ನಾಗವಾರ-ಗೊಟ್ಟಿಗೆರೆ ಮೆಟ್ರೊ ರೈಲು ಮಾರ್ಗ ನಿರ್ಮಾಣ: 577 ಮರ ಕತ್ತರಿಸಲು ಬಿಎಂಆರ್‌ಸಿಎಲ್‌ಗೆ ಅನುಮತಿಸಿದ ಹೈಕೋರ್ಟ್‌

Prasthutha|

ಬೆಂಗಳೂರು: ನಾಗವಾರ – ಗೊಟ್ಟಿಗೆರೆ ಮೆಟ್ರೊ ರೈಲು ಮಾರ್ಗ ನಿರ್ಮಾಣಕ್ಕಾಗಿ 577 ಮರಗಳನ್ನು ಕತ್ತರಿಸಲು ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತಕ್ಕೆ (ಬಿಎಂಆರ್ ಸಿಎಲ್) ಗುರುವಾರ ಕರ್ನಾಟಕ ಹೈಕೋರ್ಟ್‌ ಅನುಮತಿಸಿದೆ. ಕಾಮಗಾರಿ ವಿಳಂಬದಿಂದ ಪ್ರತಿದಿನ 2 ಕೋಟಿ ರೂಪಾಯಿ ನಷ್ಟ ಅನುಭವಿಸುತ್ತಿದ್ದ ನಿಗಮಕ್ಕೆ ನ್ಯಾಯಾಲಯದ ಆದೇಶದಿಂದ ಅನುಕೂಲವಾಗಲಿದೆ.

- Advertisement -

ಮರಗಳನ್ನು ಕಡಿಯುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಬೆಂಗಳೂರು ಪರಿಸರ ಟ್ರಸ್ಟ್ ಮತ್ತು ಪರಿಸರವಾದಿ ಟಿ ದತ್ತಾತ್ರೇಯ ದೇವರೆ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ನೇತೃತ್ವದ ವಿಭಾಗೀಯ ನಡೆಸಿತು.

ಸುದೀರ್ಘವಾಗಿ ವಾದ – ಪ್ರತಿವಾದ ಆಲಿಸಿದ ಪೀಠವು ‘‘ತಜ್ಞರ ಸಮಿತಿ ವರದಿಯಂತೆ ಬಿಎಂಆರ್‌ಸಿಎಲ್ ನವೆಂಬರ್‌ 26ರಂದು ಸಲ್ಲಿಸಿರುವ ಜ್ಞಾಪನಾ ಪತ್ರದಂತೆ 577 ಮರಗಳನ್ನು ಕತ್ತರಿಸಬಹುದಾಗಿದೆ. ಜೊತೆಗೆ 18 ಮರಗಳನ್ನು ಸ್ಥಳಾಂತರ ಮಾಡಬೇಕು ಮತ್ತು ಕತ್ತರಿಸುವ ಮರಗಳಿಗೆ ಪರ್ಯಾಯವಾಗಿ ತಜ್ಞರ ಸಮಿತಿ ಸೂಚನೆಯಂತೆ ಗಿಡ ನೆಡಬೇಕು. ನಿಗಮವು ಕಾಲಮಿತಿಯಲ್ಲಿ ಯೋಜನೆ ಪೂರ್ಣಗೊಳಿಸಬೇಕು ಮತ್ತು ಆ ಬಗ್ಗೆ ಸಮಗ್ರ ವರದಿಯನ್ನು ಸಲ್ಲಿಸಬೇಕು ’’ ಎಂದು ಆದೇಶಿಸಿದೆ.

