ಲಕ್ನೋ: ಬಿಜೆಪಿ ನಾಯಕ, ಉತ್ತರಪ್ರದೇಶದ ಸಂಸದೀಯ ವ್ಯವಹಾರಗಳ ಸಚಿವ ಆನಂದ್ ಸ್ವರೂಪ್ ಶುಕ್ಲಾ ಅವರು ಮುಸ್ಲಿಂ ಮಹಿಳೆಯರಿಗೆ ಬುರ್ಖಾ ಧರಿಸಿರುವುದರ ವಿರುದ್ಧ ಕೋಮು ಧ್ವೇಷದ ಹೇಳಿಕೆ ನೀಡಿದ್ದಾರೆ. ಬುರ್ಖಾ ಧರಿಸುವುದು ಕೆಟ್ಟ ಸಂಸ್ಕೃತಿಯಾಗಿದೆ. ಮುಸ್ಲಿಂ ಮಹಿಳೆಯರನ್ನು ತ್ರಿವಳಿ ತಲಾಕ್ ನಂತಹ ‘ಬುರ್ಖಾ’ದಿಂದ ಮುಕ್ತಗೊಳಿಸಲಿದ್ದೇವೆ ಎಂದು ಅವರು ಹೇಳಿದ್ದಾರೆ.
ಬುರ್ಖಾ ಎಂಬುದು ಮುಸ್ಲಿಂ ಮಹಿಳೆಯರು ಮುಖ ಮತ್ತು ದೇಹವನ್ನು ಮುಚ್ಚಿಕೊಳ್ಳಲು ಧರಿಸಿರುವ ಉಡುಪಾಗಿದೆ. ತ್ರಿವಳಿ ತಲಾಕ್ ನಂತಹ ಬುರ್ಖಾದಿಂದ ಮುಸ್ಲಿಂ ಮಹಿಳೆಯರನ್ನು ಮುಕ್ತಗೊಳಿಸಲಿದ್ದೇವೆ. ಅವರು ಅದರಿಂದ ಮುಕ್ತರಾಗುವ ಸಮಯ ಬರಲಿದೆ. ಬುರ್ಖಾವನ್ನು ನಿಷೇಧಿಸಿರುವ ಅನೇಕ ಮುಸ್ಲಿಂ ರಾಷ್ಟ್ರಗಳಿವೆ. ಬುರ್ಖಾ ಅಮಾನವೀಯ ಮತ್ತು ದುಷ್ಟ ಸಂಸ್ಕೃತಿಯಾಗಿದೆ ಎಂದು ಅವರು ಹೇಳಿದ್ದಾರೆ.
ಈ ಹಿಂದೆ ಬಿಜೆಪಿ ನಾಯಕ ಆನಂದ್ ಸ್ವರೂಪ್ ಶುಕ್ಲಾ ಅಝಾನ್ ಗೆ ಧ್ವನಿವರ್ಧಕ ಬಳಸುವುದನ್ನು ವಿರೋಧಿಸಿದ್ದರು. ತಮ್ಮ ಮನೆಯ ಸಮೀಪವಿರುವ ಮಸೀದಿಯಲ್ಲಿ ಧ್ವನಿವರ್ಧಕದ ಮೂಲಕ ಆಝಾನ್ ಕರೆ ಮಾಡುವುದು ಕಿರಿಕಿರಿಯಾಗುತ್ತಿದೆ ಎಂದು ಸಚಿವರು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದರು. ಆಝಾನ್ ಕರೆಯಲ್ಲಿ ತೊಂದರೆ ಅನುಭವಿಸುವವರು ‘112’ ಡಯಲ್ ಮಾಡಿ ಪೊಲೀಸರಿಗೆ ಮಾಹಿತಿ ನೀಡಬೇಕು. ಯಾವುದೇ ಕ್ರಮ ಕೈಗೊಳ್ಳದಿದ್ದರೆ ತಾನು ಮುಂದಿನ ಕ್ರಮ ಕೈಗೊಳ್ಳಲು ನಿರ್ಧರಿಸುವುದಾಗಿ ಬೆದರಿಕೆ ಹಾಕಿದ್ದರು.