ವಾಷಿಂಗ್ಟನ್: ಮಯನ್ಮಾರ್ನಲ್ಲಿ ಮಿಲಿಟರಿ ಆಡಳಿತವು ಚುನಾಯಿತ ಸರಕಾರವನ್ನು ಉರುಳಿಸಿ ಇತ್ತೀಚಿಗೆ ಅಮಾಯಕ ನಾಗರಿಕರನ್ನು ಹತ್ಯೆಗೈದಿರುವ ಘಟನೆಯನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ತೀವ್ರವಾಗಿ ಖಂಡಿಸಿದ್ದಾರೆ.
ಮಯನ್ಮಾರ್ನಲ್ಲಿ ಮಿಲಿಟರಿ ಆಡಳಿತವನ್ನು ವಿರೋಧಿಸಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿರುವ ನಾಗರಿಕರ ಮೇಲೆ ಭದ್ರತಾ ಪಡೆಯು ಗುಂಡಿನ ದಾಳಿ ನಡೆಸಿದೆ. ಪರಿಣಾಮ ಶನಿವಾರ ಒಂದೇ ದಿನದಲ್ಲಿ 114 ಮಂದಿ ಹತ್ಯೆಗೀಡಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿತ್ತು. ಈ ಕುರಿತು ಪ್ರತಿಕ್ರಿಯಿಸಿದ ಬೈಡನ್, ‘ಇದು ಭಯಾನಕ. ನಿಜಕ್ಕೂ ಅತಿರೇಕದ ಘಟನೆ. ನನಗೆ ಲಭಿಸಿದ ವರದಿಗಳ ಪ್ರಕಾರ ಅನಗತ್ಯವಾಗಿ ನಾಗರಿಕರನ್ನು ಕೊಲೆ ಮಾಡಲಾಗಿದೆ’ ಎಂದಿದ್ದಾರೆ.
ಸೇನಾದಂಗೆಯ ಬಳಿಕ ಮ್ಯಾನ್ಮಾರಿನಲ್ಲಿ ಇದುವರೆಗೆ ನಡೆದ ಹಿಂಸಾಚಾರದಲ್ಲಿ 440ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.
ಯಾಂಗೂನ್ನಲ್ಲಿರುವ ಅಮೆರಿಕದ ಕೇಂದ್ರದ ಮೇಲೂ ಮಯನ್ಮಾರ್ ಭದ್ರತಾ ಪಡೆಗಳು ಗುಂಡಿನ ದಾಳಿ ನಡೆಸಿತ್ತು ಎಂಬುದು ವರದಿಯಾಗಿದೆ. ಈ ಕುರಿತು ತನಿಖೆ ನಡೆಸಲಾಗುವುದು ಎಂದು ಸದನದ ವಿದೇಶಾಂಗ ವ್ಯವಹಾರಗಳ ಸಮಿತಿಯ ಅಧ್ಯಕ್ಷರಾಗಿರುವ ಗ್ರೆಗರಿ ಮೀಕ್ಸ್ ಹೇಳಿದ್ದಾರೆ.
ಮಯನ್ಮಾರ್ನಲ್ಲಿ ಸಶಸ್ತ್ರ ಪಡೆ ದಿನದಂದೇ ನಾಗರಿಕರನ್ನು ಹತ್ಯೆ ಮಾಡಲಾಗಿದೆ. ಯಾಂಗೂನ್ನಲ್ಲಿ ಅಮೆರಿಕದ ಕೇಂದ್ರದ ಮೇಲಿನ ದಾಳಿಯನ್ನು ಯಾವುದೇ ಕಾರಣಕ್ಕೂ ಸಮರ್ಥಿಸಲಾಗದು. ಪರಿಸ್ಥಿತಿ ಕೈಮೀರಿದೆ ಎಂದು ಬೈಡನ್ ಹೇಳಿದ್ದಾರೆ.