ಮುಸ್ಲಿಮರು ನನ್ನ ಹೃದಯದಲ್ಲಿದ್ದಾರೆ ಎಂದ ಲಕ್ಷ್ಮಣ ಸವದಿ: ಹಿಜಾಬ್, ವ್ಯಾಪಾರ ಬಹಿಷ್ಕಾರ, ಕೋಮು ಬೆಂಕಿ ಹಚ್ಚುವಾಗ ಇಲ್ಲದ ಪ್ರೀತಿ ಈಗ ಬಂದಿದೆ ಎಂದ ಕಾಂಗ್ರೆಸ್

Prasthutha|

ಬೆಳಗಾವಿ: ಚುನಾವಣೆ ಸಮೀಪಿಸುತ್ತಿದ್ದಂತೆ ಮುಸ್ಲಿಮ್ ಓಲೈಕೆ ಬಿರುಸಿನಿಂದ ಸಾಗುತ್ತಿದೆ.
ಈಗ ಬಿಜೆಪಿ ವಿಧಾನಪರಿಷತ್ ಸದಸ್ಯ ಲಕ್ಷ್ಮಣ ಸವದಿ ಅವರು, ಮುಸ್ಲಿಂ ಸಮಾಜದವರು ನನ್ನ ಹೃದಯದಲ್ಲಿ ಅಚ್ಚೊತ್ತಿದ್ದಾರೆ. ಮುಸ್ಲಿಮ್ ಸಮಾಜದ ಅಭಿಪ್ರಾಯ ಕೂಡ ನನ್ನ ರಾಜಕೀಯ ಭವಿಷ್ಯಕ್ಕೆ ಮುಖ್ಯ ಎಂದು ಹೇಳಿದ್ದು, ರಾಜಕೀಯ ಚರ್ಚೆಗೆ ಕಾರಣವಾಗಿದೆ.
ಶನಿವಾರ ಬೆಳಗಾವಿಯ ಅಥಣಿಯಲ್ಲಿ ಮುಸ್ಲಿಂ ಮುಖಂಡರ ಸಭೆಯಲ್ಲಿ ಮಾತನಾಡಿದ ಲಕ್ಷ್ಮಣ ಸವದಿ, ‘ನನ್ನ ಸ್ವಾಭಿಮಾನಕ್ಕೆ ಧಕ್ಕೆ ಬಂದಿದೆ. ಹೀಗಾಗಿ, ನಾನು ಮಾರ್ಚ್‌ 27ರಂದು ಎಲ್ಲ ಸಮುದಾಯದವರ ಒಪ್ಪಿಗೆ ಪಡೆದು ಒಂದು ತೀರ್ಮಾನಕ್ಕೆ ಬರುತ್ತಿದ್ದೇನೆ. ಮುಸ್ಲಿಂ ಸಮಾಜದವರ ಅಭಿಪ್ರಾಯವೂ ನನಗೆ ಬೇಕು. ನೀವು ನನಗೆ ಯಾವಾಗಲೂ ಬೆಂಬಲವಾಗಿ ನಿಲ್ಲಬೇಕು’ ನಾನು ಮನೆಯಲ್ಲಿ ಸುಮ್ಮನೆ ಕುಳಿತಿದ್ದೆ. ಆದರೆ, ಕೆಲವರು ನನ್ನನ್ನು ಕುಳಿತುಕೊಳ್ಳಲು ಬಿಡುತ್ತಿಲ್ಲ. ಹಾಗಾಗಿ ನಾನು ನಿಮ್ಮ ಮುಂದೆ ಬಂದಿದ್ದೇನೆ. ನನಗೀಗ ಮಾಡು ಇಲ್ಲವೇ ಮಡಿ ಎಂಬ ಸ್ಥಿತಿ ಇದೆ. ಅಥಣಿ ಕ್ಷೇತ್ರದಿಂದ ಸ್ಪರ್ಧೆಗೆ ಇಳಿಯಲೇಬೇಕು ಎಂದು ಸಮಾಜದವರು ಹೇಳಿದರೆ ಮಾತ್ರ ನಾನು ಟಿಕೆಟ್ ಕೇಳುತ್ತೇನೆ. ಅಥಣಿ ತಾಲ್ಲೂಕಿನ ಮುಸ್ಲಿಂ ಸಮುದಾಯ ನನ್ನ ಹೃದಯದಲ್ಲಿದೆ. ಎಲ್ಲ ಸಮುದಾಯದ ಒಪ್ಪಿಗೆ ಪಡೆದುಕೊಂಡು ಪಕ್ಷಕ್ಕೆ ತಿಳಿಸುತ್ತೇನೆ’ ಎಂದರು.
ಬಿಜೆಪಿ ಮುಖಂಡನ ಹೇಳಿಕೆಗೆ ಕರ್ನಾಟಕ ಕಾಂಗ್ರೆಸ್ ತೀಕ್ಷ್ಮವಾಗಿ ಪ್ರತಿಕ್ರಿಯಿಸಿದೆ,
ಮುಸ್ಲಿಮರು ಒಳ್ಳೆಯವರು, ಹಿಂದೂಗಳೇ ಕಿಡಿಗೇಡಿಗಳು – ಈಶ್ವರಪ್ಪ,
ನಾನು ಬೇರೆ ಬಿಜೆಪಿಗರಂತಲ್ಲ, ಮುಸ್ಲಿಮರೇ ನನ್ನ ಬಂಧುಗಳು – ಉಮಾನಾಥ ಕೋಟ್ಯಾನ್
ಮುಸ್ಲಿಮರು ನನ್ನ ಹೃದಯದಲ್ಲಿದ್ದಾರೆ – ಲಕ್ಷ್ಮಣ್ ಸವದಿ
ನಾನು ಎಂದಿಗೂ ಮುಸ್ಲಿಮರ ಪರ – ಉದಯ್ ಗರುಡಾಚಾರ್
ಬಿಜಿಎಪಿ ನಾಯಕರಿಗೆ ಏಕಾಏಕಿ “ತುಷ್ಟೀಕರಣ” ರಾಜಕೀಯ ನೆನಪಾಗಿದೆ! ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
ಹಿಜಾಬ್ ಗಲಾಟೆ, ವ್ಯಾಪಾರ ಬಹಿಷ್ಕಾರ, ಕೋಮು ಬೆಂಕಿ ಹಚ್ಚುವಾಗ ಇಲ್ಲದ ಪ್ರೀತಿ ಈಗ ಬಂದಿದೆ! ಈಗ ಬಿಜೆಪಿಯ ಒಬ್ಬೊಬ್ಬರೇ ನಾಯಕರು ಮುಸ್ಲಿಮರು ನನ್ನ ಹೃದಯದಲ್ಲಿದ್ದಾರೆ ಎನ್ನುತ್ತಿದ್ದಾರೆ! ಬಣ್ಣ ಬದಲಿಸುವ ಬಿಜೆಪಿಗರನ್ನು ಕಂಡು ಊಸರವಳ್ಳಿಯೂ ನಾಚುತ್ತದೆ. ಬಿಜೆಪಿಗೆ ಇದು ನಿಮ್ಮ ಓಲೈಕೆ ರಾಜಕಾರಣದ ವ್ಯಾಖ್ಯಾನದೊಳಗೆ ಬರುವುದಿಲ್ಲವೇ? ಎಂದು ಕಾಂಗ್ರೆಸ್ ಕುಟುಕಿದೆ.

- Advertisement -