ಬಜಪೆ: ಎಸ್.ಡಿ.ಪಿ.ಐನಿಂದ ಸಾರ್ವಜನಿಕ ಸಮಾವೇಶ – ಪಕ್ಷದ ಕಚೇರಿ ಉದ್ಘಾಟನೆ

Prasthutha|

ಬಜಪೆ: ಎಸ್.ಡಿ.ಪಿ.ಐ ಬಜಪೆ ಪಟ್ಟಣ ಪಂಚಾಯತ್ ಸಮಿತಿ ವತಿಯಿಂದ ಬೃಹತ್ ಸಾರ್ವಜನಿಕ ಸಮಾವೇಶ ಹಾಗೂ ಪಕ್ಷದ ಕಚೇರಿ ಉದ್ಘಾಟನೆಯು ಪಂಚಾಯತ್ ಸಮಿತಿಯ ಅಧ್ಯಕ್ಷ ಇಸ್ಮಾಯಿಲ್ ಇಂಜಿನಿಯರ್ ರವರ ಅಧ್ಯಕ್ಷತೆಯಲ್ಲಿ ಬಜಪೆ ಕಿನ್ನಿಪದವಿನಲ್ಲಿ ನಡೆಯಿತು.
ಕಚೇರಿ ಉದ್ಘಾಟನೆಯನ್ನು ಮೂಡಬಿದರೆ ವಿಧಾನಸಭಾ ಕ್ಷೇತ್ರ ಅಭ್ಯರ್ಥಿ ಅಲ್ಫೋನ್ಸ್ ಫ್ರಾಂಕೋ ನೆರವೇರಿಸಿದರು. ನಂತರ ನಡೆದ ಸಾರ್ವಜನಿಕ ಸಮಾವೇಶದಲ್ಲಿ ಉದ್ಘಾಟನಾ ಭಾಷಣ ಮಾಡಿದ ಅವರು, ಈ ಭಾರಿ ಮೂಡಬಿದರೆ ಕ್ಷೇತ್ರದಲ್ಲಿ ನನ್ನ ಗೆಲುವು ಖಚಿತ, ಇಲ್ಲಿನ ಜನತೆ ಬಿ.ಜೆ.ಪಿ. ಹಾಗೂ ಕಾಂಗ್ರೆಸ್ಸಿನ ದುರಾಡಳಿತದಿಂದ ಬೇಸತ್ತು ಎಸ್.ಡಿ.ಪಿ.ಐ ಯ ಜನಪರ ಹೋರಾಟವನ್ನು ಕಂಡು ಪಕ್ಷದ ಕಡೆಗೆ ಒಲವು ತೋರಿಸುತ್ತಿದ್ದಾರೆ, ಈಗಾಗಲೇ ಕ್ಷೇತ್ರದಾದ್ಯಂತ ಎಲ್ಲಾ ಜಾತಿ ಜನಾಂಗದವರು ಹುಮ್ಮಸ್ಸಿನಂದ ನಮಗೆ ಬೆಂಬಲ ಕೊಟ್ಟಿದ್ದಾರೆ ಎಂದು ಹೇಳಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ದಿಕ್ಸೂಚಿ ಭಾಷಣ ಮಾಡಿ, ಎಸ್.ಡಿ.ಪಿ.ಐಯೂ ನಿಸ್ವಾರ್ಥ ಸೇವೆಯ, ಜನಪರ ಹೋರಾಟದ ಕಾರ್ಯಕರ್ತರ ಪಡೆ ಹೊಂದಿದೆ. ಇದುವೇ ಪಕ್ಷದ ಶಕ್ತಿಯಾಗಿದೆ. ಎಸ್.ಡಿ.ಪಿ.ಐಯ ಬೆಳವಣಿಗೆಯನ್ನು ಸಹಿಸದ ಬಿ.ಜೆ.ಪಿ. ಹಾಗೂ ಕಾಂಗ್ರೆಸ್ ಪರಸ್ಪರ ಎ, ಬಿ, ಟೀಮ್ ಎಂಬ ಕೆಸರೆರಚಾಟದಲ್ಲಿ ತೊಡಗಿಕೊಂಡಿದ್ದಾರೆ. ನಾವು ಜನಸಾಮಾನ್ಯರ ನಿಜವಾದ ಎ ಟೀಮ್ ಆಗಿದ್ದೇವೆ, ಈ ಬಾರಿ ಮೂಡಬಿದರೆ ಕ್ಷೇತ್ರದಲ್ಲಿ ಅಲ್ಫೋನ್ಸ್ ಫ್ರಾಂಕೋರವರು ಗೆಲ್ಲುವ ಎಲ್ಲಾ ಲಕ್ಷಣಗಳಿವೆ ಎಂದರು.
ಇದೇ ಸಂದರ್ಭದಲ್ಲಿ ಮಹಿಳೆಯರು ಸೇರಿದಂತೆ ಹಲವು ಮುಖಂಡರು ಪಕ್ಷಕ್ಕೆ ಸೇರ್ಪಡೆಗೊಂಡರು.
ಪ್ರಾಸ್ತಾವಿಕವಾಗಿ ಮೂಡಬಿದರೆ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಆಸಿಫ್ ಕೋಟೆಬಾಗಿಲು ಮಾತನಾಡಿದರು. ಮುಖ್ಯ ಅತಿಥಿಗಳಾಗಿ ರಾಜ್ಯ ಕಾರ್ಯದರ್ಶಿ ಅಶ್ರಫ್ ಮಾಚಾರ್, ರಾಜ್ಯ ಸಮಿತಿ ಸದಸ್ಯ ಅಥಾವುಲ್ಲಾ ಜೋಕಟ್ಟೆ, ವಿಮೆನ್ ಇಂಡಿಯಾ ಮೂವ್ಮೆಂಟ್ ರಾಷ್ಟ್ರೀಯ ಕಾರ್ಯದರ್ಶಿ ಆಯಿಷಾ ಬಜ್ಪೆ, ಎಸ್.ಡಿ.ಪಿ.ಐ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಮಾಲ್ ಜೋಕಟ್ಟೆ, ಮೂಡಬಿದರೆ ಕ್ಷೇತ್ರ ಕಾರ್ಯದರ್ಶಿ ನಿಸಾರ್ ಮರವೂರು, ವುಮೆನ್ ಇಂಡಿಯಾ ಮೂವ್ಮೆಂಟ್ ಮೂಡಬಿದರೆ ಕ್ಷೇತ್ರ ಅಧ್ಯಕ್ಷೆ ರಿಫಾತ್, ಎಸ್.ಡಿ.ಪಿ.ಐ ಬಜಪೆ ಬ್ಲಾಕ್ ಅದ್ಯಕ್ಷ ರಹೀಂ ಕಳವಾರು ಉಪಸ್ಥಿತರಿದ್ದರು. ಅಸ್ತಾರ್ ಕಾರ್ಯಕ್ರಮ ನಿರೂಪಿಸಿದರು.

- Advertisement -

- Advertisement -