ಮುರುಘಾ ಶ್ರೀ ಅತ್ಯಾಚಾರ ಪ್ರಕರಣ: ಸರ್ಕಾರ, ವಿರೋಧ ಪಕ್ಷಗಳು ನಾಚಿಕೆ ಬಿಟ್ಟು ಆರೋಪಿ ಪರ ನಿಂತಿವೆ- ಅಫ್ಸರ್ ಕೊಡ್ಲಿಪೇಟೆ

Prasthutha|

ಬೆಂಗಳೂರು: ಪೋಕ್ಸೊ ಕಾಯ್ದೆ ಅಡಿಯಲ್ಲಿ ಮಾತ್ರವಲ್ಲದೆ ಎಸ್ಸಿ/ಎಸ್ಟಿ ಅಟ್ರಾಸಿಟಿ ಕಾಯ್ದೆ ಅಡಿಯಲ್ಲಿಯೂ ಪ್ರಕರಣ ದಾಖಲಾಗಿದ್ದರೂ ಮುರುಘಾ ಶ್ರೀಗಳನ್ನು ಬಂಧಿಸಲು ಈ ಸರ್ಕಾರ ಏಳು ದಿನ ತೆಗೆದುಕೊಂಡಿದೆ. ಇದು ಸಮಾಜಕ್ಕೆ ಎಂತಹ ಸಂದೇಶವನ್ನು ಕೊಡುತ್ತದೆ? ಅಷ್ಟೇ ಅಲ್ಲದೆ ಈ ಪ್ರಕರಣದಲ್ಲಿ ಸರ್ಕಾರ ಮತ್ತು ವಿರೋಧ ಪಕ್ಷಗಳು ನಾಚಿಕೆ ಬಿಟ್ಟು ಆರೋಪಿ ಪರ ನಿಂತಿವೆ ಎಂದು ಎಸ್ ಡಿಪಿಐ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಐಪಿಸಿ ಸೆಕ್ಷನ್ 376 (2) ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ, ಸೆಕ್ಷನ್ 376 (3) ಸಾಮೂಹಿಕ ಅತ್ಯಾಚಾರ, ಪೋಸ್ಕೋ ಕಾಯ್ದೆಯ ಸೆಕ್ಷನ್ 5(f) ಧಾರ್ಮಿಕ ಸಂಸ್ಥೆ ಅಥವಾ ಶಿಕ್ಷಣ ಸಂಸ್ಥೆಗಳಲ್ಲಿ ಅತ್ಯಾಚಾರ. ಜೊತೆಗೆ ಎಸ್ಸಿ/ಎಸ್ಟಿ ಅಟ್ರಾಸಿಟಿ ಕಾಯ್ದೆ ಇಷ್ಟೂ ಗಂಭೀರ ಕಾಯ್ದೆಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದರೂ ಮತ್ತು ಎಸ್ಸಿ/ಎಸ್ಟಿ ಅಟ್ರಾಸಿಟಿ ಕಾಯ್ದೆಯ ಸೆಕ್ಷನ್ 18ರ ಪ್ರಕಾರ ಇದು ಜಾಮೀನುರಹಿತ ಪ್ರಕರಣವಾಗಿದ್ದರೂ ಈ ಸರ್ಕಾರ ಮುಖ್ಯ ಆರೋಪಿಯನ್ನು ಬಂಧಿಸಲು ಇಷ್ಟು ವಿಳಂಬ ಮಾಡಿದ್ದಾದರೂ ಏಕೆ? ಇಂತಹ ಪ್ರಕರಣದಲ್ಲಿ ಸಾಮಾನ್ಯ ಪ್ರಜೆ ಏನಾದರೂ ಸಿಲುಕಿಕೊಂಡಿದ್ದರೆ ನಿಮಿಷಗಳಲ್ಲಿ ಬಂಧಿಸಲಾಗಿರುತ್ತಿತ್ತು. ಶ್ರೀಗಳ ರಾಜಕೀಯ ನಂಟು ಮತ್ತು ಅವರು ಪ್ರಬಲ ಸಮಾಜದಿಂದ ಬಂದಿರುವವರು ಎನ್ನುವ ಕಾರಣಕ್ಕೆ ಅವರ ಬಂಧನಕ್ಕೆ ಇಷ್ಟು ದೀರ್ಘ ವಿಳಂಬ ಮಾಡಲಾಯಿತು ಎಂದು ಅಫ್ಸರ್ ಕೊಡ್ಲಿಪೇಟೆ ಆರೋಪಿಸಿದರು.

