ಮುಸ್ಲಿಂ ರಾಷ್ಟ್ರೀಯ ಮಂಚ್, ಆರ್ ಎಸ್ ಎಸ್ ನ ಅಂಗಸಂಸ್ಥೆ; ರಾಷ್ಟ್ರೀಯ ವಕ್ತಾರ ಡಾ.ಶಾಹೀದ್ ಅಖ್ತರ್

Prasthutha|

ಬೆಂಗಳೂರು: ಬಿಜೆಪಿ ಭಾರತೀಯತೆ, ರಾಷ್ಟ್ರೀಯತೆಯ ಆಧಾರದ ಮೇಲೆ ರಾಜಕಾರಣ ಮಾಡುತ್ತಿದ್ದು ಪ್ರತಿಯೊಬ್ಬರೂ ಭಾರತೀಯತೆಯನ್ನು ಅಳವಡಿಸಿಕೊಳ್ಳಬೇಕಾಗಿದೆ ಎಂದು ಮುಸ್ಲಿಂ ರಾಷ್ಟ್ರೀಯ ಮಂಚ್ ನ ರಾಷ್ಟ್ರೀಯ ವಕ್ತಾರ ಡಾ. ಶಾಹೀದ್ ಆಖ್ತರ್ ಹೇಳಿದ್ದಾರೆ.

- Advertisement -


ಬೆಂಗಳೂರಿನಲ್ಲಿ ನಡೆದ ಒಂದು ದಿನದ ಕಾರ್ಯಾಗಾರ ಹಾಗೂ ವಿದ್ಯಾರ್ಥಿ ಪ್ರಕೋಷ್ಠ ಉದ್ಘಾಟಿಸಿ ಮಾತನಾಡಿದ ಅವರು, ಮುಸ್ಲಿಂ ರಾಷ್ಟ್ರೀಯ ಮಂಚ್ ಆರ್ ಎಸ್ ಎಸ್ ನ ಅಂಗ ಸಂಸ್ಥೆಯಾಗಿದ್ದು, ರಾಷ್ಟ್ರೀಯತೆಗಾಗಿ ದುಡಿಯುವ ಸಂಘವಾಗಿದೆ. ರಾಷ್ಟ್ರ ಮೊದಲು ನಂತರ ಜಾತಿ, ಧರ್ಮ ಎಂಬುದನ್ನು ಪ್ರತಿಯೊಬ್ಬರೂ ರೂಡಿಸಿಕೊಳ್ಳಬೇಕು. ಮುಸ್ಲಿಂ ರಾಷ್ಟ್ರೀಯ ಮಂಚ್ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ದೇಶದಲ್ಲಿ ನಡೆಸಿಕೊಂಡು ಬರುತ್ತಿದೆ ಎಂದು ತಿಳಿಸಿದರು.


ರಾಷ್ಟ್ರೀಯ ಸಂಚಾಲಕ ಮಜೀದ್ ಅಹಮದ್ ತಾಳಿಕೋಟೆ ಮಾತನಾಡಿ, ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳು ನಡೆಯುತ್ತಿವೆ. ದೇಶ ಅಭಿವೃದ್ಧಿಯತ್ತ ಸಾಗುತ್ತಿದೆ. ದೇಶವನ್ನು ಧರ್ಮದ ಆಧಾರದ ಮೇಲೆ ಒಡೆದು ಆಳುತ್ತಿದ್ದಾರೆ ಎಂದು ಪ್ರತಿಪಕ್ಷಗಳು ಗೂಬೆ ಕೂರಿಸುವ ಕೆಲಸ ಮಾಡುತ್ತಿವೆ. ಎಲ್ಲ ಧರ್ಮದವರನ್ನು ಒಟ್ಟಿಗೆ ಕರೆದೊಯ್ಯುವ ಕಾರ್ಯವನ್ನು ಪ್ರಧಾನಿ ಮಾಡುತ್ತಿದ್ದಾರೆ ಎಂದು ಹೇಳಿದರು.

- Advertisement -


ಬಿಜೆಪಿ ಅಲ್ಪಸಂಖ್ಯಾತ ಘಟಕದ ರಾಜ್ಯಾಧ್ಯಕ್ಷ ಸೈಯದ್ ಸಲೀಂ ಮಾತನಾಡಿ, ಬಿಜೆಪಿ ಜಾತಿ, ಧರ್ಮವನ್ನು ಒಡದು ರಾಜಕೀಯ ಮಾಡುತ್ತಿದೆ ಎಂದು ಕೇವಲ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಅಪಪ್ರಚಾರವಾಗಿದೆ ಎಂದರು.


ಇದೇ ಸಂದರ್ಭದಲ್ಲಿ ಮುಸ್ಲಿಂ ರಾಷ್ಟ್ರೀಯ ಮಂಚ್ ನ ವಿದ್ಯಾರ್ಥಿ ಘಟಕದ ಸಂಚಾಲಕರಾಗಿ ನೇಮಕಗೊಂಡ ಮಸ್ಕಾನ್ ಮಾತನಾಡಿ, ಮಂಚ್ ವತಿಯಿಂದ ವಿದ್ಯಾರ್ಥಿಗಳಿಗೆ ನೆರವಾಗಲು ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಸಾವಿರಾರು ಮುಸ್ಲಿಂ ವಿದ್ಯಾರ್ಥಿಗಳನ್ನು ಮಂಚ್ ನ ಸದಸ್ಯರನ್ನಾಗಿ ನೇಮಕ ಮಾಡಲು ಪ್ರಾಮಾಣಿಕ ಪ್ರಯತ್ನ ನೆಡೆಸುವುದಾಗಿ ತಿಳಿಸಿದರು.
ದಕ್ಷಿಣ ವಿಭಾಗದ ಸಂಚಾಲಕರಾಗಿ ಮುಹಮ್ಮದ್ ಅಬ್ಬಾಸ್, ಉತ್ತರ ವಿಭಾಗದ ಸಂಚಾಲಕರಾಗಿ ಖಾಜಾ ಹುಸೇನ್ ಅಟ್ನೂರ್, ಮಹಿಳಾ ಸಹ ಸಂಚಾಲಕರಾಗಿ ನಫೀಸ ಜಾಕಿ ಅವರಿಗೆ ನೇಮಕ ಆದೇಶ ಪತ್ರವನ್ನು ಇದೇ ಸಂದರ್ಭದಲ್ಲಿ ವಿತರಿಸಲಾಯಿತು.

Join Whatsapp