ಮುಝಫ್ಫರ್ ನಗರ ಗಲಭೆ : ಬಿಜೆಪಿ ನಾಯಕರ ವಿರುದ್ಧ ಪ್ರಕರಣಗಳನ್ನು ಕೈಬಿಡುವಂತೆ ಕೋರಿದ ಯೋಗಿ ಸರ್ಕಾರದ ಮನವಿಗೆ ಅನುಮತಿ ನೀಡಿದ ನ್ಯಾಯಾಲಯ !!

Prasthutha|

► 42 ಮುಸ್ಲಿಮರ ಹತ್ಯೆ, 50,000 ಜನರ ವಲಸೆಗೆ ಕಾರಣವಾಗಿದ್ದ ಭಯಾನಕ ಗಲಭೆ !

- Advertisement -

ಮುಝಫ್ಫರ್ ನಗರ : 2013 ರ ಮುಝಫ್ಫರ್ ನಗರ ಕೋಮು ಗಲಭೆಗೆ ಕಾರಣರಾಗಿದ್ದಾರೆಂದು ಆರೋಪಿಸಲಾಗಿದ್ದ  ಬಿಜೆಪಿಯ 12 ಮಂದಿ ಉನ್ನತ ನಾಯಕರ ವಿರುದ್ಧದ ಪ್ರಕರಣಗಳನ್ನು ಕೈಬಿಡುವಂತೆ ಮುಝಫ್ಫರ್ ನಗರದ ಸ್ಥಳೀಯ ವಿಶೇಷ ನ್ಯಾಯಾಲಯ ಅನುಮತಿ ನೀಡಿದೆ. ಉತ್ತರ ಪ್ರದೇಶದ ಸಚಿವ ಸುರೇಶ್ ರಾಣಾ, ಬಿಜೆಪಿ ಶಾಸಕ ಸಂಗೀತ್ ಸೋಮ್, ಬಿಜೆಪಿ ಮಾಜಿ ಸಂಸದ ಭರ್ತೆಂದು ಸಿಂಗ್ ಮತ್ತು ವಿಎಚ್ ಪಿ ನಾಯಕಿ ಸಾಧ್ವಿ ಪ್ರಾಚಿ ಸೇರಿದಂತೆ 12 ಬಿಜೆಪಿ ನಾಯಕರ ವಿರುದ್ಧ ಹಿಂಸೆಗೆ ಪ್ರಚೋದನೆ ನೀಡಿದ್ದ ಪ್ರಕರಣಗಳನ್ನು ಕೈಬಿಡುವಂತೆ ಬಿಜೆಪಿಯ ಯೋಗಿ ಸರಕಾರ ಮನವಿ ಮಾಡಿತ್ತು. ಅದನ್ನು ಪುರಸ್ಕರಿಸಿರುವ ಸ್ಥಳೀಯ ನ್ಯಾಯಾಲಯ, ಪ್ರಕರಣಗಳನ್ನು ವಾಪಾಸ್ ಪಡೆಯಲು ಅನುಮತಿ ನೀಡಿದೆ.  ಸ್ಥಳೀಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ರಾಮ್ ಸುಧ್ ಸಿಂಗ್ ಅವರು ಶುಕ್ರವಾರ ಸರ್ಕಾರಿ ವಕೀಲರಿಗೆ ಈ ಪ್ರಕರಣವನ್ನು ವಾಪಸ್ ಪಡೆಯಲು ಅವಕಾಶ ನೀಡಿದ್ದಾರೆ.

ಜಿಲ್ಲಾ ಸರ್ಕಾರಿ ವಕೀಲ ರಾಜೀವ್ ಶರ್ಮಾ ಅವರು, “ಸರ್ಕಾರಿ ನೌಕರರು ತಮ್ಮ ಕರ್ತವ್ಯಗಳನ್ನು ನಿರ್ವಹಿಸದಂತೆ ಮತ್ತು ಕರ್ತವ್ಯ ನಿರ್ವಹಿಸುವುದನ್ನು ಕಾನೂನುಬಾಹಿರವಾಗಿ ನಿರ್ಬಂಧಿಸಿದ ಆರೋಪದ ಮೇಲೆ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಈ ಎಲ್ಲಾ  ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು ಎಂದು ಹೇಳಿದರು.

