ಮೈಸೂರು ಅತ್ಯಾಚಾರ ಪ್ರಕರಣ: ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ

Prasthutha|

ಮೈಸೂರು: ವಿದ್ಯಾರ್ಥಿನಿಯೊಬ್ಬರ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಘಟನಾ ಸ್ಥಳಕ್ಕೆ ಬುಧವಾರ ವಿಧಾನಸಭಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭೇಟಿ ನೀಡಿ ಪರಿಶೀಲಿಸಿದರು.

- Advertisement -


ಇದೇ ವೇಳೆ ಸಿದ್ದರಾಮಯ್ಯ ಅವರು ಆಲನಹಳ್ಳಿ ಇನ್ ಸ್ಪೆಕ್ಟರ್ ರವಿಶಂಕರ್ ಅವರನ್ನು ತರಾಟೆಗೆ ತೆಗೆದುಕೊಂಡರು. ಕಾನೂನು ಸುವ್ಯವಸ್ಥೆಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ಖಡಕ್ ಸೂಚನೆ ನೀಡಿದರು.


ಈ ಜಾಗದಿಂದ ರಿಂಗ್ ರಸ್ತೆ ಎಷ್ಟು ದೂರವಾಗುತ್ತದೆ ಎಂದು ಕೇಳಿದ ಪ್ರಶ್ನೆಗೂ ರವಿಶಂಕರ್ ಸರಿಯಾಗಿ ಉತ್ತರಿಸಲಿಲ್ಲ. ಆಗ ಕೋಪಗೊಂಡ ಸಿದ್ದರಾಮಯ್ಯ ಒಂದು ವೇಳೆ ನ್ಯಾಯಾಲಯದಲ್ಲಿ ಕೇಳಿದರೆ ಏನು ಹೇಳುತ್ತೀರಿ ಎಂದು ತರಾಟೆಗೆ ತೆಗೆದುಕೊಂಡರು.
ಎಲ್ಲ ಮುಗಿದ ಮೇಲೆ ಗರುಡಾ ವಾಹನ ಓಡಾಡಿದರೆ ಏನು ಪ್ರಯೋಜನ. ಮೊದಲೇ ಈ ಕಾರ್ಯ ಮಾಡಬೇಕಿತ್ತಲ್ಲವೆ ? ಎಂದು ಪ್ರಶ್ನಿಸಿದರು.

- Advertisement -


ಪ್ರತಿ ಪ್ರಶ್ನೆಗೂ ರವಿಶಂಕರ್ ಅವರು ಡಿಸಿಪಿ ಪ್ರದೀಪ್ ಗುಂಟಿ ಅವರ ಮುಖ ನೋಡುತ್ತಿರುವುದು ಏಕೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.


ಸಾಮೂಹಿಕ ಅತ್ಯಾಚಾರ ಪ್ರಕರಣ ತಡೆಯುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ವಿಷಯ ಗೊತ್ತಾದರೂ ಪ್ರಕರಣ ದಾಖಲಿಸಲು ಪೊಲೀಸರು 15 ಗಂಟೆ ವಿಳಂಬ ಮಾಡಿದ್ದು ಏಕೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಸಂತ್ರಸ್ತೆಯ ಹೇಳಿಕೆ ಪಡೆಯದೇ ಇದ್ದದ್ದನ್ನು ನೋಡಿದರೆ ಹಲವು ಅನುಮಾನಗಳಿಗೆ ಎಡೆ ಮಾಡಿದೆ. ಸರ್ಕಾರ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದೆ ಎಂದು ಅವರು ಕಿಡಿಕಾರಿದರು.



Join Whatsapp