- Advertisement -

“ಮರಗಳನ್ನು ಕತ್ತರಿಸುವ ಬಗ್ಗೆ ಪರಿಶೀಲನೆ ನಡೆಸಲು ನ್ಯಾಯಾಲಯ ನೇಮಿಸಿದ್ದ ತಾಂತ್ರಿಕ ತಜ್ಞರ ಸಮಿತಿಯ (ಟಿಇಸಿ) ವರದಿಯನ್ನು ಪೀಠವು ಒಪ್ಪಲಿದೆ. ವಿಸ್ತೃತ ಯೋಜನಾ ವರದಿ (ಡಿಪಿಆರ್) ಮತ್ತು ಮರ ತಜ್ಞರ ಸಮಿತಿ (ಟಿಇಸಿ) ನೀಡುವ ಅಂಕಿ ಸಂಖ್ಯೆಗೆ ಸ್ವಲ್ಪ ವ್ಯತ್ಯಾಸವಿದೆ ಎಂಬ ಕಾರಣಕ್ಕೆ, ಟಿಇಸಿ ಸರಿಯಾಗಿ ಮರಗಳನ್ನು ಪರಿಶೀಲಿಸಿಲ್ಲ ಎಂದು ಹೇಳಲಾಗದು. 2016ರಲ್ಲಿ ಸಿದ್ಧಪಡಿಸಲಾಗಿದ್ದ ಡಿಪಿಆರ್‌ಗೂ ಮತ್ತು 2019ರಲ್ಲಿ ಟಿಇಸಿ ಪರಿಶೀಲನೆ ನಡೆಸಿದಾಗ ಇದ್ದ ಮರಗಳ ಸಂಖ್ಯೆಗೂ ಹೆಚ್ಚು ಕಡಿಮೆ ಆಗಿರಬಹುದು. ಅದನ್ನೇ ದೊಡ್ಡ ವಿಚಾರ ಮಾಡುವ ಅಗತ್ಯವಿಲ್ಲ’’ಎಂದು ಪೀಠ ಅಭಿಪ್ರಾಯಪಟ್ಟಿತು.

ನಾಗವಾರ-ಗೊಟ್ಟಿಗೆರೆ ಮೆಟ್ರೊ ಮಾರ್ಗದಲ್ಲಿ ಮರಗಳನ್ನು ಕತ್ತರಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಅರ್ಜಿದಾರರು ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ಕರ್ನಾಟಕ ಮರ ಸಂರಕ್ಷಣಾ ಕಾಯಿದೆ 1976 ಮತ್ತು ಕರ್ನಾಟಕ ಮರ ಸಂರಕ್ಷಣಾ ನಿಯಮ 1977ಗೆ ವಿರುದ್ಧವಾಗಿ ಮರಗಳನ್ನು ಕತ್ತರಿಸಲಾಗುತ್ತಿದೆ. ಇದು ಕಾನೂನುಬಾಹಿರ ಎಂದು ಅರ್ಜಿದಾರರು ಆಕ್ಷೇಪಿಸಿದ್ದರು.

ರಸ್ತೆ ಅಗಲೀಕರಣಕ್ಕೆ ಅಸ್ತು

ನೆಲಮಂಗಲ ಹಾಗೂ ಆನೇಕಲ್‌ನಲ್ಲಿ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ದಿ ನಿಗಮವು (ಕೆಆರ್‌ಐಡಿಎಲ್) ಕೈಗೊಂಡಿರುವ ರಸ್ತೆ ಅಗಲೀಕರಣ ಯೋಜನೆಗೂ ಹೈಕೋರ್ಟ್ ಇದೇ ವೇಳೆ ಅನುಮತಿ ನೀಡಿದೆ.

ರಸ್ತೆ ಅಗಲೀಕರಣಕ್ಕೆ ಅಡ್ಡಲಾಗಿರುವ 27 ಮರಗಳ ಪೈಕಿ 9 ಮರಗಳನ್ನು ಸ್ಥಳಾಂತರಿಸಬೇಕು. ಉಳಿದ 18 ಮರಗಳನ್ನು ಕತ್ತರಿಸಬಹುದು. ಅದಕ್ಕೆ ಪರ್ಯಾಯವಾಗಿ ತಜ್ಞರ ಸಮಿತಿ ಸೂಚಿವಂತೆ ಅರಣ್ಯೀಕರಣ ಕ್ರಮ ಕೈಗೊಳ್ಳಬೇಕು. ಶೀಘ್ರ ಯೋಜನೆ ಪೂರ್ಣಗೊಳಿಸಿ ಅನುಪಾಲನಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಆದೇಶದಲ್ಲಿ ಹೈಕೋರ್ಟ್ ತಿಳಿಸಿದೆ. ಇದರೊಂದಿಗೆ 14 ತಿಂಗಳಿಂದ ನೆನೆಗುದಿಗೆ ಬಿದ್ದಿದ್ದ ಯೋಜನೆಗೆ ಮರುಚಾಲನೆ ಸಿಕ್ಕಂತಾಗಿದೆ.

( ಕೃಪೆ: ಬಾರ್ ಆ್ಯಂಡ್ ಬೆಂಚ್ )



Join Whatsapp