ಬೆಂಗಳೂರು: ವಿಶ್ವವಿದ್ಯಾಲಯ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜಿನ (ಯುವಿಸಿಇ) ಆಡಳಿತ ಮಂಡಳಿಯ ಮುಖ್ಯಸ್ಥ ರಾಗಿ ಮುತ್ತುರಾಮನ್ ಅವರನ್ನು ನೇಮಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ ಎನ್ ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.
ಬುಧವಾರ ಈ ವಿಚಾರ ತಿಳಿಸಿರುವ ಅವರು, ಟಾಟಾ ಸ್ಟೀಲ್ಸ್ ಲಿಮಿಟೆಡ್ ಮತ್ತು ಟಾಟಾ ಇಂಟರ್ ನ್ಯಾಷನಲ್ ಸಂಸ್ಥೆಗಳ ಅಧ್ಯಕ್ಷರಾಗಿ ಕೆಲಸ ಮಾಡಿದ ಅನುಭವ ಹೊಂದಿರುವ ಮುತ್ತುರಾಮನ್ ಅವರ ಕಾರ್ಯಾವಧಿಯು 4 ವರ್ಷಗಳಾಗಿರುತ್ತದೆ ಎಂದಿದ್ದಾರೆ.
ಸರಕಾರವು ಯುವಿಸಿಇ ಯನ್ನು ಉತ್ಕೃಷ್ಟ ಸಂಸ್ಥೆಯನ್ನಾಗಿ ಬೆಳೆಸಲು ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ ಮುತ್ತುರಾಮನ್ ಅವರ ಅನುಭವವು ನೆರವಿಗೆ ಬರಲಿದೆ ಎಂದು ಅವರು ಹೇಳಿದ್ದಾರೆ.
ಯುವಿಸಿಇಗೆ ಸಂಪೂರ್ಣ ಸ್ವಾಯತ್ತತೆ ನೀಡುವ ಸರ್ಕಾರದ ಪ್ರಕ್ರಿಯೆಯ ಮೊದಲ ಭಾಗವಾಗಿ ಈ ನೇಮಕ ಮಾಡಲಾಗಿದೆ. ರಾಜ್ಯ ಮಟ್ಟದಲ್ಲಿ ಈ ರೀತಿಯ ಕ್ರಾಂತಿಕಾರಕ ತೀರ್ಮಾನ ಆಗಿರುವುದು ಇದೇ ಮೊದಲು. ಮುಂದಿನ ದಿನಗಳಲ್ಲಿ ಅಧ್ಯಕ್ಷರ ನೇಮಕದ ವಿಷಯದಲ್ಲಿ ಸರ್ಕಾರದ ಪಾತ್ರ ಹೆಚ್ಚಾಗಿ ಇರುವುದಿಲ್ಲ. ಹಾಲಿ ಇರುವ ಅಧ್ಯಕ್ಷರೇ ಅವರ ಉತ್ತರಾಧಿಕಾರಿಯನ್ನು ನೇಮಕ ಮಾಡಲಿದ್ದಾರೆ. ಇದು ಐಐಎಂ, ಐಐಟಿ ಮಾದರಿಯಲ್ಲಿ ಇರುತ್ತದೆ.