ಮಂಗಳೂರು: ಸುರತ್ಕಲ್ ಠಾಣೆ ವ್ಯಾಪ್ತಿಯ ಕಾಟಿಪಳ್ಳ ಆರನೇ ಬ್ಲಾಕ್ ನಲ್ಲಿ ಮದರಸಾ ಬಿಟ್ಟು ಮನೆಗೆ ತೆರಳುತ್ತಿದ್ದ ಅಪ್ರಾಪ್ತ ಬಾಲಕನೊಬ್ಬನಿಗೆ ದುಷ್ಕರ್ಮಿಗಳು ಹಲ್ಲೆ ನಡೆಸಿ ಪರಾರಿಯಾದ ಘಟನೆ ಕಳೆದ ರಾತ್ರಿ ನಡೆದಿದೆ.
ಹಲ್ಲೆಗೊಳಗಾದ ಬಾಲಕನನ್ನು ಕಾಟಿಪಳ್ಳ ನಿವಾಸಿ ಅಬ್ದುಲ್ ಉಮರ್ ಎಂಬವರ ಪುತ್ರ ಶಯಾನ್ ಎಂ ದು ಗುರುತಿಸಲಾಗಿದ್ದು, ಆರನೇ ಬ್ಲಾಕ್ ತೌಯಿಬಾ ಮಸೀದಿಯ 6ನೇ ತರಗತಿಯ ವಿದ್ಯಾರ್ಥಿ ಎಂದು ತಿಳಿದು ಬಂದಿದೆ. ಬಾಲಕ ಮದರಸ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಕೈಯ್ಯಲ್ಲಿ ನೂಲು ಧರಿಸಿ, ನಾಮ ಹಾಕಿದ ಇಬ್ಬರು ಬೈಕ್ ನಲ್ಲೇ ಬಾಲಕನನ್ನು ಎಳೆದಾಡಿ ಹಲ್ಲೆಗೈದಿದ್ದಾರೆ. ಈ ವೇಳೆ ಬಾಲಕ ಧರಿಸಿದ್ದ ಮದರಸದ ಸಮವಸ್ತ್ರ ಹರಿದ ಕಾರಣ ದುಷ್ಕರ್ಮಿಗಳ ಕೈಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಯಿತು ಎನ್ನಲಾಗಿದೆ.
ಈ ಸಂಬಂಧ ಶಯಾನ್ ಪೋಷಕರು ಸುರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿ ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ.