ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಪತ್ನಿ ವಿಜಯಾ ನಿಧನ

Prasthutha|

ಬೆಂಗಳೂರು: ಕೊಳ್ಳೇಗಾಲ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಎನ್.ಮಹೇಶ್ ಅವರ ಪತ್ನಿ ವಿಜಯಾ ಮಹೇಶ್​ ಅವರು ಅನಾರೋಗ್ಯದಿಂದ ಇಂದು ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ವಿಜಯಾ ಅವರಿಗೆ 64 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ದಿನಗಳಿಂದ ಜೆ.ಪಿ ನಗರದ ಆರ್.ವಿ ಆಸ್ಟರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರ ಆರೋಗ್ಯದಲ್ಲಿ ನಿನ್ನೆ ಮಧ್ಯರಾತ್ರಿ ಏರುಪೇರಾಗಿ ಕೊನೆ ಉಸಿರೆಳೆದಿದ್ದಾರೆ.


ಕಳೆದ ಒಂದೂವರೆ ತಿಂಗಳಿನಿಂದ ಅನಾರೋಗ್ಯದಿಂದ ಆರ್.ವಿ ಅಸ್ಟರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿಜಯ ಅವರ ಆರೋಗ್ಯದಲ್ಲಿ ಕಳೆದ ಮೂರು ದಿನಗಳ ಹಿಂದೆ ಚೇತರಿಕೆ ಕಂಡುಬಂದ ಹಿನ್ನೆಲೆಯಲ್ಲಿ ಐಸಿಯು ವಾರ್ಡ್​​ನಿಂದ ಜನರಲ್ ವಾರ್ಡ್​​ಗೆ ಶಿಫ್ಟ್ ಮಾಡಲಾಗಿತ್ತು. ಆದರೆ ರಾತ್ರಿ 12.30ರ ವೇಳೆಗೆ ಮತ್ತೆ ತೀವ್ರ ಏರುಪೇರಾಗಿ ಅವರು ಇಹಲೋಕ ತ್ಯಜಿಸಿದ್ದಾರೆ.

- Advertisement -


ವಿಜಯಾ ಮಹೇಶ್ ಅವರು ಅಪೆಕ್ಸ್ ಬ್ಯಾಂಕ್​ನ ಮ್ಯಾನೇಜರ್ ಸೇವೆ ಸಲ್ಲಿಸಿ ನಿವೃತ್ತರಾದ ಬಳಿಕ ಬಹುಜನ ಸಮಾಜ ಪಕ್ಷದ
ಚಳವಳಿಯಲ್ಲಿ ತೊಡಗಿಸಿಕೊಂಡಿದ್ದರು. ಸಾಹಿತ್ಯ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದ ಅವರು ಸಾಕಷ್ಟು ಪುಸ್ತಕ ಹಾಗೂ ಲೇಖನಗಳನ್ನು ಬರೆದಿದ್ದಾರೆ.ಮೃತರು ಪತಿ ಹಾಗೂ ಓರ್ವ ಪುತ್ರ ಸೇರಿದಂತೆ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.


ಶಾಸಕ ಎನ್.ಮಹೇಶ್ ಮತ್ತು ವಿಜಯಾ ಇಬ್ಬರದ್ದು ಲವ್ ಜೊತೆಗೆ ಅರೇಂಜ್ ಮ್ಯಾರೇಜ್. ಇವರಿಬ್ಬರು ಒಂದೇ ಕಡೆ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಪ್ರೀತಿ ಹುಟ್ಟಿ ದಾಂಪತ್ಯ ಜೀವನಕ್ಕೆ ಕಾಲಿಟ್ಟವರು. ಸುಮಾರು 37 ವರ್ಷಗಳ ಸುಖಕರ ದಾಂಪತ್ಯ ಜೀವನ ನಡೆಸಿದ್ದಾರೆ. ವಿಜಯ ಮೂಲತಃ ಕನಕಪುರದವರು. ಮೈಸೂರಿನ ಆಕ್ಸಿಸ್ ಬ್ಯಾಂಕ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದರು.ಇವರಿಗೆ ಕ್ಯಾನ್ಸರ್ ನಾಲ್ಕನೇ ಹಂತದಲ್ಲಿತ್ತು.


ಕನಕಪುರದಲ್ಲಿನ ಕಾನ್ಸಿ ಫೌಂಡೇಶನ್​​ನಲ್ಲಿ ಇಂದು ಮಧ್ಯಾಹ್ನ ವಿಜಯಾರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

- Advertisement -