ಹನುಮಾನ್ ದೇವಾಲಯ ಸ್ಥಳಾಂತರಿಸಲು ಮುಸ್ಲಿಂ ವ್ಯಕ್ತಿಯಿಂದ ಭೂಮಿ ದಾನ

Prasthutha|

ಲಕ್ನೋ: ರಾಷ್ಟ್ರೀಯ ಹೆದ್ದಾರಿಯ ವಿಸ್ತರಣೆಗೆ ಅಡ್ಡಿಯಾಗುತ್ತಿರುವ ದೇವಾಲಯವನ್ನು ಸ್ಥಳಾಂತರಿಸಲು ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಜಮೀನಿನ ಒಂದು ಭಾಗವನ್ನು ಜಿಲ್ಲಾಡಳಿತಕ್ಕೆ ದಾನ ಮಾಡಿರುವ ಘಟನೆ ಉತ್ತರ ಪ್ರದೇಶದ ಶಹಜಹಾನ್ ಪುರದಲ್ಲಿ ನಡೆದಿದೆ.

- Advertisement -

ಶಹಜಹಾನ್ ಪುರದ ತಿಲ್ಹಾರ್ ಪಟ್ಟಣದ ಕಚ್ಚಿಯಾನಿ ಖೇಡದಲ್ಲಿರುವ ಹನುಮಾನ್ ದೇವಸ್ಥಾನವನ್ನು ರಸ್ತೆ ಅಗಲೀಕರಣದ ಕಾರಣ ಸ್ಥಳಾಂತರಿಸುವುದು ಅನಿವಾರ್ಯವಾಗಿತ್ತು. ಹಾಗಾಗಿ ದೇವಾಲಯ ಸ್ಥಳಾಂತರಿಸಲು ಬಾಬು ಅಲಿ ಎಂಬವರು ತಮ್ಮ ಜಮೀನಿನ ಒಂದು ಭಾಗವನ್ನು ಜಿಲ್ಲಾಡಳಿತಕ್ಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ದೆಹಲಿ ಲಕ್ನೋ ನಡುವೆ ಹಾದು ಹೋಗುತ್ತಿರುವ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಯೋಜನೆಗೆ ಕಚ್ಚಿಯಾನಿ ಖೇಡಾ ಗ್ರಾಮದಲ್ಲಿ ದೇಗುಲ ಇರುವುದರಿಂದ ಅಡಚಣೆ ಎದುರಾಗಿತ್ತು. ಇದನ್ನು ಮನಗಂಡ ಅಲಿಯವರು ಸ್ವತಃ ಮುಂದೆ ಬಂದು ತಮ್ಮ ಸ್ವಂತ ಭೂಮಿಯಲ್ಲಿ ಒಂದು ಬಿಘಾ (17,000 ಚದರ ಅಡಿ) ದಾನ ಮಾಡಿದ್ದು, ಭೂ ದಾಖಲೆಗಳನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರ ಮಾಡಿದ್ದಾರೆ. ಇದರಿಂದಾಗಿ ದೇಗುಲವನ್ನು ಅಲ್ಲಿಗೆ ಸ್ಥಳಾಂತರಿಸಬಹುದಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ರಾಮಸೇವಕ್ ದ್ವಿವೇದಿ ಹೇಳಿದ್ದಾರೆ.

- Advertisement -

ಹಿಂದೂ-ಮುಸ್ಲಿಂ ಐಕ್ಯತೆಯನ್ನು ಮತ್ತಷ್ಟು ಬಲಪಡಿಸಲು ಈ ಕಾರ್ಯ ಪ್ರೇರಣೆಯಾಗಲಿ ಎಂದು ಬಾಬು ಅಲಿ ಹೇಳಿದ್ದಾರೆ.

ಭೂಮಿಯನ್ನು ಆಡಳಿತಕ್ಕೆ ವರ್ಗಾಯಿಸುವ ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡಿವೆ ಎಂದು ತಿಲ್ಹಾರ್ ಉಪ ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಶಿ ಕೃಷ್ಣ ತಿಲ್ಹಾರ್ ಅವರು ತಿಳಿಸಿದ್ದಾರೆ.



Join Whatsapp