ಮೈಸೂರು: ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಮಗೆ ಒಲಿದು ಬಂದ ಪ್ರಶಸ್ತಿಯನ್ನು ತಮ್ಮ ಸಹೋದ್ಯೋಗಿಗೆ ನೀಡಿ, ಪ್ರಶಸ್ತಿಯ ಮೌಲ್ಯ ಮತ್ತು ಮಹತ್ವವನ್ನು ಹೆಚ್ಚಿಸಿದ್ದಾರೆ. ಸಾರ್ವಜನಿಕ ವಲಯದಲ್ಲಿ ಅಧಿಕಾರಿಯ ನಡೆಗೆ ಪ್ರಶಂಸೆ ವ್ಯಕ್ತವಾಗಿದೆ.
ಮೈಸೂರಿನಲ್ಲಿ ಈ ಅಪರೂಪದ ಪ್ರಕರಣ ನಡೆದಿದೆ. ಮೈಸೂರು ಜಿಲ್ಲಾ ನಗರ ಕೇಂದ್ರ ಗ್ರಂಥಾಲಯದ ಉಪ ನಿರ್ದೇಶಕರಾದ ಬಿ ಮಂಜುನಾಥ್ ಅವರು ತಮಗೆ ಬಂದ ಪ್ರಶಸ್ತಿಯನ್ನು ಸಹೋದ್ಯೋಗಿಗೆ ನೀಡಿ, ಅವರ ಸೇವಾ ಕಾರ್ಯವನ್ನು ಗೌರವಿಸಿದ್ದಾರೆ.
ಲೈಬ್ರರಿ ಡೆಪ್ಯುಟಿ ಡೈರೆಕ್ಟರ್ ಬಿ ಮಂಜುನಾಥ್ ಅವರು 2023ನೇ ಸಾಲಿನ ಅತ್ಯುತ್ತಮ ಡಿಜಿಟಲ್ ಓದುಗರ ನೋಂದಣಿ ಪ್ರಶಸ್ತಿಗೆ ಭಾಜನರಾಗಿದ್ದರು. ಆದರೆ ಆ ಪ್ರಶಸ್ತಿಯನ್ನು ತಮ್ಮ ಸಹೋದ್ಯೋಗಿ ಪರಮೇಶ್ ಅವರಿಗೆ ನೀಡುವಂತೆ ಮಂಜುನಾಥ್ ಅವರು ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಪತ್ರ ಬರೆದು ಕೋರಿದರು. ಅಂದಹಾಗೆ ಪರಮೇಶ್ ಅವರು ಹೆಚ್ ಡಿ ಕೋಟೆ ಗ್ರಂಥಾಲಯ ಪ್ರಭಾರ ಅಧಿಕಾರಿಯಾಗಿದ್ದಾರೆ.
ಲೈಬ್ರರಿ ಪ್ರಶಸ್ತಿ ವರ್ಗಾಯಿಸಿಕೊಂಡ ಪರಮೇಶ್ ಅವರ ಸಾಧನೆ
ಪರಮೇಶ್ ಅವರ ಸಾಧನೆಯೇನೆಂದರೆ ಒಟ್ಟು 23 ಲಕ್ಷ ನೋಂದಣಿಯಲ್ಲಿ 12 ಲಕ್ಷ ನೋಂದಣಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪರಮೇಶ್ ಅವರಿಗೆ ಪ್ರಶಸ್ತಿಯನ್ನು ವರ್ಗಾಯಿಸಲು ಹಿರಿಯ ಅಧಿಕಾರಿ ಮಂಜುನಾಥ್ ಕೋರಿದ್ದರು. ಬಿ ಮಂಜುನಾಥ್ ಅವರು 2015ರಲ್ಲಿಯೂ ಇದೇ ಪ್ರಶಸ್ತಿಗೆ ಭಾಜನರಾಗಿದ್ದರು ಎಂಬುದು ಗಮನಾರ್ಹ. ಮಂಜುನಾಥ್ ಅವರ ನಿರ್ಧಾರಕ್ಕೆ ಈಗ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ.