ನನ್ನ ಗುರಿ ರಾಜ್ಯಸಭೆ ಅಲ್ಲ: ಎಚ್.ಡಿ. ಕುಮಾರಸ್ವಾಮಿ

Prasthutha|

ಹುಬ್ಬಳ್ಳಿ: ರಾಜ್ಯಸಭೆ ಚುನಾವಣೆಯಲ್ಲಿ ಗೆದ್ದರೆ ಪಕ್ಷಕ್ಕೆ ಶಕ್ತಿ ಬರುತ್ತದೆ. ಗೆಲ್ಲದಿದ್ದರೆ ನಷ್ಟವೇನಿಲ್ಲ. ನನ್ನ ಗುರಿ ರಾಜ್ಯಸಭೆ ಅಲ್ಲ. 2023ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

- Advertisement -

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಚುನಾವಣೆಯಲ್ಲಿ 123 ಸ್ಥಾನಗಳನ್ನು ಗೆಲ್ಲುವ ಗುರಿ ಇಟ್ಟುಕೊಂಡಿದ್ದೇನೆ. ಒಂದು ಬಾರಿ ಸಂಪೂರ್ಣ ಬಹುಮತ ನೀಡಿ ಎಂದು ಜನರಲ್ಲಿ ಕೇಳಿಕೊಳ್ಳುವೆ. ಅವರು ನೀಡದಿದ್ದರೆ ಪಕ್ಷವನ್ನು ವಿಸರ್ಜಿಸುವೆ. ಜನರೇ ಮತ ನೀಡದಿದ್ದಾಗ ಪಕ್ಷ ಇಟ್ಟುಕೊಂಡು ಏನು ಮಾಡಲಿ ಎಂದು ಹತಾಶರಾಗಿ ನುಡಿದರು.

ಇದು ಮುಕ್ತ ಚುನಾವಣೆಯಾಗಿರುವುದರಿಂದ ಅಡ್ಡ ಮತದಾನ ಅಷ್ಟು ಸುಲಭ ಅಲ್ಲ. 2016ರಲ್ಲಿ ಅಡ್ಡ ಮತದಾನ ಹಾಕಿದ ಏಳು ಜನರ ಪೈಕಿ ನಾಲ್ಕು ಜನರ ಸ್ಥಿತಿ ಏನಾಗಿದೆ ಎನ್ನುವುದನ್ನು ಇಡೀ ರಾಜ್ಯವೇ ಗಮನಿಸಿದೆ. ನಮ್ಮ ಪಕ್ಷದ 32 ಮತಗಳು ನಮ್ಮ ಅಭ್ಯರ್ಥಿಗೆ ಸಿಗಲಿದೆ ಎನ್ನುವ ವಿಶ್ವಾಸ ತಮಗಿದೆ ಎಂದು ಹೇಳಿದರು.

- Advertisement -

ಸದಸ್ಯರ ಸಂಖ್ಯಾಬಲದ ಮೇಲೆ ಬಿಜೆಪಿಯ ಇಬ್ಬರು ಹಾಗೂ ಕಾಂಗ್ರೆಸ್ ನ ಒಬ್ಬ ಅಭ್ಯರ್ಥಿ ಸುಲಭವಾಗಿ ಗೆಲ್ಲುತ್ತಾರೆ. ನಾಲ್ಕನೇ ಅಭ್ಯರ್ಥಿಗಾಗಿ ಪೈಪೋಟಿ ಏರ್ಪಟ್ಟಿದೆ. ಕಾಂಗ್ರೆಸ್ ನ ಎರಡನೇ ಅಭ್ಯರ್ಥಿ ಯಾವ ಸಂದರ್ಭದಲ್ಲಿಯೂ ಗೆಲ್ಲಲು ಸಾಧ್ಯವಿಲ್ಲ. ಇದು ಸಿದ್ದರಾಮಯ್ಯ ಅವರಿಗೆ ಗೊತ್ತಿದ್ದರೂ ಜೆಡಿಎಸ್ ಅಭ್ಯರ್ಥಿಯನ್ನು  ಸೋಲಿಸಲು ಹಾಗೂ ಬಿಜೆಪಿಯ ಮೂರನೇ ಅಭ್ಯರ್ಥಿಯನ್ನು ಗೆಲ್ಲಿಸಲು ಸಹಾಯ ಮಾಡಲೆಂದು ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದಾರೆ ಎಂದು ಆರೋಪಿಸಿದರು.



Join Whatsapp