ಮೀನಾ ಮೇಷ ಎಣಿಸಿ ನಿನ್ನೆ ತಡ ರಾತ್ರಿ ಬೇರೆ ವಿಧಿಯೇ ಇಲ್ಲದ ಪರಿಸ್ಥಿತಿಯಲ್ಲಿ ಅವರನ್ನು ಒಲ್ಲದ ಮನಸ್ಸಿನಿಂದ ಬಂಧಿಸಲಾಗಿದೆ. ಈ ವಿಳಂಬವನ್ನು ಶ್ರೀಗಳನ್ನು ವೈದ್ಯಕೀಯ ತಪಾಸಣೆಯಲ್ಲಿ ಸಿಗಬಹುದಾದ ಸಾಕ್ಷಿಗಳಿಂದ ಪಾರು ಮಾಡುವ ಮತ್ತು ನಾಶ ಮಾಡುವ ಉದ್ದೇಶದಿಂದ ಮಾಡಲಾಗಿದೆ. ಏಕೆಂದರೆ, ಅತ್ಯಾಚಾರ ನಡೆದ ತಕ್ಷಣ ಸಿಗಬಹುದಾದ ವೈದ್ಯಕೀಯ ಸಾಕ್ಷಿಗಳಿಗೂ, ಏಳು ದಿನಗಳ ನಂತರ ಸಿಗಬಹುದಾದ ಸಾಕ್ಷಿಗಳಿಗೂ ಭೂಮಿ ಆಕಾಶದ ಅಂತರವಿರುತ್ತದೆ ಎಂದು ಅವರು ಹೇಳಿದರು.

- Advertisement -

ಪ್ರಕರಣದಲ್ಲಿ ಬಸವರಾಜ ಬೊಮ್ಮಾಯಿ ಅವರ ಬಿಜೆಪಿ ಸರ್ಕಾರ ನಡೆದುಕೊಂಡಿರುವ ರೀತಿಯ ಬಗ್ಗೆ ಅಫ್ಸರ್ ಕೊಡ್ಲಿಪೇಟೆ ಅವರು ಆಕ್ರೋಶ ವ್ಯಕ್ತಪಡಿಸಿದರು. ಮುಖ್ಯಮಂತ್ರಿ, ಗೃಹಮಂತ್ರಿ ಎಲ್ಲರೂ ಶ್ರೀಗಳು ನಿರಪರಾಧಿಗಳಾಗಿ ಹೊರ ಬರುತ್ತಾರೆ ಎಂದು ಹೇಳಿರುವುದು ಎಷ್ಟು ಸರಿ? ತಪ್ಪು ಮಾಡಿದ್ದರೆ ಶಿಕ್ಷೆ ಆಗಲಿ ಎಂದು ಏಕೆ ಹೇಳುತ್ತಿಲ್ಲ? ಎಂದು ಅವರು ಪ್ರಶ್ನೆ ಮಾಡಿದರು.
ಸರ್ಕಾರ ಸ್ಪಷ್ಟವಾಗಿ ಶ್ರೀಗಳ ರಕ್ಷಣೆಗೆ ನಿಂತಿದೆ ಎಂದು ಅವರು ಆರೋಪಿಸಿದ ಅವರು, ಪೊಲೀಸರು ಶ್ರೀಗಳ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುತ್ತಿರುವಾಗ ಇದೇ ಪೊಲೀಸರು ಅವರ ವಿರುದ್ಧ ಯಾವ ರೀತಿಯ ತನಿಖೆ ಮಾಡಲಿದ್ದಾರೆ ಎಂದು ನೀವೇ ಊಹಿಸಬಹುದು. ನಿವೃತ್ತ ಕಮಿಷನರ್ ಮಿರ್ಜಿಯವರು ಬಹಿರಂಗವಾಗಿ ಶ್ರೀಗಳ ಬೆಂಬಲಕ್ಕೆ ನಿಂತಿದ್ದಾರೆ. ಜೊತೆಗೆ ಶಾಸಕರು, ಸಂಸದರು ಇತರೆ ಮಠದ ಮಠಾಧೀಶರು ಬಹಿರಂಗವಾಗಿ ಶ್ರೀಗಳ ಬೆಂಬಲಕ್ಕೆ ನಿಂತಿರುವುದು ಈ ಪ್ರಕರಣ ಹಳ್ಳ ಹಿಡಿಯಲಿದೆ ಎಂದು ನಮಗೆ ಸೂಚನೆಗಳನ್ನು ನೀಡುತ್ತದೆ. ಹಾಗಾಗಿ ಈ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಎಸ್ ಡಿಪಿಐ ಒತ್ತಾಯಿಸುತ್ತದೆ ಎಂದು ಅವರು ಹೇಳಿದರು.

