ನಕಲಿ ಇನ್‌ಸ್ಟಾಗ್ರಾಂ ಖಾತೆ ಸೃಷ್ಟಿಸಿ ವಿದ್ಯಾರ್ಥಿನಿಯರಿಗೆ ಬೆದರಿಕೆ : ಇಬ್ಬರು ವಿದ್ಯಾರ್ಥಿಗಳ ಬಂಧನ

Prasthutha|

ಹುಬ್ಬಳ್ಳಿ: ಖಾಸಗಿ ಕಾಲೇಜುವೊಂದರ ವಿದ್ಯಾರ್ಥಿನಿಯ ಹೆಸರಲ್ಲಿ ನಕಲಿ ಇನ್‌ಸ್ಟಾಗ್ರಾಂ ಖಾತೆ ಸೃಷ್ಟಿಸಿ ವಿದ್ಯಾರ್ಥಿನಿಯರಿಗೆ ಹಾಗೂ ಪೊಲೀಸರಿಗೆ ಬೆದರಿಕೆ ಹಾಕಿದ ಪ್ರಕರಣ ತಿರುವು ಪಡೆದಿದ್ದು, ಮೂಲ ಆರೋಪಿಗಳಿಬ್ಬರನ್ನು ಸೈಬರ್ ಕ್ರೈಂ ಪೊಲೀಸರು ಏಳು ದಿನದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

- Advertisement -

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಶಂಕಿತ ಆರೋಪಿ ಹಾಗೂ ಖಾಸಗಿ ಕಾಲೇಜಿನ ಹಳೇ ವಿದ್ಯಾರ್ಥಿ ರಜನಿಕಾಂತ್ ತಳವಾರ ಎಂಬಾತನನ್ನು ಸಂಶಯದ ಮೇಲೆ ಬಂಧಿಸಿ ಏಳು ದಿನ ವಿಚಾರಣೆಗೆ ಒಳಪಡಿಸಿದ್ದರು. ಅಷ್ಟೇ ಅಲ್ಲದೆ ಈ ಪ್ರಕರಣದ ಹಿಂದೆ ಇನ್ನೂ ಕೆಲವರು ಇದ್ದಾರೆ ಎಂಬ ಸಂಶಯದ ಮೇರೆಗೆ ತನಿಖೆ ಮುಂದುವರಿಸಿದ್ದರು.

ಜಾಲತಾಣದ ಅಧಿಕೃತ ಮಾಹಿತಿಯ ಹಿಂದೆ ಬಿದ್ದಾಗ ರಜನಿಕಾಂತ್ ಆರೋಪಿ ಅಲ್ಲ ಎಂಬುದು ಪೊಲೀಸರಿಗೆ ಸ್ಪಷ್ಟವಾಗಿದೆ. ಶಂಕಿತ ಆರೋಪಿಯಾಗಿದ್ದ ರಜನಿಕಾಂತ್‌ನ ಇನ್‌ಸ್ಟಾಗ್ರಾಂ ಖಾತೆ, ಇ-ಮೇಲ್ ಐಡಿ ಹಾಗೂ ಸಾಮಾಜಿಕ ಜಾಲತಾಣದ ವಿವವರಗಳನ್ನು ಪೊಲೀಸರು ಸಂಗ್ರಹಿಸಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಆದರೆ ಈ ವರದಿ ಬರುವವರೆಗೂ ಉಳಿದ ಆರೋಪಿಗಳನ್ನು ಪತ್ತೆ ಮಾಡುವುದು ಪೊಲೀಸರಿಗೆ ಕಷ್ಟವಾಗಿತ್ತು. ಪ್ರಕರಣ ಗಂಭೀರವಾಗಿದ್ದರಿಂದ ಸೈಬರ್ ಠಾಣಾ ಪೊಲೀಸರು ಹ್ಯಾಕ್ ಮಾಡಲಾದ ವಿದ್ಯಾರ್ಥಿನಿಯರ ಇನ್‌ಸ್ಟಾಗ್ರಾಂ ಖಾತೆ ವಿವರ ಸಂಗ್ರಹಿಸಿ ಫೇಸ್‌ಬುಕ್ ಸಂಸ್ಥೆಗೆ ಮಾಹಿತಿ ನೀಡಲು ಪತ್ರ ಬರೆದಿದ್ದರು.

- Advertisement -

ಅಲ್ಲಿಂದ ದೊರೆತ ಅಧಿಕೃತ ಮಾಹಿತಿಯೇ ಆರೋಪಿಗಳ ಪತ್ತೆಗೆ ಸಹಕಾರಿಯಾಗಿದೆ. ಬಂಧನಕ್ಕೆ ಒಳಗಾದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಓದುತ್ತಿರುವ ಕಾಲೇಜಿನಲ್ಲಿಯೇ ಅಧ್ಯಯನ ಮಾಡುತ್ತಿದ್ದು, ಒಬ್ಬ ವಿದ್ಯಾರ್ಥಿನಿ ಇನ್ನೊಬ್ಬ ವಿದ್ಯಾರ್ಥಿಯ ಜೊತೆ ಸಲುಗೆಯಿಂದ ಇದ್ದಳು. ಅದನ್ನು ಸಹಿಸದ ಆರೋಪಿ ತಮ್ಮ ಊರಿನ ಮತ್ತೊಂದು ಕಾಲೇಜಿನಲ್ಲಿ ಓದುತ್ತಿದ್ದ ಸ್ನೇಹಿತನ ಸಹಾಯ ಪಡೆದು, ಆ ವಿದ್ಯಾರ್ಥಿನಿಯ ಇನ್‌ಸ್ಟಾಗ್ರಾಂ ಖಾತೆ ಹ್ಯಾಕ್ ಮಾಡಿಸಿದ್ದಾನೆ. ತನ್ನ ಹೆಸರು ಎಲ್ಲಿಯೂ ಬರಬಾರದು ಎಂದು ದಿಕ್ಕು ತಪ್ಪಿಸಲು ಪೊಲೀಸ್ ಬಗ್ಗೆ ಅವಹೇಳನ ಪದ ಬಳಸಿ ಪೋಸ್ಟ್ ಮಾಡಿದ್ದ. ಎಲ್ಲಾ ವಿಚಾರ ತಿಳಿದ ಬೆನ್ನಲ್ಲೇ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

Join Whatsapp