- Advertisement -

2013 ರ ಆಗಸ್ಟ್ ಕೊನೆಯ ವಾರದಲ್ಲಿ ಆರೋಪಿತರು ಕಾನೂನು ಬಾಹಿರವಾಗಿ ಮಹಾಪಂಚಾಯತ್ ಸೇರಿ, ಕೋಮುಪ್ರಚೋದಕ ಭಾಷಣಗಳನ್ನು ಮಾಡಿ ಗಲಭೆಗೆ ಕಾರಣರಾಗಿದ್ದರು ಎಂದು ಆರೋಪಿಸಲಾಗಿದೆ. ಈ ಬಗ್ಗೆ ಸಾರ್ವಜನಿಕ ಹಿತಾಸಕ್ತಿಯಿಂದ ಬಿಜೆಪಿ ನಾಯಕರ ವಿರುದ್ಧದ ಈ ಪ್ರಕರಣಗಳ ತನಿಖೆ ಮುಂದುವರಿಸದಿರಲು ಉತ್ತರ ಪ್ರದೇಶದ ರಾಜ್ಯ ಸರಕಾರ ತೀರ್ಮಾನಿಸಿದೆ. ಹೀಗಿರುವಾಗ ನ್ಯಾಯಾಲಯ ಈ ಪ್ರಕರಣಗಳನ್ನು ವಾಪಾಸ್ ಪಡೆಯಲು ಅನುಮತಿ ನೀಡಬೇಕೆಂದು ಯೋಗಿ ಸರ್ಕಾರ ಮನವಿ ಮಾಡಿತ್ತು.

2013ರಲ್ಲಿ ಮುಝಫ್ಫರ್ ನಗರ ಮತ್ತು ಅದರ ನೆರೆ ಜಿಲ್ಲೆಗಳಲ್ಲಿ ನಡೆದ ಕೋಮು ಘರ್ಷಣೆಯಲ್ಲಿ ಕನಿಷ್ಠ 62 ಮಂದಿ ಸಾವನ್ನಪ್ಪಿದ್ದರು. ಅದರಲ್ಲಿ 42 ಮಂದಿ ಮುಸ್ಲಿಮರಾಗಿದ್ದರು. 50 ಸಾವಿರಕ್ಕೂ ಹೆಚ್ಚು ಮಂದಿ ಮುಸ್ಲಿಮರು ಸಂಘಪರಿವಾರದ ಹಿಂಸೆಯ ಭೀತಿಯಿಂದ ಸ್ಥಳಾಂತರಗೊಂಡಿದ್ದರು. ಇದೀಗ ನ್ಯಾಯಾಲಯದ ಈ ತೀರ್ಪಿನ ಕುರಿತು ಜನರು ತೀವ್ರ ಆಕ್ರೋಶ ಹೊರ ಹಾಕಿದ್ದಾರೆ. ಸಾಮಾಜಿಕ ಕಾರ್ಯಕರ್ತ ಆಸಿಫ್ ಖಾನ್ ಟ್ವೀಟ್ ಮಾಡಿ, “ಇದು ಜಾತ್ಯತೀತ ಪ್ರಜಾಪ್ರಭುತ್ವ ಭಾರತದ ವಾಸ್ತವವಾಗಿದೆ. ಮುಸ್ಲಿಮ್ ವಿರೋಧಿ ಮುಝಫ್ಫರ್ ನಗರ ಗಲಭೆಗೆ ಕಾರಣರಾಗಿದ್ದ  ಹಿಂದುತ್ವ ನಾಯಕರ ವಿರುದ್ಧದ ಪ್ರಕರಣಗಳ ವಾಪಾಸಾತಿಗೆ ನ್ಯಾಯಾಲಯ ಅನುಮತಿ ನೀಡಿದೆ” ಎಂದು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ

https://twitter.com/imMAK02/status/1375741197398904833
Join Whatsapp