ಲಕ್ನೋ: ಹತ್ರಾಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಯುಎಪಿಎ ಕಾಯ್ದೆ ಅಡಿಯಲ್ಲಿ ಬಂಧಿತರಾಗಿ ಸುಮಾರು 757 ದಿನಗಳನ್ನು ಜೈಲಿನಲ್ಲಿ ಕಳೆದಿರುವ ರಾಂಪುರ ನಿವಾಸಿ, ಕ್ಯಾಬ್ ಚಾಲಕ ಮುಹಮ್ಮದ್ ಆಲಂ ಅವರು ತಮ್ಮ ವಿರುದ್ಧದ ಎಲ್ಲಾ ಪ್ರಕರಣಗಳಲ್ಲಿ ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾಗಲು ಸಜ್ಜಾಗಿದ್ದಾರೆ.
31 ವರ್ಷದ ಮುಹಮ್ಮದ್ ಆಲಂ ಅವರನ್ನು ಅಕ್ಟೋಬರ್ 5, 2020ರಂದು ಪತ್ರಕರ್ತ ಸಿದ್ದೀಕ್ ಕಪ್ಪನ್ ಮತ್ತು ಇಬ್ಬರು ಮುಸ್ಲಿಮರೊಂದಿಗೆ ಸೇರಿಕೊಂಡು ಹತ್ರಾಸ್’ನಲ್ಲಿ ಮೇಲ್ಜಾತಿಯವರಿಂದ ಅತ್ಯಾಚಾರಕ್ಕೊಳಗಾಗಿ, ಕೊಲೆಯಾದ ದಲಿತ ಬಾಲಕಿಯ ಕುಟುಂಬವನ್ನು ಭೇಟಿಯಾಗಲು ಹೋಗುತ್ತಿದ್ದಾಗ ಬಂಧಿಸಲಾಗಿತ್ತು. ಅವರ ವಿರುದ್ಧ ಕರಾಳ ಯುಎಪಿಎ ಕಾಯ್ದೆ ಮತ್ತು ದೇಶದ್ರೋಹ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಈ ಮುಸ್ಲಿಮ್ ಯುವಕರು ಮತೀಯ ವೈಷಮ್ಯವನ್ನು ಉಂಟುಮಾಡಲು ಮತ್ತು ದೇಶದಲ್ಲಿ ಭಯೋತ್ಪಾದನೆ ಚಟುವಟಿಕೆ ನಡೆಸಲು ಸಂಚು ರೂಪಿಸಿದ್ದರು ಎಂದು ಸರ್ಕಾರ ಆರೋಪಿಸಿತ್ತು.
ಇದಕ್ಕೆ ಸಂಬಂಧಿಸಿದಂತೆ ಆಗಸ್ಟ್ 23ರಂದು ಅಲಹಾಬಾದ್ ಹೈಕೋರ್ಟ್’ನ ಪೀಠವು ಯುಎಪಿಎ ಪ್ರಕರಣದಲ್ಲಿ ಮುಹಮ್ಮದ್ ಆಲಂ ಎಂಬವರಿಗೆ ಜಾಮೀನು ನೀಡಿದೆ. ಈ ಆರೋಪಕ್ಕೆ ಸಂಬಂಧಿಸಿದಂತೆ ಅವರ ಬಳಿಯಿಂದ ಯಾವುದೇ ಲೇಖನ ಅಥವಾ ಪುರಾವೆಗಳನ್ನು ಪತ್ತೆಹಚ್ಚಲು ತನಿಖಾಧಿಕಾರಿಗಳು ವಿಫಲವಾಗಿದ್ದರು.
ಈ ಮಧ್ಯೆ ಅಕ್ಟೋಬರ್ 31ರಂದು ಇಡಿ ಅವರ ವಿರುದ್ಧ ದಾಖಲಿಸಿದ್ದ ಪ್ರಕರಣದಲ್ಲಿ ಲಕ್ನೋ ಪಿಎಂಎಲ್ಎ ನ್ಯಾಯಾಲಯವು ಮುಹಮ್ಮದ್ ಆಲಂಗೆ ಜಾಮೀನು ನೀಡಿತ್ತು. ಕಳೆದ ತಿಂಗಳ ಭಾರತದ ಸುಪ್ರೀಮ್ ಕೋರ್ಟ್’ನಿಂದ ಯುಎಪಿಎ ಪ್ರಕರಣದಲ್ಲಿ ಜಾಮೀನು ಪಡೆದಿದ್ದ ಈ ಪ್ರಕರಣ ಮತ್ತೊಬ್ಬ ಆರೋಪಿ ಸಿದ್ದೀಕ್ ಕಪ್ಪನ್’ಗೆ ಪಿಎಂಎಲ್ಎ ಪ್ರಕರಣದಲ್ಲಿ ಜಾಮೀನು ನಿರಾಕರಿಸಲಾಗಿದೆ.
ಶೂರಿಟಿ ಮತ್ತು ಜಾಮೀನಿಗೆ ಸಂಬಂಧಿಸಿದ ಬಾಂಡ್’ಗಳನ್ನು ಒದಗಿಸಿದ ಬಳಿಕ ಆಲಂ ಅವರನ್ನು ಬಿಡುಗಡೆಗೊಳಿಸಲಾಗುತ್ತದೆ ಎಂದು ಆಲಂ ಪರ ವಕೀಲರು ಮಾಧ್ಯಮಗಳಿಗೆ ತಿಳಿಸಿದ್ದಾರೆ.