎಡಿಜಿಪಿ ಪ್ರತಾಪ್ ರೆಡ್ಡಿ ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

- Advertisement -

ಎಡಿಜಿಪಿ ಭೇಟಿ ವೇಳೆ ಕೇರಳದ ಎಲ್ ಡಿ ಎಫ್ , ಯು ಡಿ ಎಫ್, ಎಸ್ ಡಿ ಪಿ ಐ ಕಾರ್ಯಕರ್ತರು ಹೆದ್ದಾರಿ ತಡೆದು ಸುಮಾರು ಅರ್ಧ ಗಂಟೆಗಳ ಕಾಲ ಪ್ರತಿಭಟನೆ ನಡೆಸಿದರು. ಕೇರಳ ರಾಜ್ಯದ ವ್ಯಾಪ್ತಿಯಲ್ಲಿ ಇರುವವರು ಕೋವಿಡ್ ಲಸಿಕೆ ಪಡೆದಿದ್ದರೂ, ಆರ್ ಟಿ ಪಿ ಸಿ ಆರ್ ರಿಪೋರ್ಟ್ ಇಲ್ಲದ ಕಾರಣ ನೀಡಿ ಗಡಿಪ್ರವೇಶಕ್ಕೆ ಅನುಮತಿ ಕೊಡದೆ ವಾಪಸ್ ಕಳುಹಿಸಲಾಗುತ್ತಿದೆ ಎಂದು ಆರೋಪಿಸಿದರು. ಶೀಘ್ರವಾಗಿ ಸಮಸ್ಯೆ ಬಗೆಹರಿಸದಿದ್ದರೆ ಕರ್ನಾಟಕದ ವಾಹನಗಳನ್ನು ಕೇರಳ ಪ್ರವೇಶಿಸಲು ಬಿಡುವುದಿಲ್ಲ ಎಂದು ಎಚ್ಚರಿಸಿದರು.

ಪ್ರತಿಭಟನಾ ಸ್ಥಳಕ್ಕೆ ತೆರಳಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿ ಕುಮಾರ್, ಕೇರಳ ಪೊಲೀಸ್ ಅಧಿಕಾರಿಗಳೊಂದಿದೆ ಚರ್ಚಿಸಿದರು. ಎಡಿಜಿಪಿ ಗಡಿ ಭೇಟಿ ವೇಳೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕೆ.ವಿ ರಾಜೇಂದ್ರ ಮತ್ತು ಪೊಲೀಸ್ ಆಯುಕ್ತ ಶಶಿಕುಮಾರ್ ಸಾಥ್ ನೀಡಿದರು.

- Advertisement -

ಗಡಿಯಲ್ಲಿ ಪರಿಶೀಲನೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಎಡಿಜಿಪಿ, ಕೇರಳದಲ್ಲಿ ಪಾಸಿಟಿವಿಟಿ ದರ ಕಡಿಮೆಯಾಗುವವರೆಗೆ ಈಗಿರುವ ನಿರ್ಬಂಧಗಳು ಜಾರಿಯಲ್ಲಿ ಇರುತ್ತದೆ. ಪಾಸಿಟಿವಿಟಿ ದರ ಕಡಿಮೆಯಾದ ತಕ್ಷಣ ಮತ್ತೆ ಸಹಜಸ್ಥಿತಿಗೆ ಮರಳಲಿದೆ. ರೈಲಿನಲ್ಲಿ ಬರುವ ಪ್ರಯಾಣಿಕರನ್ನೂ ಆರ್ ಟಿ ಪಿ ಸಿ ಆರ್ ತಪಾಸಣೆ ನಡೆಸಿ, ಟೌನ್ ಹಾಲ್ ನಲ್ಲಿ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿದೆ. ಮೆಡಿಕಲ್ ಎಮರ್ಜೆನ್ಸಿ ಮತ್ತು ಪರೀಕ್ಷೆಗೆ ತೆರಳುವ ವಿದ್ಯಾರ್ಥಿಗಳಿಗೆ ಮಾತ್ರ ಕರ್ನಾಟಕ ಗಡಿ ಪ್ರವೇಶಕ್ಕೆ ಅನುಮತಿ ನೀಡಲಾಗುವುದು ಎಂದು ಹೇಳಿದರು.

Join Whatsapp