ಲಿಂಗಾಯತರ ಮತ ಕಳೆದುಕೊಳ್ಳುವ ಭೀತಿಯಲ್ಲಿ ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಈ ವಿಚಾರವಾಗಿ ಮೌನ ವಹಿಸಿವೆ. ಪ್ರತಿಯೊಂದು ವಿಚಾರದಲ್ಲೂ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುವ ಸಿದ್ದರಾಮಯ್ಯ ಮೌನಕ್ಕೆ ಶರಣಾಗಿರುವುದು ನಾಚಿಕೆಗೇಡಿನ ಸಂಗತಿ ಎಂದ ಅವರು, ಡಿಕೆ ಶಿವಕುಮಾರ್ ಶ್ರೀಗಳು ಉತ್ತಮ ಕೆಲಸ ಮಾಡಿಕೊಂಡು ಬಂದಿದ್ದಾರೆ ಎಂದು ಹೇಳಿರುವುದರ ಮೂಲಕ ಅವರು ಕೂಡ ಆರೋಪಿಯ ಪರವೇ ಇದ್ದಾರೆ ಎಂದು ತೋರಿಸಿಕೊಟ್ಟಿದ್ದಾರೆ. ಕಾಂಗ್ರೆಸ್ ಪಕ್ಷದ ಈ ನಿಲುವು, ಸರ್ಕಾರ ಮತ್ತು ವಿರೋಧ ಪಕ್ಷಗಳು ಒಟ್ಟಾಗಿ ಆರೋಪಿಯ ಪರ ನಿಂತಿವೆ ಎಂದು ಸ್ಪಷ್ಟವಾಗಿ ತೋರಿಸುತ್ತದೆ ಎಂದರು.

ನಿರ್ಭಯ ಪ್ರಕರಣದಲ್ಲಿ ಲಕ್ಷಗಳ ಸಂಖ್ಯೆಯಲ್ಲಿ ಬೀದಿಗೆ ಬಂದಿದ್ದ ಜನ ಈ ಒಂದು ಪ್ರಕರಣದಲ್ಲಿ ತಣ್ಣಗೆ ಇರುವುದನ್ನು ನೋಡಿದರೆ ಆಶ್ಚರ್ಯವಾಗುತ್ತಿದೆ. ಸಮಾಜದಲ್ಲಿ ಪ್ರಭಾವಿಗಳು ಮಾಡುವ ಅಪರಾಧಗಳಿಗೆ ಜಾತಿಯ ಕಾರಣಕ್ಕೆ ಅಥವಾ ಭಕ್ತಿಯ ಕಾರಣಕ್ಕೆ ಯಾವ ರೀತಿಯ ಪರೋಕ್ಷ ಬೆಂಬಲ ಸಿಗುತ್ತದೆ ಎನ್ನುವುದಕ್ಕೆ ಈ ಪ್ರಕರಣವೇ ಸಾಕ್ಷಿ. ಸಂತ್ರಸ್ತ ಮಕ್ಕಳ ಪರವಾಗಿ ಯಾರೂ ಕೂಡ ಧ್ವನಿಯಾಗದೆ ಕೇವಲ ಶ್ರೀಗಳನ್ನು ರಕ್ಷಿಸುವ ಉದ್ದೇಶದಿಂದ ಇದೊಂದು ಪಿತೂರಿ ಎಂದು ಹೇಳುವ ಮೂಲಕ ಹೆಣ್ಣು ಮಕ್ಕಳ ಗೌರವಕ್ಕೆ ಕಿಂಚಿತ್ತು ಬೆಲೆ ಇಲ್ಲ ಎನ್ನುವ ರೀತಿಯಲ್ಲಿ ಎಲ್ಲರೂ ನಡೆದುಕೊಳ್ಳುತ್ತಿದ್ದಾರೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ಈ ಪ್ರಕರಣದಲ್ಲಿ ಸಂತ್ರಸ್ತ ಹೆಣ್ಣು ಮಕ್ಕಳಿಗೆ ನ್ಯಾಯ ಸಿಗಬೇಕು ಮತ್ತು ಅಪರಾಧಿಗಳು ಯಾರೇ ಆಗಿದ್ದರೂ ಅವರಿಗೆ ಕಾನೂನಿನಲ್ಲಿ ಕಠಿಣ ಶಿಕ್ಷೆ ಆಗಬೇಕು ಎಂದು ಎಸ್ಡಿ ಪಿಐ ಒತ್ತಾಯಿಸುತ್ತದೆ ಎಂದು ಅಫ್ಸರ್ ಕೊಡ್ಲಿಪೇಟೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Join Whatsapp